
ಹೊಸಪೇಟೆ (ವಿಜಯನಗರ): ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ವಾಸುದೇವ ಮೇಟಿ ಬಣ) ವತಿಯಿಂದ ನಗರದಲ್ಲಿ ಸೋಮವಾರ ನಡೆದ ಮೂರನೇ ರೈತರ ಸಮಾವೇಶ ರೈತ ಹಬ್ಬವಾಗಿ ಬದಲಾಯಿತು. ಮಹಿಳೆಯರ ಸಹಿತ ನೂರಾರು ರೈತರು ಪಾಲ್ಗೊಂಡು ಸಂಭ್ರಮಿಸಿದರು.
ವಡಕರಾಯ ದೇವಸ್ಥಾನದಿಂದ ಜಿಲ್ಲಾ ಒಳಾಂಗಣ ಕ್ರೀಡಾಂಗಣದ ತನಕ ನಡೆದ ರೈತರ ಶೋಭಾಯಾತ್ರೆಯೇ ಹಬ್ಬದ ಪ್ರಮುಖ ಆಕರ್ಷಣೆಯಾಗಿತ್ತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ರಾಣಿ ಸಂಯುಕ್ತ, ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ, ಸಂಘದ ರಾಜ್ಯ ಅಧ್ಯಕ್ಷ ವಾಸುದೇವ ಮೇಟಿ, ಜಿಲ್ಲಾ ಅಧ್ಯಕ್ಷ ಸಿ.ಎ.ಗಾಳೆಪ್ಪ ಸಹಿತ ಇತರರು ರೈತ ಮಹಿಳೆಯರು, ರೈತರ ಜತೆಗೆ ಹೆಜ್ಜೆ ಹಾಕಿ ರೈತರಿಗೆ ಉತ್ತೇಜನ ನೀಡಿದರು. ಕಳಶ ಹೊತ್ತ ಮಹಿಳೆಯರು, ಎತ್ತಿನಬಂಡಿಗಳು, ಡೊಳ್ಳುಕುಣಿತ, ಕೋಲಾಟ, ಭಜನೆ, ತಾಷಾ, ನಂದಿಕೋಲು, ಕೀಲುಕುದುರೆ ಸಹಿತ ಹಲವು ಕಲಾತಂಡಗಳು ಮೆರುಗು ನೀಡಿದವು.
‘ರಾಜ್ಯದಲ್ಲಿ ಬೇರೆಲ್ಲೂ ನಡೆಯದಂತಹ ರೈತ ಹಬ್ಬ ಹೊಸಪೇಟೆಯಲ್ಲಿ ನಡೆಯುತ್ತಿದೆ, ಅನ್ನದಾತರಿಗೆ ಕಷ್ಟ ಇದೆ, ಆದರೆ ಅವರಿಗೂ ಒಂದು ಹಬ್ಬ ಬೇಕಾಗುತ್ತದೆ, ಇಂದು ಅದು ಈಡೇರಿದೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿಎ.ಗಾಳೆಪ್ಪ ಹೇಳುವ ಮೂಲಕ ರೈತ ಸಮುದಾಯವನ್ನು ಯಾರೂ ಕಡೆಗಣಿಸಕೂಡದು ಎಂಬ ಸಂದೇಶ ರವಾನಿಸಿದರು.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ರಾಣಿ ಸಂಯುಕ್ತ ಅವರು ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಭರವಸೆ ನೀಡಿದ್ದಾರೆ, ಸಂಘವು ಇದನ್ನು ಸ್ವಾಗತಿಸುತ್ತದೆ ಎಂದರು.
ವಾಸುದೇವ ಮೇಟಿ ಮಾತನಾಡಿ, ರೈತರ ಕುರಿತು ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆಯುವುದನ್ನು ಇನ್ನಾದರೂ ಬಿಡಬೇಕು, ರೈತರ ನ್ಯಾಯೋಚಿತ ಬೇಡಿಕೆಗಳಿಗಾಗಿ ಕಚೇರಿಗಳಿಗೆ ಮುತ್ತಿಗೆಯಂತಹ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಕ್ಕೆ ಸರ್ಕಾರ ಆಸ್ಪದ ನೀಡಬಾರದು ಎಂದರು.
ವೇದಿಕೆಯಲ್ಲಿದ್ದ ರಾಣಿ ಸಂಯುಕ್ತ ಅವರು ತಮ್ಮ ಭಾಷಣದಲ್ಲಿ ಸಕ್ಕರೆ ಕಾರ್ಖಾನೆ ಕುರಿತು ಯಾವ ಮಾತನ್ನೂ ಆಡಲಿಲ್ಲ, ಬದಲಿಗೆ ರೈತ ಕುಟುಂಬಗಳ ಯೋಗಕ್ಷೇಮ, ಆರೋಗ್ಯ, ಮಕ್ಕಳ ಶಿಕ್ಷಣಕ್ಕೆ ಗಮನ ಹರಿಸಬೇಕಿದೆ ಎಂದು ತಿಳಿಸಿದರು.
ರಂಜು ಆರ್ಟ್ಸ್ ಯೋಗ ಟ್ರಸ್ಟ್‌ನ ವಿದ್ಯಾರ್ಥಿಗಳಿಂದ ರಿದಮಿಕ್ ಯೋಗ ನೃತ್ಯ, ಈಚೆಗೆ ಅಂಜನಾದ್ರಿ ಬೆಟ್ಟವನ್ನು ನೃತ್ಯ ಮಾಡುತ್ತಲೇ ಏರಿ ದಾಖಲೆ ನಿರ್ಮಿಸಿದ ಎನ್.ಹರ್ಷಿತಾ ಅವರಿಂದ ಭರತನಾಟ್ಯ ನಡೆಯಿತು. ಪ್ರತಿಭಾವಂತ ರೈತ ಮಕ್ಕಳನ್ನು ಸನ್ಮಾನಿಸಲಾಯಿತು.
ರೈತರು ರಜೆ ಹಾಕಿದರೆ ಹೇಗೆ? ಧಾನ್ಯವನ್ನು ತೂರುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಗರಗ ನಾಗಲಾಪುರ ಒಪ್ಪತ್ತೇಶ್ವರ ಮಠದ ನಿರಂಜನ ಪ್ರಭುದೇಶಿಕರು ಸ್ವಾಮೀಜಿ ಬೇರೆ ಯಾರು ರಜೆ ಹಾಕಿದರೂ ನಮಗೇನೂ ಆಗದು ಆದರೆ ರೈತರು ರಜೆ ಹಾಕಿದರೆ ನಮಗೆ ಹೊಟ್ಟೆಗೆ ಹಿಟ್ಟಿಲ್ಲದಂತಾಗುತ್ತದೆ ಹೀಗಾಗಿ ರೈತರ ಕಷ್ಟ ಸುಖದಲ್ಲಿ ನಾವೆಲ್ಲ ಪಾಲ್ಗೊಳ್ಳುವ ಅಗತ್ಯ ಇದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.