ADVERTISEMENT

ಹಂಪಿ ಉತ್ಸವ: ಭಾವನೆಗಳನ್ನು ಗರಿ ಬಿಚ್ಚಿ ಹಾರಾಡಿಸಿದ ಪಟಗಳು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 11:03 IST
Last Updated 14 ಫೆಬ್ರುವರಿ 2026, 11:03 IST
   

ಹೊಸಪೇಟೆ (ವಿಜನಯನಗರ): ಹಂಪಿ ಉತ್ಸವದ ಅಂಗವಾಗಿ ಇಲ್ಲಿನ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಗಾಳಿಪಟ ಉತ್ಸವ ಭಾವನೆಗಳನ್ನು ಗರಿ ಬಿಚ್ಚಿ ಹಾರಿಸಿದ ಭಾವ ಮೂಡಿಸಿತು. ವಿವಿಧ ಬಣ್ಣದ ಗಾಳಿಪಟಗಳು ನೀಲಿ ಅಗಸದಲ್ಲಿ ಚಿತ್ತಾರ ಮೂಡಿಸಿ ಸಂತಸ ಉಂಟುಮಾಡಿದವು.

ಗುಜರಾತಿನ ಕರಣ್ ಲಕಮ್ ಮತ್ತು ನಿತೇಶ್ ಲಕಮ್ ಅವರು ಹಾರಿಸಿದ್ದ ಗೋರಿಲ್ಲ, ಆಕ್ಟೋಪಸ್ ಭಾನಂಗದಲ್ಲಿ ತೇಲುತ್ತಿದ್ದರೆ, ಅಗಸಕ್ಕೆ ಏರಿದ್ದ ಅಂಜನೇಯ ಚಿತ್ರವಿದ್ದ ಗಾಳಿಪಟದ ಜೊತೆಗೆ ಕುದುರೆಯೊಂದು ಗಾಳಿಯಲ್ಲಿ ತೇಲುತ್ತಿತ್ತು. ಇದರ ಮಧ್ಯ ದೊಡ್ಡ ಬಳ್ಳಾಪುರದ ಮುನಿಸ್ವಾಮಿ ಅವರು ಹಾರಿಸಿದ ಸ್ಟೆಂಟ್ ಕೈಟ್ ಎಲ್ಲರನ್ನೂ ತನ್ನತ್ತ ಸೆಳೆಯಿತು.

ಮುನಿಸ್ವಾಮಿ ಅವರು ಸ್ಟೆಂಟ್ ಕೈಟ್ ಗೆ ಕಟ್ಟಿದ್ದ ಎರಡು ದಾರಗಳನ್ನು ತಮ್ಮ ಕೈಯಲ್ಲಿ ಹಿಡಿದು ಅಗಸದಲ್ಲಿ ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಿಸುತ್ತಿದ್ದಾಗ ಅದರಿಂದ ಹೊಮ್ಮುತ್ತಿದ್ದ ಯಮಹ ಬೈಕ್ ಶಬ್ಬ ಜನರನ್ನು ನಿಬ್ಬೆರಗಾಗಿಸಿತು.

ADVERTISEMENT

ತ್ರಿವರ್ಣದ ಮೆರುಗು: 'ವಸುದೈವ ಕುಟುಂಬಕಂ’ ಸಂದೇಶ ಹೊತ್ತ ‘ಐ ಲವ್ ಮೈ ಇಂಡಿಯಾ’ ಬರಹದ ತ್ರಿವರ್ಣ ಗಾಳಿಪಟಗಳು ಹಾಗೂ ಸಮುದ್ರದ ಆಕ್ಟೋಪಸ್ ಮಾದರಿಯ ಗಾಳಿಪಟಗಳು ವಿಶೇಷವಾಗಿ ಮಕ್ಕಳನ್ನು ರಂಜಿಸಿದವು. ಯಾವುದೇ ಚೌಕಟ್ಟು ಇಲ್ಲದ ‘ಪ್ಯಾರಾಫಾಯಿಲ್’ ಮಾದರಿಯ ಈ ಗಾಳಿಪಟಗಳು ಗಾಳಿಯ ತೀವ್ರತೆಗೆ ತಕ್ಕಂತೆ ಆಕಾರ ಬದಲಿಸುತ್ತಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದವು.

ಗಾಳಿಪಟ ಉತ್ಸವ ನೋಡಲು ಮಕ್ಕಳು, ಯುವಕರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.ಯುವಕರು ಶಿಳ್ಳೆ ಹೊಡೆಯುತ್ತಾ ಗಾಳಿಪಟಗಳ ಹಾರಾಟಕ್ಕೆ ಸಾಕ್ಷಿಯಾದರೆ, ಪ್ರವಾಸಿಗರು ತಮ್ಮ ಮೊಬೈಲ್‌ಗಳಲ್ಲಿ ಈ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯಲು ಪೈಪೋಟಿ ನಡೆಸುತ್ತಿದ್ದರು.

ಬೆಂಗಳೂರಿನ ಕೈಟ್ ಕ್ಲಬ್, ಪಂಜಾಬ್,ಗುಜರಾತ್, ಒಡಿಶಾ, ಆಂಧ್ರಪ್ರದೇಶಗಳಿಂದ ಬಂದಿದ್ದ ಗಾಳಿಪಟ ಪಟುಗಳು ಹಾರಿಸಿದ ಬೃಹತ್ ಆಕೃತಿಗಳೇ ಪ್ರಮುಖ ಆಕರ್ಷಣೆಗಳಾಗಿದ್ದವು. ಸ್ಥಳೀಯರು, ಮಕ್ಕಳ ಕೈಯಲ್ಲಿ ಒಂದಿಷ್ಟು ಗಾಳಿಪಟಗಳು ಇದ್ದುದು ಬಿಟ್ಟರೆ ಹೊರಗಿನಿಂದ ಬಂದವರೇ ಅದರಲ್ಲಿ  ಗಮನ ಸೆಳೆದರು. ಹತ್ತಾರು ಅಡಿ ಉದ್ದದ ಕೆಂಪು ಬಣ್ಣದ ಆಕ್ಟೋಪಸ್, ಆಕಾಶದಲ್ಲಿ ಜಿಗಿಯುತ್ತಿರುವಂತೆ ಭಾಸವಾಗುತ್ತಿದ್ದ ಚಿರತೆ ಹಾಗೂ ಮಂಗನ ಗಾಳಿಪಟಗಳು ಮಕ್ಕಳನ್ನು ವಿಶೇಷವಾಗಿ ಆಕರ್ಷಿಸಿದವು

ವಿಶೇಷವಾಗಿ, 'ಐ ಲವ್‌ ಹಂಪಿ’ ಎಂಬ ಬರಹವಿದ್ದ ಗಾಳಿಪಟವು ಹಂಪಿಯ ಪರಂಪರೆಯ ಮೇಲಿರುವ ಗೌರವವನ್ನು ಸಾರುತ್ತಿದ್ದರೆ, ‘ಭಾರತ್‌’ ಎಂದು ಬರೆದಿದ್ದ ತ್ರಿವರ್ಣ ಗಾಳಿಪಟವು ಆಕಾಶದಲ್ಲಿ ಹಾರುವಾಗ ನೆರೆದಿದ್ದ ಜನರಲ್ಲಿ ದೇಶಪ್ರೇಮದ ಕಿಚ್ಚು ಹಚ್ಚಿತು.

ಶಾಸಕ ಎಚ್.ಆರ್.ಗವಿಯಪ್ಪ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ, ಉಪವಿಭಾಗಾಧಿಕಾರಿ ವಿವೇಕಾನಂದ, ನಗರಸಭೆ ಅಧ್ಯಕ್ಷ ಎನ್‌.ರೂಪೇಶ್‌ ಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ನಗರಸಭೆ ಆಯುಕ್ತ ಶಿವಕುಮಾರ್, ಬೆಂಗಳೂರಿನ ಕೈಟ್ ಕ್ಲಬ್‌ನ ವಿ.ಕೆ.ರಾವ್ ಸೇರಿದಂತೆ ಮತ್ತಿತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.