ADVERTISEMENT

ಹೊಸಪೇಟೆ | ಇತಿಹಾಸಕಾರರಿಂದ ಘೋರ ಅನ್ಯಾಯ: ಸ್ವಾಮಿ ನಿರ್ಭಯಾನಂದ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 2:14 IST
Last Updated 18 ಜನವರಿ 2026, 2:14 IST
ಹೊಸಪೇಟೆಯ ಹಂಸಾಂಬಾ ಶಾರದಾಶ್ರಮದಲ್ಲಿ ಶನಿವಾರ ನಡೆದ ಸ್ವಾಮಿ ವಿವೇಕಾನಂದ ಜಯತ್ಯುತ್ಸವದಲ್ಲಿ ಸ್ವಾಮಿ ನಿರ್ಭಯಾನಂದಜಿ ಮಹಾರಾಜ್‌ ಮಾತನಾಡಿದರು 
ಹೊಸಪೇಟೆಯ ಹಂಸಾಂಬಾ ಶಾರದಾಶ್ರಮದಲ್ಲಿ ಶನಿವಾರ ನಡೆದ ಸ್ವಾಮಿ ವಿವೇಕಾನಂದ ಜಯತ್ಯುತ್ಸವದಲ್ಲಿ ಸ್ವಾಮಿ ನಿರ್ಭಯಾನಂದಜಿ ಮಹಾರಾಜ್‌ ಮಾತನಾಡಿದರು    

ಹೊಸಪೇಟೆ (ವಿಜಯನಗರ): ‘ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರೀಯತೆಯ ಪ್ರಬಲ ಕೆಚ್ಚು ಎಲ್ಲರಲ್ಲೂ ಇತ್ತು. ಆದರೆ  ನಮ್ಮ ಇತಿಹಾಸಕಾರರು ತಿರುಚಿದ ಇತಿಹಾಸವನ್ನೇ ಓದಿಕೊಳ್ಳುವಂತೆ ಮಾಡಿದರು. ಇದು ನಮ್ಮ ದೇಶಕ್ಕೆ ಇತಿಹಾಸಕಾರರು ಮಾಡಿದ ಘೋರ ಅನ್ಯಾಯ’ ಎಂದು ಗದಗ, ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದಜಿ ಮಹಾರಾಜ್‌ ಹೇಳಿದರು.

ನಗರದ ಅನಂತಶಯನಗುಡಿ ಸಮೀಪದ ಹಂಸಾಂಬಾ ಶಾರದಾಶ್ರಮದಲ್ಲಿ ಶನಿವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವದಲ್ಲಿ ‘ಶಕ್ತಿಯ ಗಣಿ ವಿವೇಕವಾಣಿ’ ವಿಷಯದ ಕುರಿತು ಮಾತನಾಡಿದರು.

‘ದೇಶದಲ್ಲಿ 50ರಿಂದ 60 ವರ್ಷ  ಅನ್ಯಾಯವೇ ನಡೆಯಿತು. ಶಿಕ್ಷಣದ ನೀತಿ ನಿರೂಪಣೆಯಲ್ಲಿ ತೊಡಗಿದ್ದ ಇಂತಹ ದೇಶದ್ರೋಹಿಗಳಿಂದಾಗಿಯೇ ನೈಜ ಇತಿಹಾಸ ಗೊತ್ತಾಗಲಿಲ್ಲ’ ಎಂದು ವಿಷಾದಿಸಿದರು.

ADVERTISEMENT

‘ಭಾರತದಲ್ಲಿ ಹುಟ್ಟಿದ ಯಾರೂ ದಡ್ಡರಲ್ಲ. ಈ ಬಗ್ಗೆ ಪೋಷಕರು, ಶಿಕ್ಷಕರು ತಿಳಿಸಬೇಕಿದೆ. ಅದರಲ್ಲಿ ಸಫಲತೆ ಸಾಧಿಸಿದರೆ ಯುವಜನತೆ ಬಹಳಷ್ಟು ಸಾಧನೆ ಮಾಡಲು ಸಾಧ್ಯವಿದೆ’ ಎಂದರು.

‘ಅಮೆರಿಕದಲ್ಲಿ ನಡೆಯುವ ಎಲ್ಲಾ ಶಾಲೆಗಳ ಸ್ಪರ್ಧೆಗಳಲ್ಲಿ ಭಾರತೀಯ ಮೂಲದವರೇ ಮುಂಚೂಣಿಯಲ್ಲಿ ಇರುತ್ತಾರೆ. ಭಾರತೀಯರ ರಕ್ತದಲ್ಲೇ ಅಂತಹ ಮೇಧಾಶಕ್ತಿ ಇದೆ. ಜರ್ಮನವರಿಗೆ ತಮ್ಮ ಶಕ್ತಿ, ಸಾಮರ್ಥ್ಯದ ಅರಿವಿತ್ತು. ಹೀಗಾಗಿ, ಎರಡನೇ ಮಹಾಯುದ್ಧದಲ್ಲಿ ಸಂಪೂರ್ಣ ನಾಶವಾದ ದೇಶವನ್ನು ಮತ್ತೆ ಮರುನಿರ್ಮಿಸಿದರು. ಇದೇ ರೀತಿ ನಮ್ಮ ನಿಜವಾದ ಗುಣ ಅರಿತು, ಮುನ್ನಡೆಯಬೇಕಿದೆ’ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಪಿ. ವಿವೇಕಾನಂದ ಮಾತನಾಡಿದರು. ಗೋಕಾಕದ ಶಾರದಾ ಶಕ್ತಿಪೀಠದ ಅಧ್ಯಕ್ಷೆ ಮಾತಾಜಿ ಶಿವಮಯಿ, ಶಾರದಾಶ್ರಮದ ಮುಖ್ಯಸ್ಥೆ ಮಾತಾಜಿ ಪ್ರಬೋದಮಯಿ, ಕಿರ್ಲೋಸ್ಕರ್ ಫೆರಸ್‌ ಸಂಸ್ಥೆಯ ಎಂ.ಡಿ. ರವಿ ಗುಮಾಸ್ತೆ, ಬಿಕೆಜಿ ಸಮೂಹದ ಸಂಸ್ಥಾಪಕ ಬಿ. ನಾಗನಗೌಡ, ಹೋಟೆಲ್ ಉದ್ಯಮಿ ಪಿ.ಡಿ. ಗೌತಮ್‌, ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಹುಲುಗಪ್ಪ  ಇದ್ದರು. 

ಸಂಜೆ ಶಾರದಾದೇವಿಯವರ ಜಯಂತ್ಯುತ್ಸವ ನಡೆಯಿತು.

ಸಂಸ್ಕೃತಿ ಜೀವನ ಪದ್ಧತಿ ಆಚಾರ ವಿಚಾರಗಳಲ್ಲಿ ವಿದೇಶಿ ಅನುಕರಣೆ ಬೇಡ. ಸಾಮಾನ್ಯ ಜ್ಞಾನ ಸಂಚಾರ ನಿಯಮ ಪಾಲನೆ ಮೊದಲಾದ ವಿಚಾರಗಳಲ್ಲಿ ಅನುಕರಣೆ ಮಾಡಬೇಕಿದೆ
ಸ್ವಾಮಿ ನಿರ್ಭಯಾನಂದಜಿ ಮಹಾರಾಜ್‌ ಅಧ್ಯಕ್ಷ ಗದಗ–ರಾಮಕೃಷ್ಣ ವಿವೇಕಾನಂದ ಆಶ್ರಮ
‘ವಿಶ್ವವಿಖ್ಯಾತ ವಿದ್ಯಾವಂತರಾಗಿ’
‘ಸ್ವಾಮಿ ವಿವೇಕಾನಂದರು ವಿಶ್ವವಿಖ್ಯಾತ ವಿದ್ಯಾವಂತರಾಗಿದ್ದರು. ವಿದ್ಯಾರ್ಥಿಗಳು ಇದೇ ಛಲ ತೊಟ್ಟು ಅದನ್ನು ಸಾಧಿಸುವ ಪ್ರಯತ್ನ ಮಾಡಿಬೇಕು. ವಿಶ್ವಕೋಶದ ಮೇಲೆ ಕಣ್ಣಾಡಿಸಿ ನಿಖರವಾಗಿ ಯಾವ ಪುಟದಲ್ಲಿ ಯಾವ ಮಾಹಿತಿ ಇದೆ ಎಂದು ಹೇಳುವಂತಹ ಅಪೂರ್ವ ನೆನಪಿನ ಶಕ್ತಿ ವಿವೇಕಾನಂದರಲ್ಲಿ ಇತ್ತು. ಗುರುಭಕ್ತಿ ಬ್ರಹ್ಮಚರ್ಯ ಮತ್ತು ಜ್ಞಾನದಾಹಗಳೇ ಇದಕ್ಕೆ ಕಾರಣವಾಗಿತ್ತು. ಗುರುಭಕ್ತಿ ಇದ್ದರೆ ಗುರುಗಳು ಮಾಡುವ ಯಾವ ಪಾಠವೂ ಕಷ್ಟ ಎನಿಸದು’ ಎಂದು ಸ್ವಾಮಿ ನಿರ್ಭಯಾನಂದಜಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.