
ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದ ಪ್ರಯುಕ್ತ ನಡೆಯುತ್ತಿದ್ದ ‘ಹಂಪಿ ಬೈ ಸ್ಕೈ’ ಹೆಲಿಕಾಪ್ಟರ್ ಯಾನವನ್ನು ಸೋಮವಾರ ಸಹ ಮುಂದುವರಿಸಲಾಗಿದ್ದು, ಜಿಲ್ಲೆಯಾದ್ಯಂತದಿಂದ ಆಯ್ಕೆ ಮಾಡಲಾದ 125 ಪೌರಕಾರ್ಮಿಕರಿಗೆ ಆಗಸದಿಂದ ವಿಶ್ವ ಪಾರಂಪರಿಕ ತಾಣ ತೋರಿಸಲಾಯಿತು.
ಜಿಲ್ಲಾ ಯೋಜನಾ ಕೋಶದ ಯೋಜನಾ ನಿರ್ದೇಶಕ ಮನೋಹರ್ ಅವರ ನೇತೃತ್ವದಲ್ಲಿ ಜಿಲ್ಲಾಡಳಿತವು ವಿಶೇಷ ಕಾಳಜಿ ವಹಿಸಿ ಪೌರಕಾರ್ಮಿಕರಿಗೆ ಹೆಲಿಕಾಪ್ಟರ್ ಯಾನ ಮಾಡಿಸಿತು. ಸಾಮಾನ್ಯ ಪ್ರಯಾಣ ದರ ₹3,800 ಬದಲಿಗೆ ₹2,800ಕ್ಕೆ ಪೌರ ಕಾರ್ಮಿಕರಿಗೆ ಯಾನ ಮಾಡಿಸಲಾಯಿತು. ನಗರ ಸ್ಥಳೀಯ ಸಂಸ್ಥೆಗಳ ಅನುದಾನವನ್ನು ಇದಕ್ಕಾಗಿ ಬಳಸಲು ಅವಕಾಶ ಕಲ್ಪಿಸಲಾಗಿದೆ.
252 ಬಾರಿ ಹಾರಾಟ: ಬೆಂಗಳೂರಿನ ಅವರೋಸ್ ಎಲ್‌ಎಲ್‌ಪಿ ಏವಿಯೇಶನ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಕಂಪನಿಯವರು ಏರ್‌ಬಸ್ ಕಂಪನಿಯ ವಿಟಿ–ಆರ್‌ಪಿಬಿ ಮತ್ತು ಏರ್‌ಬಸ್ ವಿಟಿ–ಯುಡಿವೈ ಹೆಲಿಕಾಪ್ಟರ್ ಮೂಲಕ ಈ ಸೇವೆ ಒದಗಿಸಿದ್ದರು. ನಾಲ್ಕು ದಿನಗಳಲ್ಲಿ 252 ಬಾರಿ ಈ ಎರಡೂ ಹೆಲಿಕಾಪ್ಟರ್‌ಗಳು ಹಂಪಿಯ ದರ್ಶನ ಮಾಡಿಸಿವೆ.
‘ಫೆ.12ರಂದು 25 ಯಾನ ನಡೆಸಲಾಗಿದ್ದರೆ, 13ರಂದು 25, 14ರಂದು 72, 15ರಂದು 96 ಹಾಗೂ 16ರಂದು 34 ಯಾನ ನಡೆಸಿವೆ’ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು. ಒಂದು ಬಾರಿ 6 ಮಂದಿಯನ್ನು ಕರೆದೊಯ್ಯಲು ಅವಕಾಶ ಇರುವ ಕಾರಣ 1,512ರಷ್ಟು ಮಂದಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿರುವ ಅಂದಾಜು ಮಾಡಲಾಗಿದೆ.
60 ಉಚಿತ ಬಸ್: ಉತ್ಸವದ ಮೂರೂ ದಿನ ಹೊಸಪೇಟೆಯಿಂದ ಹಂಪಿಗೆ 60 ಬಸ್‌ಗಳು ನಿರಂತರ ಓಡಾಟ ನಡೆಸಿ, ಜನರನ್ನು ಉಚಿತವಾಗಿ ಕರೆದೊಯ್ದಿವೆ. ಉದ್ಘಾಟನಾ ದಿನ ಜಿಲ್ಲೆಯ ವಿವಿಧ ಗ್ರಾಮಗಳಿಂದ 168 ಬಸ್‌ಗಳನ್ನು ಓಡಿಸಿ ಜನರನ್ನು ಉತ್ಸವಕ್ಕೆ ಕರೆತಂದು ಮತ್ತೆ ಅವರನ್ನು ಅವರ ಊರಿಗೆ ತಲುಪಿಸಲಾಗಿದೆ ಎಂದು ಕೆಕೆಆರ್‌ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಹುದ್ದಾರ ತಿಳಿಸಿದ್ದಾರೆ.
ಪ್ರಶಂಸೆ: ಈ ಬಾರಿ ಸಹ ಜಿಲ್ಲಾಡಳಿತ ಅತ್ಯುತ್ತಮವಾಗಿ ಹಂಪಿ ಉತ್ಸವ ಆಯೋಜಿಸಿದೆ, ವಿದ್ಯುತ್ ದೀಪಾಲಂಕಾರ ಹೆಚ್ಚಾಗಿ ಮಾಡಲಾಗಿದೆ. ಡ್ರೊನ್ ಶೋ ಬಹಳ ವಿಶಿಷ್ಟವಾಗಿತ್ತು ಎಂದು ಹತ್ತಾರು ಮಂದಿ ಹೇಳಿದರು.
60 ಮಕ್ಕಳಿಗೆ ಹೆಲಿಕಾಪ್ಟರ್ ಯಾನ ಮಾಡಿಸಿದ ಸಚಿವ ಜಮೀರ್ ಬಹುತೇಕ ಎಲ್ಲ ಮೇಳಗಳಲ್ಲಿ ಜಂಗುಳಿ ಜಿಲ್ಲಾಡಳಿತದಿಂದ ಮೊದಲ ದಿನ 8 ಸಾವಿರ ಮಂದಿಗೆ ಊಟ
ಹಂಪಿ ಉತ್ಸವ ಜನೋತ್ಸವವಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿತ್ತು. ಅದಕ್ಕಾಗಿ ನಾವೆಲ್ಲ ಒಂದು ತಂಡವಾಗಿ ಶ್ರಮಿಸಿದ್ದೇವೆ ಅಷ್ಟೇಕವಿತಾ ಎಸ್.ಮನ್ನಿಕೇರಿ ಜಿಲ್ಲಾಧಿಕಾರಿ
ಹಂಪಿ ಉತ್ಸವ ಯಶಸ್ವಿಯಾಗಿ ನೆರವೇರಿದೆ 60 ಮಂದಿ ಸರ್ಕಾರಿ ಶಾಲಾ ಮಕ್ಕಳಿಗೆ ಹೆಲಿಕಾಪ್ಟರ್ ಯಾನ ಮಾಡಿಸಿದ್ದರಿಂದ ನನಗೆ ಬಹಳ ಸಮಾಧಾನ ಆಗಿದೆಜಮೀರ್ ಅಹಮದ್ ಖಾನ್ ಜಿಲ್ಲಾ ಉಸ್ತುವಾರಿ ಸಚಿವ
ಕವಿತಾ ಎಸ್.ಮನ್ನಿಕೇರಿ ಜಿಲ್ಲಾಧಿಕಾರಿ 4 ಲಕ್ಷಕ್ಕೂ ಅಧಿಕ ಮಂದಿ ಭಾಗಿ ಮೂರು ದಿನದ ಹಂಪಿ ಉತ್ಸವದಲ್ಲಿ ಓಡಾಟ ನಡೆಸುವ ಜನರ ಸಹಿತ ಒಟ್ಟು 8 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿರುವ ಅಂದಾಜಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು. ಪೊಲೀಸ್ ಮೂಲಗಳು ಸಹ ಇದನ್ನೇ ದೃಢಪಡಿಸಿವೆ. ಅವರ ಪ್ರಕಾರ ಮೊದಲ ದಿನ ಕೊನೆಯ ದಿನ 2 ಲಕ್ಷ 2ನೇ ದಿನ 4 ಲಕ್ಷ ಮಂದಿ ಉತ್ಸವ ವೀಕ್ಷಿಸಿದ್ದಾರೆ. ಆದರೆ ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಹಂಪಿ ಉತ್ಸವವನ್ನು 4 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಮೊದಲ ದಿನ 80 ಸಾವಿರ 2ನೇ ದಿನ 2 ಲಕ್ಷ ಹಾಗೂ 3ನೇ ದಿನ 1.20 ಲಕ್ಷ ಮಂದಿ ವೀಕ್ಷಿಸಿದ್ದಾರೆ. 2024ರಲ್ಲಿ 5 ಲಕ್ಷ ಮಂದಿ 2024ರಲ್ಲಿ 4 ಲಕ್ಷ ಮಂದಿ ಹಂಪಿ ಉತ್ಸವ ವೀಕ್ಷಿಸಿದ್ದರು ಎಂದು ತಿಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.