ADVERTISEMENT

ಪೊಲೀಸರ ಕಟ್ಟುನಿಟ್ಟಿನ ಕ್ರಮ; ಮನೆಯೆದುರಿಗೆ ರಂಗಿನಾಟ ಸೀಮಿತ

ನಡೆಯದ ಸಾರ್ವಜನಿಕರ ಬಣ್ಣದೋಕುಳಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 8:34 IST
Last Updated 29 ಮಾರ್ಚ್ 2021, 8:34 IST
ಹೊಸಪೇಟೆಯ ಉಕ್ಕಡಕೇರಿ ರಸ್ತೆಯಲ್ಲಿ ಸೋಮವಾರ ಚಿಣ್ಣರು ರಂಗಿನಾಟ ಆಡಿದರು
ಹೊಸಪೇಟೆಯ ಉಕ್ಕಡಕೇರಿ ರಸ್ತೆಯಲ್ಲಿ ಸೋಮವಾರ ಚಿಣ್ಣರು ರಂಗಿನಾಟ ಆಡಿದರು   

ಹೊಸಪೇಟೆ (ವಿಜಯನಗರ): ಸಾರ್ವಜನಿಕರು ಗುಂಪುಗೂಡುವುದರ ಮೇಲೆ ಪೊಲೀಸರು ನಿರ್ಬಂಧ ಹೇರಿದ್ದರಿಂದ ಜನ ಅವರ ಓಣಿಗಳಲ್ಲಿ ಅವರ ಮನೆಗಳೆದುರಿಗೆ ಸೀಮಿತರಾಗಿ ಸೋಮವಾರ ರಂಗಿನಾಟವಾಡಿ ಸಂಭ್ರಮಿಸಿದರು.

ಕೋವಿಡ್‌–19 ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ವರ್ಷ ಜಿಲ್ಲಾಡಳಿತವು, ಸಾರ್ವಜನಿಕರು ಗುಂಪುಗೂಡಿ ಬಣ್ಣದಾಟ ಆಡುವುದರ ಮೇಲೆ ನಿರ್ಬಂಧ ಹೇರಿತ್ತು. ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಉದ್ಯಾನಗಳು, ಗುಂಪುಗೂಡುವ ಪ್ರಮುಖ ಬಡಾವಣೆಗಳಲ್ಲಿ ಪೊಲೀಸರು ಗಸ್ತು ತಿರುಗಿದರು.

ಆಯಾ ಬಡಾವಣೆಗಳಲ್ಲಿ ಜನ ಅವರ ಕುಟುಂಬ ಸದಸ್ಯರು, ನೆರೆ ಮನೆಯವರೊಂದಿಗೆ ಬಣ್ಣದಾಟವಾಡಿ ಬಣ್ಣದಲ್ಲಿ ಮಿಂದೆದ್ದರು. ಮಹಿಳೆಯರು, ಮಕ್ಕಳು, ಯುವಕ/ಯುವತಿಯರು ಸೇರಿದಂತೆ ಎಲ್ಲ ವಯೋಮಾನದವರು ರಂಗಿನಾಟವಾಡಿದರು. ಇನ್ನು, ಅಪಾರ್ಟ್‌ಮೆಂಟ್‌ ನಿವಾಸಿಗಳು ನೆಲ ಅಂತಸ್ತಿನ ವಾಹನ ನಿಲುಗಡೆ ಜಾಗದಲ್ಲಿ ಬಣ್ಣದೋಕುಳಿ ಆಡಿದರು. ಸಂಗೀತಕ್ಕೆ ಹೆಜ್ಜೆ ಹಾಕಿದರು. ಪರಸ್ಪರ ಬಣ್ಣ ಎರಚಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

ಯುವಕರು ಬೈಕ್‌ನಲ್ಲಿ ಗೆಳೆಯರ ಮನೆಗೆ ತೆರಳಿ ಹೋಳಿ ಹಬ್ಬ ಆಚರಿಸಿದರು. ಪ್ರಮುಖ ರಸ್ತೆಗಳಲ್ಲಿ ಪೊಲೀಸರು ತಡೆಯುತ್ತಾರೆ ಎಂದರಿತ ಅವರು ಕಿರು ಬಡಾವಣೆಗಳ ಮೂಲಕವೇ ಓಡಾಡಿದರು. ಕೋವಿಡ್‌ ಕಾರಣಕ್ಕಾಗಿ ಹಿರಿಯ ನಾಗರಿಕರು ಹೆಚ್ಚಾಗಿ ಈ ಸಲ ಬಣ್ಣದಾಟ ಆಡಲಿಲ್ಲ. ಮನೆ ಮಂದಿಯೆಲ್ಲ ರಂಗಿನಾಟ ಆಡುತ್ತಿದ್ದರೆ, ಅದನ್ನು ನೋಡಿ ಅವರು ಸಂಭ್ರಮಿಸಿದರು.

ಹಂಪಿಯಲ್ಲೂ ನೀರಸ:

ಅನೇಕ ವರ್ಷಗಳಿಂದ ದೇಶ–ವಿದೇಶಗಳ ಪ್ರವಾಸಿಗರು ಹಂಪಿಗೆ ಬಂದು ಹೋಳಿ ಹಬ್ಬ ಆಚರಿಸುತ್ತಿದ್ದಾರೆ. ಸ್ಥಳೀಯರೊಂದಿಗೆ ಬೆರೆತು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ರಂಗಿನಾಟ ಆಡಿ ಸಂಭ್ರಮಿಸುತ್ತಿದ್ದರು. ವಿದೇಶಿಯರ ಹೋಳಿ ಸಂಭ್ರಮ ನೋಡಲು ಅನೇಕ ಜನ ಸೇರುತ್ತಿದ್ದರು. ಆದರೆ, ಈ ವರ್ಷ ಅಂತಹ ದೃಶ್ಯ ಕಂಡು ಬರಲಿಲ್ಲ.

ಕೋವಿಡ್‌ನಿಂದಾಗಿ ವಿದೇಶಿಯರು ಈ ವರ್ಷ ಹಂಪಿ ಕಡೆಗೆ ಸುಳಿದಿಲ್ಲ. ಗುಂಪುಗೂಡಿ ಬಣ್ಣ ಆಡುವುದರ ಮೇಲೆ ನಿರ್ಬಂಧ ಹೇರಿದ್ದರಿಂದ ಸ್ಥಳೀಯ ಕೆಲ ಯುವಕರಷ್ಟೇ ರಥಬೀದಿಯಲ್ಲಿ ಸೇರಿ ರಂಗಿನಾಟ ಆಡಿದರು.

ಕಾಮದಹನ:

ಭಾನುವಾರ ರಾತ್ರಿ ನಗರದ ಹಲವು ಬಡಾವಣೆಗಳಲ್ಲಿ ಕಾಮ ದಹನ ಮಾಡಲಾಯಿತು. ಆದರೆ, ಎಲ್ಲೂ ಹೆಚ್ಚಿನ ಜನ ಕಂಡು ಬರಲಿಲ್ಲ. ಹಂಪಿ ರಸ್ತೆಯ ಕೆಲವು ಕಡೆ ಹೆಚ್ಚಾಗಿ ಜನ ಸೇರಿದ್ದರು. ಆದರೆ, ಪೊಲೀಸರು ಅವರನ್ನು ಅಲ್ಲಿಂದ ಕಳುಹಿಸಿದರು. ಮತ್ತೆ ಕೆಲವರು ಜನ ಸೇರುವ ಪ್ರದೇಶಗಳಿಂದ ದೂರ ಉಳಿದು, ಅವರ ಮನೆಯೆದುರೇ ಸಣ್ಣ ಪ್ರಮಾಣದಲ್ಲಿ ಕಾಮದಹನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.