ADVERTISEMENT

ಹುಗಲೂರು: ರಾಷ್ಟ್ರಕೂಟರ ಕಾಲದ ಕನ್ನಡ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 23:37 IST
Last Updated 27 ಜನವರಿ 2026, 23:37 IST
ಹೂವಿನಹಡಗಲಿ ತಾಲ್ಲೂಕಿನ ಹುಗಲೂರು ಗ್ರಾಮದಲ್ಲಿ ಪತ್ತೆಯಾದ ರಾಷ್ಟ್ರಕೂಟರ ಕಾಲದ ಕನ್ನಡದ ಶಿಲಾಶಾಸನ
ಹೂವಿನಹಡಗಲಿ ತಾಲ್ಲೂಕಿನ ಹುಗಲೂರು ಗ್ರಾಮದಲ್ಲಿ ಪತ್ತೆಯಾದ ರಾಷ್ಟ್ರಕೂಟರ ಕಾಲದ ಕನ್ನಡದ ಶಿಲಾಶಾಸನ   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಹುಗಲೂರು ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ನವರಂಗ ಮಂಟಪದಲ್ಲಿ ರಾಷ್ಟ್ರಕೂಟರ ಕಾಲದ ಕನ್ನಡ ಶಾಸನ ಪತ್ತೆಯಾಗಿದೆ.

‘3.5 ಅಡಿ ಎತ್ತರ, 2 ಅಡಿ ಅಗಲದ ಶಾಸನ 8ನೇ ಶತಮಾನದ್ದು ಎನ್ನಲಾಗಿದೆ. ಮೇಲ್ಭಾಗ ಕುಂಭದೊಳಗೆ ಶಿವಲಿಂಗ, ಎದುರಿಗೆ ಆಕಳು ಕರುವಿಗೆ ಹಾಲುಣಿಸುತ್ತಿರುವ ಚಿತ್ರ ಹಾಗೂ ತುದಿಯಲ್ಲಿ ಸೂರ್ಯ, ಚಂದ್ರರ ಸಂಕೇತಗಳಿವೆ’ ಎಂದು ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಇತಿಹಾಸ ಸಂಶೋಧಕ ಡಿ.ವೀರೇಶ ಹುಗಲೂರು ತಿಳಿಸಿದ್ದಾರೆ.

ಈ ಶಾಸನ ಅಧ್ಯಯನಕ್ಕೆ ಬೆಂಗಳೂರಿನ ಶಾಸನ ವಿದ್ವಾಂಸ ದೇವರಾಜಸ್ವಾಮಿ, ಸಂಶೋಧಕ ಶ್ಯಾಮಸುಂದರಗೌಡ ಮಾರ್ಗದರ್ಶನ ಮಾಡಿದ್ದಾರೆ ಎಂದು ವೀರೇಶ ಹೇಳಿದ್ದಾರೆ.

ADVERTISEMENT

ರಾಷ್ಟ್ರಕೂಟರ ಅರಸ ಅಕಾಳವರ್ಷ ಕನ್ನರದೇವ (ಮೂರನೇ ಕೃಷ್ಣ) ಆಳ್ವಿಕೆಯಲ್ಲಿ ಆತನ ಮಹಾಸಾಮಂತ ರೊಟ್ಟಯ್ಯನು ಆಳುತ್ತಿರುವಾಗ ಅಣ್ಣಯ್ಯನ ಮೊಮ್ಮಗ ಗೊಗ್ಗಯ್ಯನು ಪುಗ್ಗಿಲೂರನ್ನು (ಹುಗಲೂರು) ಆಳ್ವಿಕೆ ಮಾಡುತ್ತಿರುತ್ತಾನೆ. ಗಾವುಂಡನಾದ ಗೊಗ್ಗಯ್ಯನು ಮಲ್ಲಿಕಾರ್ಜುನ ದೇವರ ಸೇವೆಗೆ 54 ಮತ್ತರು ಭೂಮಿಯನ್ನು ವೀಳ್ಯೆದೆಲೆ ಬೆಳೆಯುವುದಕ್ಕೆ ದಾನ ನೀಡುತ್ತಾನೆ. ತಾನು ನೀಡಿದ ಭೂಮಿಯನ್ನಾಗಲೀ, ಪರರು ನೀಡಿದ ಭೂಮಿಯನ್ನಾಗಲೀ ಅಪಹರಿಸಿದರೆ ಅರವತ್ತು ಸಾವಿರ ವರ್ಷ ಸಗಣಿಯ ಹುಳುವಾಗಿ ಹುಟ್ಟುತ್ತಾನೆ ಎಂಬ ಶಾಪಾಶಯ ಭಾಗವಿದೆ. ಜೊತಗೆ ಚತುರ್ವಿಧ ದಾನವು ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬ ಉಲ್ಲೇಖವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.