ADVERTISEMENT

ಹೊಸಪೇಟೆ | ಅನಾಥರಿಗೆ ಸಿಕ್ಕಿತೊಂದು ತಾತ್ಕಾಲಿಕ ಆಸರೆ!

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:01 IST
Last Updated 3 ಡಿಸೆಂಬರ್ 2025, 7:01 IST
ಅನಾಥರಾಗಿದ್ದ ರಮೇಶ, ಸರೋಜಮ್ಮರಿಗೆ ತಾತ್ಕಾಲಿಕ ಸೂರಿನ ವ್ಯವಸ್ಥೆ ಕಲ್ಪಿಸಿದ ಗೀತಾ ಮಹಾರಾಜ್‌
ಅನಾಥರಾಗಿದ್ದ ರಮೇಶ, ಸರೋಜಮ್ಮರಿಗೆ ತಾತ್ಕಾಲಿಕ ಸೂರಿನ ವ್ಯವಸ್ಥೆ ಕಲ್ಪಿಸಿದ ಗೀತಾ ಮಹಾರಾಜ್‌   

ಹೊಸಪೇಟೆ (ವಿಜಯನಗರ): ಕಳೆದ ಮೂರು ತಿಂಗಳಿಂದ ಆಸರೆ ಇಲ್ಲದೆ ಊರೂರು ಅಲೆದಾಡುತ್ತ, ಅತಂತ್ರ ಸ್ಥಿತಿಯಲ್ಲಿದ್ದ 84 ವರ್ಷದ ಅಜ್ಜಿ ಸರೋಜಮ್ಮ ಮತ್ತು ಆಕೆಯ ಮೊಮ್ಮಗ ರಮೇಶ (34) ಅವರಿಗೆ ನಗರಸಭೆಯ ವಸತಿ ರಹಿತರ ಆಶ್ರಯ ಕೇಂದ್ರ ಹಾಗೂ ಅನಂತಶಯನಗುಡಿಯಲ್ಲಿರುವ ಹಿರಿಯ ನಾಗರಿಕರ ಗೃಹ ವೃದ್ಧಾಶ್ರಮ ಆಸರೆ ನೀಡಿದೆ.

ಪ್ರತಿ ತಿಂಗಳ 1 ಮತ್ತು 15ನೇ ತಾರೀಖಿನಂದು ನಗರದಲ್ಲಿ ವಸತಿ ರಹಿತರ ಸಮೀಕ್ಷೆ ನಡೆಸಲಾಗುತ್ತದೆ. ಅದರಂತೆ ಸೋಮವಾರ ವಸತಿ ರಹಿತರ ಆಶ್ರಯ ಕೇಂದ್ರದ ವ್ಯವಸ್ಥಾಪಕಿ ಗೀತಾ ಮಹಾರಾಜ್ ಅವರು ರೈಲು ನಿಲ್ದಾಣದಲ್ಲಿ ಪರಿಶೀಲನೆ ನಡೆಸುತ್ತಿದ್ದಾಗ ಹೊರಗಡೆ ಅಜ್ಜಿ, ಮೊಮ್ಮಗ ಇರುವುದು ಗಮನಕ್ಕೆ ಬಂದಿತ್ತು. ಮಂಗಳವಾರ ಅವರನ್ನು ವಿಚಾರಿಸಿದಾಗ ಅವರಿಬ್ಬರೂ ಅನಾಥರೆಂಬುದು ಗೊತ್ತಾಯಿತು.

ರಮೇಶ ಹುಟ್ಟಿದ್ದು ಹೊಸಪೇಟೆಯಲ್ಲೇ, ಆತ ಚಿಕ್ಕವನಿದ್ದಾಗ ಆತನ ಅಪ್ಪ ಅಪಘಾತದಲ್ಲಿ ಮೃತಪಟ್ಟ. ಕೆಲವೇ ತಿಂಗಳಲ್ಲಿ ಅಮ್ಮ ಎದೆನೋವಿನಿಂದ ಮೃತಪಟ್ಟಳು. ಆಗ ಆತನನ್ನು ಸಲಹಿದ್ದು ಆತನ ಅಜ್ಜಿ  (ಅಮ್ಮನ ಅಮ್ಮ) ಸರೋಜಮ್ಮ. ಹೂವಿನಹಡಗಲಿಯಲ್ಲಿ ಸರೋಜಮ್ಮನ ತಂಗಿಯ ಮಕ್ಕಳ ಮನೆಯಲ್ಲಿ ಇದುವರೆಗೆ ಇದ್ದರು. ಆದರೆ ನಾಲ್ಕು ತಿಂಗಳ ಹಿಂದೆ ಮನೆಯಿಂದ ಇವರನ್ನು ಹೊರಗೆ ಹಾಕಿದ ಕಾರಣ ದಾವಣಗೆರೆ, ಬೆಂಗಳೂರು, ಹುಲಿಗಿಯಲ್ಲಿ ಸುತ್ತಾಡಿ, ಕೊನೆಗೆ ಹೊಸಪೇಟೆಗೆ ಬಂದಿದ್ದರು.

ADVERTISEMENT

‘ಅಜ್ಜಿಯೇ ನನ್ನ ಬದುಕು, ನನ್ನನ್ನು ಸಾಕಿದಾಕೆ, ಅವಳನ್ನು ಕೊನೆಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು,  ಅವಳಿಗೆ ಈಗ ಅಷ್ಟಾಗಿ ಕಿವಿ ಕೇಳಿಸುವುದಿಲ್ಲ. ಅವಳಿಗೊಂದು ನೆಲೆ ಸಿಕ್ಕಿದರೆ ನಾನು ದುಡಿದು ತಿನ್ನುತ್ತೇನೆ, ಆಕೆಗೂ ಒಂದಿಷ್ಟು ಸಂಪಾದಿಸಿ ಚೆನ್ನಾಗಿ ನೋಡಿಕೊಳ್ಳುತ್ತೇನೆ’ ಎಂದು 5ನೇ ತರಗತಿವರೆಗೆ ಮಾತ್ರ ಓದಿರುವ ರಮೇಶ ಹೇಳಿದ. 

ಹೀಗೊಬ್ಬ ಆಧುನಿಕ ಶ್ರವಣಕುಮಾರ 4 ತಿಂಗಳಿಂದ ಊರೂರು ಅಲೆದಾಟ ಅನ್ನ, ನೀರಿಲ್ಲದೆ ಕಂಗಾಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.