ADVERTISEMENT

ವಿಜಯನಗರ: ತುಂಗಾರತಿಯೊಂದಿಗೆ ಹಂಪಿ ಉತ್ಸವಕ್ಕೆ ನಾಂದಿ

ಹೆಲಿಕಾಪ್ಟರ್‌ ಸುತ್ತಾಟ ಆರಂಭ–ಸಂಜೆ ಹೊಸಪೇಟೆಯಲ್ಲಿ ವಸಂತ ವೈಭವ ಇಂದು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 7:29 IST
Last Updated 12 ಫೆಬ್ರುವರಿ 2026, 7:29 IST
ಹಂಪಿ ಉತ್ಸವ ನಿಮಿತ್ತ ಹಂಪಿಯ ಗಾಯತ್ರಿ ಪೀಠ ಸಮೀಪ ಶ್ರೀಕೃಷ್ಣದೇವರಾಯನ ದರ್ಬಾರ್‌ ಮಾದರಿಯ ಪ್ರಧಾನ ವೇದಿಕೆ ನಿರ್ಮಿಸಲಾಗಿದ್ದು, ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್‌ ವೇದಿಕೆ ವೀಕ್ಷಿಸಿದರು  –ಪ್ರಜಾವಾಣಿ ಚಿತ್ರ
ಹಂಪಿ ಉತ್ಸವ ನಿಮಿತ್ತ ಹಂಪಿಯ ಗಾಯತ್ರಿ ಪೀಠ ಸಮೀಪ ಶ್ರೀಕೃಷ್ಣದೇವರಾಯನ ದರ್ಬಾರ್‌ ಮಾದರಿಯ ಪ್ರಧಾನ ವೇದಿಕೆ ನಿರ್ಮಿಸಲಾಗಿದ್ದು, ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್‌ ವೇದಿಕೆ ವೀಕ್ಷಿಸಿದರು  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಾಗೂ ವಿಶ್ವ ಪಾರಂಪರಿಕ ತಾಣವಾಗಿರುವ ಹಂಪಿಯಲ್ಲಿ ಮೂರು ದಿನಗಳ ಹಂಪಿ ಉತ್ಸವಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಏಳೆಂಟು ಲಕ್ಷಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್‌ ಹೇಳಿದರು.

ಹಂಪಿಯ ಗಾಯತ್ರಿ ಮಂಟಪ ಸಮೀಪ ನಿರ್ಮಿಸಲಾಗಿರುವ ಎಂ.ಪಿ.ಪ್ರಕಾಶ್ ಪ್ರಧಾನ ವೇದಿಕೆಯ ನಿರ್ಮಾಣ ಕಾಮಗಾರಿಯನ್ನು ಬುಧವಾರ ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಆರತಿಯೊಂದಿಗೆ ಉತ್ಸವಕ್ಕೆ ನಾಂದಿ ಹಾಡಲಾಗುತ್ತಿದೆ. ಅದಕ್ಕಾಗಿ ಎಲ್ಲ ಸಿದ್ಧತೆ ನಡೆದಿದೆ ಎಂದರು.

ಶುಕ್ರವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿ ಸಾಂಸ್ಕೃತಿಕ ವೈಭವಕ್ಕೆ ಚಾಲನೆ ನೀಡುವರು. ಇಲ್ಲೇ ವಾಸ್ತವ್ಯ ಹೂಡಿ ಶನಿವಾರ ಹಾವೇರಿಯಲ್ಲಿ ನಡೆಯುವ ಸರ್ಕಾರದ 1,000 ದಿನಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುವರು ಎಂದು ಸಚಿವರು ತಿಳಿಸಿದರು.

ADVERTISEMENT

​ಎಂ.ಪಿ. ಪ್ರಕಾಶ್ ವೇದಿಕೆ ಮುಂಭಾಗ 50 ಸಾವಿರ ಆಸನದ ವ್ಯವಸ್ಥೆ ಮಾಡಲಾಗುತ್ತದೆ, ಹೆಚ್ಚುವರಿಯಾಗಿ 15 ಸಾವಿರ ಆಸನಗಳ ವ್ಯವಸ್ಥೆ ನಡೆಯಲಿದೆ. ಇತರ ಎರಡು ವೇದಿಕೆಗಳಲ್ಲಿ ಸಹ ಸೆಲೆಬ್ರೆಟಿಗಳು ಕಾರ್ಯಕ್ರಮ ನೀಡುವುದರಿಂದ ಒಂದೇ ವೇದಿಕೆಯಲ್ಲಿ ದಟ್ಟಣೆ ಆಗುವುದು ತಪ್ಪಲಿದೆ. ಜತೆಗೆ ಇತರ ವೇದಿಕೆಗಳ ಜನರ ಆಕರ್ಷಣೆ ಹೆಚ್ಚಲಿದೆ ಎಂದು ಸಚಿವರು ತಿಳಿಸಿದರು.

​ವಿದ್ಯುತ್ ಅಲಂಕಾರ: ಹಂಪಿ ಮತ್ತು ಸುತ್ತಮುತ್ತಲಿನ ಸುಮಾರು 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ​ಭದ್ರತೆಗೆ ಸುಮಾರು 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ ಒಬ್ಬ ಎಸ್‌ಪಿ, 8 ಎಎಸ್‌ಪಿ, 15 ಡಿವೈಎಸ್‌ಪಿ, 61 ಇನ್ಸ್‌ಪೆಕ್ಟರ್‌ಗಳು ಒಳಗೊಂಡಿದ್ದಾರೆ ಎಂದರು.

​ಉಚಿತ ಊಟದ ವ್ಯವಸ್ಥೆ: ಭಕ್ತಾದಿಗಳು ಮತ್ತು ಸಾರ್ವಜನಿಕರಿಗಾಗಿ ಕೃಷ್ಣ ದೇವಸ್ಥಾನದ ಬಳಿ ಸರ್ಕಾರದಿಂದ ಉಚಿತ ಊಟ ಮತ್ತು ತಿಂಡಿಯ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಜಮೀರ್ ಹೇಳಿದರು.

‘​ಉತ್ಸವಕ್ಕಾಗಿ ಸುಮಾರು ₹14 ರಿಂದ 15 ಕೋಟಿ ಬಜೆಟ್ ಮೀಸಲಿಡಲಾಗಿದೆ, ನನ್ನ ಅಧಿಕಾರ ಅವಧಿಯಲ್ಲಿ ವರ್ಷದಿಂದ ವರ್ಷಕ್ಕೆ ಉತ್ಸವ ಹೆಚ್ಚೆಚ್ಚು ಆಕರ್ಷಣೀಯವಾಗಿಯೇ ಸಾಗಿದೆ, ಹೀಗಾಗಿ ಈ ಬಾರಿ ಕಳೆದ ಬಾರಿಗಿಂತಲೂ ಹೆಚ್ಚು ಜನರನ್ನು ಆಕರ್ಷಿಸುವ ವಿಶ್ವಾಸ ಇದೆ’ ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್‌ಪಿ ಎಸ್‌.ಜಾಹ್ನವಿ, ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್‌ ಮೊಹಮ್ಮದ್ ಅಲಿ ಅಕ್ರಂ ಷಾ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿರಾಜ್ ಶೇಖ್‌, ಉಪಾಧ್ಯಕ್ಷ ಕೆ.ಎಂ.ಹಾಲಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ.ಶಿವಮೂರ್ತಿ, ವಕ್ಫ್ ಮಂಡಳಿ ಅಧ್ಯಕ್ಷ ಕೆ.ಎಸ್‌.ದಾದಾಪೀರ್‌, ಬ್ಲಾಕ್‌  ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್ ಇತರರು ಇದ್ದರು.

ಶಾಸಕರೇ ಅಧ್ಯಕ್ಷರು

‘ಶಾಸಕ ಎಚ್‌.ಆರ್‌.ಗವಿಯಪ್ಪ ಅವರೇ ಇಡೀ ಉತ್ಸವದ ಅಧ್ಯಕ್ಷರು. ಉತ್ಸವದಲ್ಲಿ ಅವರು ಸಹ ತೊಡಗಿಡಿಕೊಂಡಿದ್ದಾರೆ. ನಾನೇ ನಿಗದಿತ ಸಮಯಕ್ಕಿಂತ ಸ್ವಲ್ಪ ಬೇಗನೆ ಇಲ್ಲಿಗೆ ಬಂದೆ ಅವರು ಇನ್ನೇನು 15 ನಿಮಿಷದಲ್ಲಿ ಬಂದು ಸೇರುತ್ತಾರೆ’ ಎಂದು ಸಚಿವರು ಹೇಳಿದರು. ಉತ್ಸವದಿಂದ ಶಾಸಕರನ್ನು ಏಕೆ ಹೊರಗೆ ಇಟ್ಟಿದ್ದೀರಿ ಎಂದು ಕೇಳಿದಾಗ ಸಚಿವರು ಈ ರೀತಿ ಹೇಳಿದರು. ಆದರೆ ಶಾಸಕರು ಕೊನೆಯವರೆಗೂ ಬರಲೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.