ADVERTISEMENT

ಬಿಸಿಗಾಳಿ ಬಲೂನ್‌ನಲ್ಲಿ ಹಂಪಿ ವೀಕ್ಷಣೆ: ಎತ್ತರದಿಂದ ಸ್ಮಾರಕಗಳನ್ನು ನೋಡುವ ಅವಕಾಶ

ಎಂ.ಜಿ.ಬಾಲಕೃಷ್ಣ
Published 13 ಫೆಬ್ರುವರಿ 2024, 5:56 IST
Last Updated 13 ಫೆಬ್ರುವರಿ 2024, 5:56 IST
ಹಂಪಿಯ ಸ್ಮಾರಕಗಳ ಮೇಲೆ ನಿಧಾನವಾಗಿ ಚಲಿಸಿದ ಬಿಸಿಗಾಳಿ ಬಲೂನ್‌
ಹಂಪಿಯ ಸ್ಮಾರಕಗಳ ಮೇಲೆ ನಿಧಾನವಾಗಿ ಚಲಿಸಿದ ಬಿಸಿಗಾಳಿ ಬಲೂನ್‌    

ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿಯ ಸ್ಮಾರಕಗಳನ್ನು ಬಿಸಿಗಾಳಿ ತುಂಬಿದ ಬಲೂನ್‌ನಲ್ಲಿ (ಹಂಪಿ ಬೈ ಬಲೂನ್‌) ವೀಕ್ಷಿಸುವ ಸೌಲಭ್ಯ ಆರಂಭವಾಗಿದೆ.

ಬೆಳಿಗ್ಗೆ 6.30 ರಿಂದ 7.30ರವರೆಗೆ ಮಾತ್ರ ಈ ಸೌಲಭ್ಯವನ್ನು ಇವಾಲ್ವ್ ಬ್ಯಾಕ್ (ಆರೆಂಜ್ ಕೌಂಟಿ) ಹೋಟೆಲ್ ಕಲ್ಪಿಸಿದೆ. ಹೆಲಿಕಾಪ್ಟರ್‌ನಿಂದ ‘ಹಂಪಿ ಬೈ ಸ್ಕೈ’ ವೀಕ್ಷಣೆಗೆ ಸಿಕ್ಕ ಸ್ಪಂದನೆಯಿಂದ ಇದು ಪ್ರೇರಣೆ ಪಡೆದಿದೆ.

‘ಹಂಪಿಗೆ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ‘ಹಂಪಿ ಬೈ ಬಲೂನ್‌’ ಆರಂಭಿಸಲಾಗಿದೆ. ವೀಕ್ಷಣೆಗಾಗಿ ಮುಂದಿನ ಮೂರು ದಿನಗಳಿಗೆ ಪ್ರವಾಸಿಗರು ಈಗಾಗಲೇ ತಮ್ಮ ಹೆಸರು ನೋಂದಾಯಿಸಿದ್ದಾರೆ. ಸದ್ಯಕ್ಕೆ ಪೈಲಟ್ ಸಹಿತ ಏಕಕಾಲಕ್ಕೆ ಒಟ್ಟು 7 ಮಂದಿ ಬಲೂನ್‌ ಬುಟ್ಟಿಯಲ್ಲಿ ಸಾಗಬಹುದು. ಬೇಡಿಕೆ ಹೆಚ್ಚಾದರೆ, ಮುಂದಿನ ದಿನಗಳಲ್ಲಿ ಏಕಕಾಲಕ್ಕೆ 10 ಮಂದಿ ವೀಕ್ಷಿಸುವಂತಹ ಸಾಮರ್ಥ್ಯದ ಬಲೂನ್ ಬುಟ್ಟಿಯನ್ನು ಸಿದ್ಧಪಡಿಸಿಕೊಳ್ಳುತ್ತೇವೆ’ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಎರಡು ಸ್ಥಳಗಳಿಂದ ಆರಂಭ:

‘ಕಮಲಾಪುರದ ತಾತ್ಕಾಲಿಕ ಹೆಲಿಪ್ಯಾಡ್‌ ಮತ್ತು ವಿಜಯ ವಿಠ್ಠಲ ದೇವಸ್ಥಾನದ ವಾಹನ ನಿಲುಗಡೆ ಸ್ಥಳದಿಂದ ಬಿಸಿಗಾಳಿ ಬಲೂನ್‌ಗಳು ಮೇಲಕ್ಕೇರುತ್ತವೆ. ಆಯಾ ದಿನದ ಗಾಳಿಯ ಚಲನೆ ಅನುಸಾರ ಈ ಎರಡು ಸ್ಥಳಗಳ ಪೈಕಿ ಒಂದು ಸ್ಥಳದಿಂದ ಬಲೂನ್‌ ಮೇಲೆ ಸಾಗುತ್ತದೆ. ಒಂದು ಸಲದ ಪಯಣಕ್ಕೆ ಒಬ್ಬರಿಗೆ ₹20 ಸಾವಿರ ಶುಲ್ಕ ಇದೆ. ಬಹುತೇಕ ಸ್ಮಾರಕಗಳನ್ನು ವೀಕ್ಷಿಸಲು ಅವಕಾಶ ಸಿಗುವ ರೀತಿಯಲ್ಲೇ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಬೆಳಿಗ್ಗೆ ಹೊತ್ತಲ್ಲಿ ಮಾತ್ರ ಬಲೂನ್‌ನಲ್ಲಿ ಪ್ರಯಾಣ ಸಾಧ್ಯ. ಬಿಸಿಲೇರಿದರೆ ಮತ್ತು ಗಾಳಿಯ ವೇಗ ಹೆಚ್ಚಿದರೆ ಬಲೂನ್‌  ನಿಗದಿತ ಪ್ರದೇಶದಲ್ಲಿ ಸಾಗಿಸಲು ಕಷ್ಟವಾಗುತ್ತದೆ. ಬಲೂನ್‌ನಲ್ಲಿ ಸುತ್ತಲು ಬಯಸುವ ಮಂದಿ ಒಂದು ದಿನ ಮೊದಲು ಇವಾಲ್ವ್‌ ಬ್ಯಾಕ್‌ ಹೋಟೆಲ್‌ಗೆ ಬಂದು ಸೇರುತ್ತಾರೆ.

‘ದೇಶದ ನಾಲ್ಕು ಕಡೆ ಮಾತ್ರ ಹೀಗೆ ಸ್ಮಾರಕಗಳ ವೀಕ್ಷಣೆಗೆ ಸೌಲಭ್ಯವಿದೆ. ಗುಜರಾತ್‌ನ ಕಛ್‌ ಪ್ರದೇಶ, ರಾಜಸ್ಥಾನದ ಪುಷ್ಕರ್ ಮೇಳದಲ್ಲಿ, ಯುರೋಪ್‌ನ ಹಲವು ದೇಶಗಳಲ್ಲಿ ಇಂತಹ ಬಲೂನ್‌ ಯಾನ ಸಾಮಾನ್ಯ. ಹತ್ತು ವರ್ಷದ ಹಿಂದೆ ಹಂಪಿಯಲ್ಲಿ ಪ್ರಯೋಗ ಮಾಡಲಾಗಿತ್ತು. ಈಗ ಸಾಕಾರಗೊಂಡಿದೆ’ ಎಂದು ಪ್ರಭುಲಿಂಗ ತಳಕೇರಿ ವಿವರಿಸಿದರು.

ಹಂಪಿಯ ಸ್ಮಾರಕಗಳ ಮೇಲೆ ನಿಧಾನವಾಗಿ ಚಲಿಸಿದ ಬಿಸಿಗಾಳಿ ಬಲೂನ್‌
ಹಂಪಿಯ ಸ್ಮಾರಕಗಳ ಮೇಲೆ ನಿಧಾನವಾಗಿ ಚಲಿಸಿದ ಬಿಸಿಗಾಳಿ ಬಲೂನ್‌
ಹಂಪಿಯ ಸ್ಮಾರಕಗಳ ಮೇಲೆ ನಿಧಾನವಾಗಿ ಚಲಿಸಿದ ಬಿಸಿಗಾಳಿ ಬಲೂನ್‌
ವಾರದ ಹಿಂದೆ ನಡೆದ ಪ್ರಾಯೋಗಿಕ ಹಾರಾಟ ನೋಡಿದ ಬಳಿಕ ಮೇ 30ರವರೆಗೆ ಬಲೂನ್‌ ಹಾರಾಟಕ್ಕೆ ಜಿಲ್ಲಾಡಳಿತದಿಂದ ಅನುಮತಿ ನೀಡಲಾಗಿದೆ
ಎಂ.ಎಸ್.ದಿವಾಕರ್ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.