ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯಲ್ಲಿ 17 ಸಾವಿರದಷ್ಟು ಆದಾಯ ತೆರಿಗೆ ಪಾವತಿದಾರರು ಇದ್ದು, ಕಳೆದ ಆರ್ಥಿಕ ವರ್ಷದಲ್ಲಿ ₹17 ಕೋಟಿ ಆದಾಯ ತೆರಿಗೆ ಇಲ್ಲಿಂದ ಸಂಗ್ರಹವಾಗಿತ್ತು ಎಂದು ಆದಾಯ ತೆರಿಗೆ ಅಧಿಕಾರಿ ಕೆ.ಲೋಕೇಶ್ ತಿಳಿಸಿದರು.
ಇಲ್ಲಿ ಬುಧವಾರ ನಡೆದ ಆದಾಯ ತೆರಿಗೆ ಇಲಾಖೆಯ 165ನೇ ಸಂಸ್ಥಾಪನಾ ದಿನ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಯಾವುದೇ ಆದಾಯ ತೆರಿಗೆ ದಾಳಿ ನಡೆದಿಲ್ಲ, ಬದಲಿಗೆ ಜನರಿಗೆ ತೆರಿಗೆ ಪಾವತಿಸುವ ನಿಟ್ಟಿನಲ್ಲಿ ಸಲಹೆ, ಮಾರ್ಗದರ್ಶನ, ಮನವೊಲಿಕೆ ಕೆಲಸ ನಡೆಸಲಾಗುತ್ತಿದೆ ಎಂದರು.
‘ಗಣಿಗಾರಿಕೆ ಕುಂಠಿತಗೊಂಡ ಬಳಿಕ ತೆರಿಗೆ ಪಾವತಿ ಕಡಿಮೆಯಾಗಿದೆ. ಆದರೆ ಪ್ರವಾಸೋದ್ಯಮ, ಹೋಟೆಲ್‌ಗಳ ಸಹಿತ ಹಲವು ಆದಾಯ ತೆರಿಗೆ ಮೂಲಗಳು ಇವೆ. ತೆರಿಗೆ ಕಳ್ಳತನ ಮಾಡುವವರ ಮಾಹಿತಿ ಸಂಗ್ರಹಿಸಿ ಅವರಿಗೆ ತಿಳಿಹೇಳಿ ತೆರಿಗೆ ಪಾವತಿಸುವಂತೆ ಮಾಡುವ ಕೆಲಸ ನಿರಂತರ ನಡೆಯುತ್ತಿದೆ ಈ ಭಾಗದ ಲೆಕ್ಕಪರಿಶೋಧಕರು ಸಹ ಉತ್ತಮವಾಗಿ ಸಹಕರಿಸುತ್ತಿದ್ದಾರೆ. ಉದ್ಯೋಗದಾತರು ತೆರಿಗೆ ಕಳ್ಳತನಕ್ಕೆ ಯತ್ನಿಸಿದರೆ ಅದನ್ನು ತಡೆಗಟ್ಟುವ ವ್ಯವಸ್ಥೆ ಸಹ ಮಾಡಲಾಗಿದೆ’ ಎಂದು ಅವರು ತಿಳಿಸಿದರು.
ಇದಕ್ಕೆ ಮೊದಲು ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಇನ್ನೊಬ್ಬ ಆದಾಯ ತೆರಿಗೆ ಅಧಿಕಾರಿ ವಿಜಯಸಾರಥಿ, ಜಿಎಸ್‌ಟಿ ಸಹಾಯಕ ಆಯುಕ್ತ ತಿರುಮುಗನಾಥನ್, ಚಾರ್ಟರ್ಡ್ ಅಕೌಂಟೆಂಟ್ ರವೀಂದ್ರನಾಥ ಗುಪ್ತ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶ್ವಿನ್ ಕೋತಂಬರಿ, ಗುತ್ತಿಗೆದಾರ ತಿರುಪತಿ ನಾಯ್ಡು ಮಾತನಾಡಿದರು.
ಜಿಎಸ್‌ಟಿ ವಿಚಾರದಲ್ಲಿ ದಂಡಕ್ಕಿಂತ ಬಡ್ಡಿಯನ್ನೇ ಅಧಿಕ ಪ್ರಮಾಣದಲ್ಲಿ ವಸೂಲಿ ಮಾಡುವ ಕ್ರಮಕ್ಕೆ ತಿರುಪತಿ ನಾಯ್ಡು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಇಲಾಖೆಯ ನಿವೃತ್ತ ಅಧಿಕಾರಿ ಸಿ.ಅಯ್ಯಣ್ಣ, ವಿಜಯ್ ಸಿಂದಗಿ, ರೇಖಾ ಪ್ರಕಾಶ್, ಆದಾಯ ತೆರಿಗೆ ಪ್ರಾಕ್ಟೀಷನರ್ ರವಿ ಸಹಿತ ಹಲವರನ್ನು ಸನ್ಮಾನಿಸಲಾಯಿತು. ಅಂಜಲಿ ನಾಟ್ಯಕಲಾ ಸಂಘದ ಕಲಾವಿದರಿಂದ ಆಕರ್ಷಕ ನೃತ್ಯ ಪ್ರದರ್ಶನ ನಡಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.