ADVERTISEMENT

ಹೊಸಪೇಟೆ: ಅಪಾಯದ ಮಟ್ಟದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 14:11 IST
Last Updated 15 ಜುಲೈ 2022, 14:11 IST
   

ಹೊಸಪೇಟೆ (ವಿಜಯನಗರ): ಸತತವಾಗಿ ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಾಗುತ್ತಿರುವುದರಿಂದ ನದಿಗೆ ಹೆಚ್ಚುವರಿ ನೀರು ಹರಿಸಲಾಗುತ್ತಿದ್ದು, ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.

ಅಣೆಕಟ್ಟೆಯ 30 ಕ್ರಸ್ಟ್‌ಗೇಟ್‌ಗಳಿಂದ ಶುಕ್ರವಾರ 1.48 ಲಕ್ಷ ಕ್ಯುಸೆಕ್‌ ನೀರು ನದಿಗೆ ಬಿಡಲಾಗಿದೆ. ಗುರುವಾರಕ್ಕೆ ಹೋಲಿಸಿದರೆ 12 ಸಾವಿರ ಕ್ಯುಸೆಕ್‌ ಹೆಚ್ಚಿಗೆ ನೀರು ಹರಿಸಲಾಗಿದೆ. ಇದರ ಪರಿಣಾಮ ಈಗಾಗಲೇ ಹಂಪಿ ರಾಮ–ಲಕ್ಷ್ಮಣ ದೇವಸ್ಥಾನ, ಅದಕ್ಕೆ ಹೊಂದಿಕೊಂಡಿರುವ ಸಾಲು ಮಂಟಪಗಳು, ಕರ್ಮ ಮಂಟಪ, ಸ್ನಾನಘಟ್ಟ, ಚಕ್ರತೀರ್ಥ, ಪುರಂದರದಾಸರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಕಂಪ್ಲಿ-ಗಂಗಾವತಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಅವುಗಳು ಗೋಚರಿಸುತ್ತಿಲ್ಲ. ಅದರ ಅಕ್ಕಪಕ್ಕವೂ ನೀರು ಬಂದಿರುವುದರಿಂದ ಅಲ್ಲಿ ಯಾರೂ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ಅದರ ವಿಸ್ತಾರ ವ್ಯಾಪಕವಾಗುತ್ತಿದೆ. ಈಗಾಗಲೇ ಹಂಪಿ ಸಮೀಪದ ತಳವಾರಘಟ್ಟದಲ್ಲಿ ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿದೆ. ನದಿಗೆ ಇನ್ನಷ್ಟು ನೀರು ಹರಿಸಿದರೆ ನದಿ ತೀರದ ಗದ್ದೆಗಳಲ್ಲಿ ಇತ್ತೀಚೆಗಷ್ಟೇ ಭತ್ತದ ಸಸಿ ನಾಟಿ ಮಾಡಿದ್ದು, ಅದಕ್ಕೆ ತೊಂದರೆ ಉಂಟಾಗಬಹುದು.

ADVERTISEMENT

ಜಲಾಶಯದ ಮೇಲ್ಭಾಗದಿಂದಲೂ ಅಪಾರ ನೀರು ಹರಿದು ಬರುತ್ತಿದೆ. ಶುಕ್ರವಾರ 1.12 ಲಕ್ಷ ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ಇದರಿಂದಾಗಿ ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು–ಗರ್ಭಗುಡಿ ರಸ್ತೆಯ ಸಂಪರ್ಕ ಕಡಿತಗೊಂಡಿದೆ. ಇನ್ನು, ಈಗಾಗಲೇ ಕಂಪ್ಲಿ–ಗಂಗಾವತಿ ಹಳೆಯ ಸೇತುವೆ ಮುಳುಗಡೆಯಾಗಿದೆ. ಈಗ ತಾಲ್ಲೂಕಿನ ಬುಕ್ಕಸಾಗರ–ಕಡೇಬಾಗಿಲು–ಗಂಗಾವತಿ ಹೊಸ ಸೇತುವೆಗೆ ಹೊಂದಿಕೊಂಡಂತೆ ನೀರು ಹರಿಯುತ್ತಿದೆ. ಈ ಸೇತುವೆಯು ಮುಳುಗಡೆಯಾದರೆ ಮಧ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ನಡುವೆ ಸಂಪರ್ಕ ಕಡಿದು ಹೋಗಬಹುದು. ಆಗ ಸುತ್ತು ಬಳಸಿ ವಾಹನಗಳು ಸಂಚರಿಸಬೇಕಾಗುತ್ತದೆ.

105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 94.857 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ನಿತ್ಯ ಸರಾಸರಿ 10ರಿಂದ 12 ಟಿಎಂಸಿ ಅಡಿ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಗುರುವಾರ 97.677 ಟಿಎಂಸಿ ಅಡಿ, ಬುಧವಾರ 99.898 ಟಿಎಂಸಿ ಅಡಿ, ಮಂಗಳವಾರ 97.906 ಟಿಎಂಸಿ ಅಡಿ, ಸೋಮವಾರ 91.014 ಟಿಎಂಸಿ ಅಡಿ, ಭಾನುವಾರ 83.917 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು.

ಬಲದಂಡೆ ಕೆಳಮಟ್ಟದ ಕಾಲುವೆಗೆ ನೀರು

ತುಂಗಭದ್ರಾ ಜಲಾಶಯದ ಬಲದಂಡೆ ಕೆಳಮಟ್ಟದ ಕಾಲುವೆಗೆ (ಎಲ್.ಎಲ್‌.ಸಿ.) ಶುಕ್ರವಾರ ನೀರು ಹರಿಸಲಾಯಿತು.
ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್‌, ಸೂಪರಿಟೆಂಡೆಂಟ್‌ ಎಂಜಿನಿಯರ್‌ ಶ್ರೀಕಾಂತ ರೆಡ್ಡಿ, ಸಹಾಯಕ ಎಂಜಿನಿಯರ್‌ ವಿಶ್ವನಾಥ, ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮ್‌ ಗೌಡ, ರೈತ ಮುಖಂಡರಾದ ಸಮತಗೇರಿ ರಾಮರೆಡ್ಡಿ ಇದ್ದರು. ಜು. 12ರಂದು ಬಲದಂಡೆ ಮೇಲ್ಮಟ್ಟದ ಕಾಲುವೆಗೆ (ಎಚ್‌.ಎಲ್.ಸಿ) ಹಾಗೂ ಜು. 10ರಂದು ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗಿತ್ತು.

ತುಂಗಭದ್ರಾ ಜಲಾಶಯದ ಬಲದಂಡೆ ಕೆಳಮಟ್ಟದ ಕಾಲುವೆಗೆ (ಎಲ್‌.ಎಲ್‌.ಸಿ) ಶುಕ್ರವಾರ ನೀರು ಹರಿಸಲಾಯಿತು.

ಅಂಕಿ ಅಂಶ

105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ
94.857 ಟಿಎಂಸಿ ಅಡಿ ಈಗ ಸಂಗ್ರಹಗೊಂಡ ನೀರು
1.12 ಲಕ್ಷ ಕ್ಯುಸೆಕ್‌ ಒಳಹರಿವು
1.52 ಲಕ್ಷ ಕ್ಯುಸೆಕ್‌ ಹೊರಹರಿವು
1.48 ಲಕ್ಷ ಕ್ಯುಸೆಕ್‌ ನದಿಗೆ
4097 ಕ್ಯುಸೆಕ್‌ ಕಾಲುವೆಗಳಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.