ಹೊಸಪೇಟೆ (ವಿಜಯನಗರ): ‘ನಾನು 2002ರಲ್ಲಿ ಸಂದಿಗ್ಧ ಸ್ಥಿತಿಯಲ್ಲಿದ್ದಾಗ ಅಜ್ಜೇರ್‌ನ ಕ್ವಾಜಾ ಗರೀಬ್ ನವಾಜ್ ದರ್ಗಾ ಷರೀಫ್‌ಗೆ ತೆರಳಿ ಸಂತರಿಗೆ ಪ್ರಾರ್ಥನೆ ಸಲ್ಲಿಸಿದೆ, ಅದರ ಬಳಿಕ ನನಗೊಂದು ಸ್ಪಷ್ಟ ದಾರಿ ಗೋಚರಿಸಿತು. ಇದನ್ನು ನಾನು ಎಂದೂ ಮರೆಯಲಾರೆ’ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ಪ್ರವಾದಿ ಮುಹಮ್ಮದ್ ಪೈಗಂಬರರ 1,500ನೇ ಜನ್ಮದಿನಾಚರಣೆ ಪ್ರಯುಕ್ತ ಶುಕ್ರವಾರ ಇಲ್ಲಿ ಜಶ್ನೆ ಈದ್ ಮಿಲಾದ್ ಕಮಿಟಿಯ ವತಿಯಿಂದ ನಡೆದ ಈದ್ ಮಿಲಾದ್ ಮೆರವಣಿಗೆಯ ಬಳಿಕ ನಡೆದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
‘ನನಗೆ ಈ ಬಾರಿ ಟಿಕೆಟ್ ಕೊಡಿಸಿದ್ದು ಬಳ್ಳಾರಿಯ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್. ನನ್ನ ಮೇಲೆ ಭರವಸೆ ಇಟ್ಟಿದ್ದಕ್ಕೆ ಹಾಗೂ ನನಗೆ ಬೆಂಬಲವಾಗಿ ನಿಂತಿದ್ದಕ್ಕೆ ನಾನು ಮುಸ್ಲಿಂ ಸಮುದಾಯಕ್ಕೆ ಚಿರಋಣಿಯಾಗಿದ್ದೇನೆ’ ಎಂದರು.
‘ಪ್ರವಾದಿ ಮುಹಮ್ಮದ್ ಅವರು ಸಾರಿದ ಸಂದೇಶ ಸಾರ್ವಕಾಲಿಕವಾದುದು ಮತ್ತು ಶಾಂತಿ, ಸೌಹಾರ್ದ ಬೆಳೆಸುವಂತದ್ದು’ ಎಂದು ಶಾಸಕರು ಹೇಳಿದರು.
ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ಹಾಗೂ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಪ್ರವಾದಿ ಮುಹಮ್ಮದ್ (ಸ.ಅ) ಅವರ ಜೀವನದ ಕುರಿತು ಹಾಗೂ ಅವರು ನೀಡಿರುವ ಸಂದೇಶಗಳನು ಮೆಲುಕು ಹಾಕಿದರು.
ಮುಸ್ಲಿಂ ಸಮಾಜದ ಗುರುಗಳಾದ ಅಬೂಬಕ್ಕರ್, ಇರ್ತಾದ್ ಅಹ್ಮದ್, ಇಸಾರ್ ಹುಸೇನ್, ಇಸ್ಮಾಯಿಲ್ ಮೌಲಾನಾ, ಜಿಲನ್, ಖಾಜಿ ಹಾಸಿನ್ ಇತರರು ಪೈಗಂಬರರ ಸಂದೇಶಗಳನ್ನು ಮನವರಿಕೆ ಮಾಡಿದರು.
ಜಸ್ಟ್ನೆ ಈದ್ ಮಿಲಾದ್ ಕಮಿಟಿಯ ಅಧ್ಯಕ್ಷ ಬಡಾವಲಿ, ಕಾರ್ಯಧ್ಯಕ್ಷ ಸೈಯದ್ ಖಾದರ್ ರಫಾಯಿ, ಮುಖಂಡರಾದ ನಿಸಾರ್, ಶಮ್ಶುದ್ದೀನ್, ಇಮ್ತಿಯಾಜ್, ಇಬ್ರಾಹಿಂ ಖಾನ್, ರಹಮತುಲ್ಲಾ, ದಾದಾಪೀರ್, ಶೇಖ್ ಅಹಮದ್, ಭಾಷಾ, ಮೆಹಬೂಬ್, ಜಾಫರ್, ಮೈನುದ್ದೀನ್ ಕೆ,ಕೆ. ಇತರರು ಇದ್ದರು.
ನಗರದಲ್ಲಿ ಜಶ್ನೆ ಈದ್ ಮಿಲಾದ್ ಕಮಿಟಿ ಸತತ 34 ವರ್ಷಗಳಿಂದ ಈದ್ ಮಿಲಾದ್ ಮೆರವಣಿಗೆ ಮತ್ತು ಸಮಾವೇಶ ನಡೆಸುತ್ತ ಬಂದಿರುವುದನ್ನು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.
ಸಿರುಗುಪ್ಪ: ನಗರದಲ್ಲಿ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಹಬ್ಬವನ್ನು ವಿವಿಧ ಸ್ತಬ್ಧ ಚಿತ್ರಗಳ ಮೆರವಣಿಗೆಯ ಮೂಲಕ ಶುಕ್ರವಾರ ಸಂಭ್ರಮದಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ನಗರದ ಎಲ್ಲಾ ಮಸೀದಿ, ದರ್ಗಾಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಮಧ್ಯಾಹ್ನ 3ಗಂಟೆಗೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಿ ಮುಹಮ್ಮದ್ ಪೈಗಂಬರ ಪರ ಘೋಷಣೆ ಕೂಗಿದರು. ಟ್ರ್ಯಾಕ್ಟರ್‌ಗಳ ಮೇಲೆ ಮುಸ್ಲಿಮರ ಪುಣ್ಯ ಕ್ಷೇತ್ರಗಳಾದ ಮೆಕ್ಕಾ ಹಾಗೂ ಮದೀನಾಗಳ ಸ್ತಬ್ಧ ಚಿತ್ರಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ಜರುಗಿತು.
ಮೆರವಣಿಗೆಯ ಉದ್ದಕ್ಕೂ ಸಮುದಾಯದ ಜನರು ಮುಹಮ್ಮದ್ ಪೈಗಂಬರ್ ಜೀವನ ಸಂದೇಶಗಳನ್ನು ಸಾರಿದರು. ಕೆಲವರು ಖುರಾನ್ ಪಠಣ ಮಾಡುತ್ತಾ ಸಾಗಿದರೆ. ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
‘ದುಡಿಮೆ ಬೇಡ ಶಿಕ್ಷಣ ಬೇಕು‘, ‘ಪಡೋಗೆ ತೋಹ ಬಡೋಗೆ‘, ‘ರಕ್ತದಾನ ಮಹಾದಾನ‘, ಶಿಕ್ಷಣ ಮಹತ್ವ, ಬಾಲಕಾರ್ಮಿಕ ಪದ್ದತಿ ವಿರೋಧ, ರಕ್ತದಾನ ಮಹತ್ವ ಸಾರುವ ಚಿತ್ರ ಎಲ್ಲರ ಆಕರ್ಷಣೆಯಾಗಿತ್ತು.
ಕುರುಗೋಡು: ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಾಂತ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಮುಷ್ಟಗಟ್ಟೆ ರಸ್ತೆಯಲ್ಲಿರುವ ಅಕ್ಬರ್ ಷಾ ಜಾಮಿಯಾ ಮಸೀದಿ ಮತ್ತು ಬಳ್ಳಾರಿ ರಸ್ತೆಯಲ್ಲಿರುವ ಮದೀನಾ ಮಸೀದಿ ಯಿಂದ ಮೆಕ್ಕ ಮತ್ತು ಮದೀನಾ ಮಾದರಿಗಳನ್ನು ಮೆರವಣಿಗೆ ಮಾಡಲಾಯಿತು.
ಸ್ತಬ್ದಚಿತ್ರಗಳನ್ನು ಹೊತ್ತ ಅಲಂಕೃತ ಟ್ರ್ಯಾಕ್ಟರ್‌ಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಜನರು ಮೆರವಣಿಗೆಯ ಸೊಬಗನ್ನು ಕಣ್ತುಂಬಿಕೊಂಡರು.
ಮೆರವಣಿಗೆಯಲ್ಲಿ ಕೆಲವರು ತಂಪುಪಾನಿಯ, ಬಾಳೆಹಣ್ಣು ಮತ್ತು ಸಿಹಿ ತಿನಿಸು ವಿತರಿಸಿ ಭಾವೈಕ್ಯತೆ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.