ADVERTISEMENT

ಹಂಪಿ ಇತಿಹಾಸ ಪಠ್ಯಕ್ರಮದ ಭಾಗವಾಗಲಿ: ವೆಂಕಯ್ಯ ನಾಯ್ಡು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 10:35 IST
Last Updated 21 ಆಗಸ್ಟ್ 2021, 10:35 IST
ವಿಶ್ವಪ್ರಸಿದ್ಧ ಹಂಪಿಗೆ ಭೇಟಿ ನೀಡಿದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಕುಟುಂಬ ಸದಸ್ಯರ ಜೊತೆಗೆ.
ವಿಶ್ವಪ್ರಸಿದ್ಧ ಹಂಪಿಗೆ ಭೇಟಿ ನೀಡಿದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಕುಟುಂಬ ಸದಸ್ಯರ ಜೊತೆಗೆ.   

ಹೊಸಪೇಟೆ (ವಿಜಯನಗರ): ‘ಹಂಪಿಯ ಸಂಪೂರ್ಣ ಇತಿಹಾಸ ಪಠ್ಯಕ್ರಮದ ಭಾಗವಾಗಬೇಕು’ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದರು.

ಶನಿವಾರ ಕುಟುಂಬ ಸಮೇತ ಇಲ್ಲಿನ ವಿಶ್ವಪ್ರಸಿದ್ಧ ಹಂಪಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಮ್ಮ ಪ್ರಾಚೀನ ಸಂಸ್ಕೃತಿ, ಪರಂಪರೆ ಮುಂದಿನ ಪೀಳಿಗೆಗೆ ಸಂರಕ್ಷಿಸಿ ಇಡಬೇಕು. ಅದರಲ್ಲೂ ವಿಜಯನಗರ ಸಾಮ್ರಾಜ್ಯಕ್ಕೆ ವಿಶೇಷ ಮಹತ್ವವಿದೆ. ಇತಿಹಾಸಕಾರರು ಶ್ರೀಕೃಷ್ಣದೇವರಾಯನ ಸಾಧನೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಬೇಕು’ ಎಂದರು.

ADVERTISEMENT

‘ಶ್ರೀ ಕೃಷ್ಣದೇವರಾಯ ಆತನ ಪ್ರಜೆಗಳನ್ನು ಮಕ್ಕಳಂತೆ ನೋಡುತ್ತಿದ್ದ. ಶಿಕ್ಷಣ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ಯಾರಿಗೆ ಯಾವುದರಲ್ಲಿ ಅಭಿರುಚಿ ಇದೆಯೋ ಅವರಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದ. ಇಲ್ಲಿನ ಸ್ಮಾರಕಗಳು, ದೇವಾಲಯಗಳು, ಶ್ರೀಮಂತ ವಾಸ್ತುಶಿಲ್ಪ ನೋಡಿದ ನಂತರ ಬಹಳ ಖುಷಿಯಾಗಿದೆ. ಇಂತಹ ಸುಂದರವಾದ ಸ್ಥಳ ಮತ್ತೆಲ್ಲಿಯೂ ನೋಡಿಲ್ಲ’ ಎಂದರು.

‘ಯುವಪೀಳಿಗೆ ವಿದ್ಯಾರ್ಥಿ ಜೀವನದಲ್ಲಿ ಒಮ್ಮೆಯಾದರೂ ಹಂಪಿಗೆ ಭೇಟಿ ಕೊಡಬೇಕು. ವಿಜಯನಗರ ಸಾಮ್ರಾಜ್ಯದ ಇತಿಹಾಸ ತಿಳಿದುಕೊಳ್ಳಬೇಕು. ಇಂತಹ ಸ್ಥಳ ನೋಡುವುದರಿಂದ ಮನೋಬಲ, ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಮೂಡುತ್ತದೆ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯವರು ಉತ್ತಮ ರೀತಿಯಲ್ಲಿ ಇಲ್ಲಿನ ಸ್ಮಾರಕಗಳನ್ನು ಸಂರಕ್ಷಿಸಿದ್ದಾರೆ. ಇದರಲ್ಲಿ ಸ್ಥಳೀಯರ ಪಾತ್ರ ಮಹತ್ವದ್ದಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.