ಹೊಸಪೇಟೆ (ವಿಜಯನಗರ): ಹೋಳಿ ಹಬ್ಬದ ಪ್ರಯುಕ್ತ ವಿಜಯನಗರ ಜಿಲ್ಲೆಯಾದ್ಯಂತ ಶುಕ್ರವಾರ ರಂಗಿನ ಓಕುಳಿಯಾಟ ನಡೆಯಿತು. ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾವಿರಾರು ಮಂದಿ ಸೇರಿ ತಾವೆಲ್ಲ ಒಂದೇ ಬಣ್ಣ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಸಂಭ್ರಮಿಸಿದರು.
ಶಾಸಕ ಎಚ್.ಆರ್.ಗವಿಯಪ್ಪ ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಹೋಳಿ ಹಬ್ಬ ಆಚರಣೆಗೆ ವ್ಯವಸ್ಥೆ ಮಾಡಿದ್ದರು. ಬಹುತೇಕ ಯುವಕರು ಹಾಗೂ ಯುವತಿಯರೇ ತುಂಬಿದ್ದ ಮೈದಾನದಲ್ಲಿ ಹಾಡು, ಕುಣಿತಕ್ಕೆ ಮಿತಿ ಇರಲಿಲ್ಲ. ಬಣ್ಣದ ಓಕುಳಿಯಲ್ಲಿ ಮಿಂದೆದ್ದ ಅವರೆಲ್ಲ ಮೂರು ಗಂಟೆಗಳ ಕಾಲ ರಂಗಿನಾಟದಲ್ಲಿ ನಿರತರಾಗಿದ್ದರು.
ಫ್ರೀಡಂ ಪಾರ್ಕ್: ನಗರದ ಫ್ರೀಡಂ ಪಾರ್ಕ್‌ನಲ್ಲಿ ಪತಂಜಲಿ ಯೋಗ ಸಮಿತಿಯ ವತಿಯಿಂದ ಹೋಳಿ ಹಬ್ಬ ಆಚರಿಸಲಾಯಿತು. ಬೆಳಿಗ್ಗೆ ಯೋಗದಲ್ಲಿ ತೊಡಗಿದ ಶಿಬಿರಾರ್ಥಿಗಳು ಬಳಿಕ ಪರಸ್ಪರ ಬಣ್ಣ ಹಚ್ಚಿ, ಹಾಡುಗಳಿಗೆ ಕುಣಿದರು. ಸುಮಾರು ಒಂದೂವರೆ ಗಂಟೆ ಕಾಲ ಹಾಡು, ಕುಣಿತದೊಂದಿಗೆ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
ಹೂವಿನ ಓಕುಳಿ: ನಗರದ ಬಲ್ಡೋಡಾ ಪಾರ್ಕ್‌ನಲ್ಲಿ ಪತಂಜಲಿ ಯೋಗ ಸಮಿತಿಯವರು ಕಳೆದ ವರ್ಷದಂತೆ ಈ ವರ್ಷವೂ ಹೂವಿನ ದಳಗಳಿಂದಲೇ ಹೋಳಿ ಆಚರಿಸುವ ಮೂಲಕ ವಿಶಿಷ್ಟ ಸಂಪ್ರದಾಯವನ್ನು ಮುಂದುವರಿಸಿದರು. ಪತಂಜಲಿ ಯುವ ಭಾರತ ರಾಜ್ಯ ಉಸ್ತುವಾರಿ ಕಿರಣ್ ಕುಮಾರ್, ಜಿಲ್ಲಾ ಉಸ್ತುವಾರಿ ಪ್ರೊ.ಎಫ್.ಟಿ.ಹಳ್ಳಿಕೇರಿ ಇತರರು ಇದ್ದರು.
ಹಲವೆಡೆ ಡಿಜೆ ಸದ್ದು: ನಗರದ ವಿವಿಧ ರಸ್ತೆಗಳಲ್ಲಿ, ಓಣಿಗಳಲ್ಲಿ ಯುವಕರು, ಯುವತಿಯರು ಡಿ.ಜೆ. ವ್ಯವಸ್ಥೆ ಮಾಡಿಕೊಂಡು ರಂಗಿನಾಟ ಆಡಿದರು.
ಹಂಪಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಕಾಮದಹನ ನಡೆಯಲಿದ್ದು, ಶನಿವಾರ ಬೆಳಿಗ್ಗೆ ವಿದೇಶಿಯರ ಜತೆಗೆ ಸ್ಥಳೀಯ ಯುವಕ, ಯುವತಿಯರು ರಂಗಿನಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.