
ಹೊಸಪೇಟೆ (ವಿಜಯನಗರ): ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಎಲಿಯನಡುಗೋಡು ಗ್ರಾಮದ ರೈತ ದಂಪತಿ ನಿತ್ಯಾನಂದ ಶೆಟ್ಟಿ–ರಮ್ಯಾ ಅವರು ಮಂಗಳವಾರ ನಗರದ ಆರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಗುಬ್ವಚ್ಚಿಗೂಡು ಕುರಿತು ಜಾಗೃತಿ ಮೂಡಿಸಿದರು.
‘ಇದು ಕೇವಲ ಗುಬ್ಬಚ್ಚಿಗಳಿಗೆ ಸಂಬಂಧಿಸಿದ ಜಾಗೃತಿಯಲ್ಲ, ಎಲ್ಲ ಹಕ್ಕಿಗಳನ್ನು ಸಹ ನಾವು ಪ್ರೀತಿಯಿಂದ ಕಾಣಬೇಕು, ಬೇಸಿಗೆಯಲ್ಲಿ ನೀರು, ಕಾಳು, ಮಳೆಗಾಲದಲ್ಲಿ ಗಿಡ ನೆಟ್ಟು ಹಕ್ಕಿಗಳ ಆಹಾರಕ್ಕೆ ವ್ಯವಸ್ಥೆ ಮಾಡಿಕೊಡುವುದನ್ನು ಎಲ್ಲರೂ ರೂಢಿಸಿಕೊಳ್ಳಬೇಕು’ ಎಂದು ಈ ಪಕ್ಷಿಪ್ರೇಮಿ ರೈತ ದಂಪತಿ ಮಕ್ಕಳಿಗೆ ತಿಳಿಹೇಳಿದರು.
‘ನಾವು ಯಾವುದೇ ಎನ್‌ಜಿಒ ಸಂಘಟನೆಗೆ ಸೇರಿದವರಲ್ಲ, ನಾವು ಕೃಷಿಕರು. ನಮ್ಮ ಊರಿನಲ್ಲಿ ಎರಡು ಎಕರೆ ಜಾಗವನ್ನು ಹಕ್ಕಿಗಳಿಗಾಗಿಯೇ ಮೀಸಲಿಟ್ಟಿದ್ದೇವೆ. ಹಲವಾರು ಹಕ್ಕಿಗಳು ಅಲ್ಲಿ ಆಸರೆ ಪಡೆದಿವೆ. ಹೀಗಾಗಿ ನಮ್ಮ ಯಶೋಗಾಥೆಯನ್ನು ಶಾಲೆಗಳಿಗೆ ಹೋಗಿ ಮಕ್ಕಳಿಗೆ ತಿಳಿಸುತ್ತಿದ್ದೇವೆ. ನಾವು ಈಗಾಗಲೇ 27 ಜಿಲ್ಲೆಗಳ 437 ಶಾಲೆಗಳಿಗೆ ಭೇಟಿ ನೀಡಿ ಉಚಿತವಾಗಿ ಮಾಹಿತಿ ನೀಡಿದ್ದೇವೆ, ಬುಧವಾರ ಬಳ್ಳಾರಿಯಲ್ಲಿ ವಿವಿಧ ಶಾಲೆಗಳಿಗೆ ತೆರಳುತ್ತೇವೆ’ ಎಂದು ನಿತ್ಯಾನಂದ ಶೆಟ್ಟಿ ಹೇಳಿದರು.
‘ನಾವು ಉಚಿತವಾಗಿ ಕೃತಕ ಬಿದಿರಿನ ಗೂಡುಗಳನ್ನು ಸಹ ಆಸಕ್ತರಿಗೆ ನೀಡುತ್ತಿದ್ದೇವೆ. ವರ್ಷಕ್ಕೆ 100 ಗೂಡುಗಳನ್ನು ನೀಡುತ್ತೇವೆ. ಈಗಾಗಲೇ 1,036 ಮಣ್ಣಿನ ಹಕ್ಕಿ ಗೂಡುಗಳನ್ನು ಸಹ ಆಸಕ್ತರಿಗೆ ನೀಡಿದ್ದೇವೆ. ಯಾರಿಂದಲೂ ನಯಾ ಪೈಸೆ ತೆಗೆದುಕೊಳ್ಳುತ್ತಿಲ್ಲ. ಮಕ್ಕಳು ಇಂತಹ ಪಕ್ಷಿಪ್ರೀತಿ ಬೆಳೆಸಿಕೊಳ್ಳಬೇಕು ಎಂಬುದೇ ನಮ್ಮ ಉದ್ದೇಶ’ ಎಂದು ಅವರು ಹೇಳಿದರು.
ಶಾಲೆಗಳಲ್ಲಿ ಸಂಭ್ರಮ: ನಗರದ ವಾಲ್ಮೀಕಿ ವೃತ್ತ ಬಳಿಯ ಸರ್ಕಾರಿ ಪ್ರಾಥಮಿಕ ಶಾಲೆ, ಊರಮ್ಮನಬಯಲಿನ ಶ್ರೀಮತಿ ಕಟ್ಟಾ ಕೃಷ್ಣವೇಣಮ್ಮ ಸ್ಮಾರಕ ಬಾಲಕಿಯರ ಪ್ರೌಢಶಾಲೆ, ಕಾರಿಗನೂರಿನ ಪ್ರೌಢಶಾಲೆ ಸಹಿತ ನಗರದ ಆರು ಶಾಲೆಗಳಲ್ಲಿ ಈ ದಂಪತಿ ನಡೆಸಿಕೊಟ್ಟ ಹಕ್ಕಿಗಳ ಅರಿವು ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ಮಾತ್ರವಲ್ಲ ಶಿಕ್ಷಕರಿಂದಲೂ ಉತ್ತಮ ಸ್ಪಂದನ ವ್ಯಕ್ತವಾಯಿತು. ಈ ದಂಪತಿಗೆ ಇಬ್ಬರು ಪುಟಾಣಿ ಮಕ್ಕಳಿದ್ದು, ಅವರನ್ನೂ ತಮ್ಮ ಜತೆಗೆ ಕರೆದೊಯ್ದು, ಮಕ್ಕಳ ಜತೆಗೇ ಕೂರಿಸಿಕೊಂಡು ಅಟ, ಪಾಠ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.