ADVERTISEMENT

ಹೊಸಪೇಟೆ: ಸದಾಶಿವ ಆಯೋಗದ ವರದಿ ಅಂಗೀಕಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 9:57 IST
Last Updated 19 ಸೆಪ್ಟೆಂಬರ್ 2021, 9:57 IST

ಹೊಸಪೇಟೆ (ವಿಜಯನಗರ): ‘ನ್ಯಾ. ಸದಾಶಿವ ಆಯೋಗದ ವರದಿಯನ್ನು ಪ್ರಸಕ್ತ ವಿಧಾನಸಭೆಯ ಅಧಿವೇಶನದಲ್ಲೇ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಕರ್ನಾಟಕ ಮಾದಾರ ಚೆನ್ನಯ್ಯ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಂ. ಜಯಗೋಪಾಲ್ ಆಗ್ರಹಿಸಿದರು.

‘ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಸರ್ಕಾರ ಇನ್ನಷ್ಟು ವಿಳಂಬ ಮಾಡಬಾರದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜಕೀಯ ಇಚ್ಛಾಶಕ್ತಿ ತೋರಿಸಬೇಕು. ಹಿಂದಿನ ಸಮ್ಮಿಶ್ರ ಸರ್ಕಾರ, ಕಾಂಗ್ರೆಸ್‌ ಸರ್ಕಾರದಂತೆ ವಿಳಂಬ ಮಾಡುವುದು ಬೇಡ’ ಎಂದು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮಾದಿಗ ಸಮಾಜಕ್ಕೆ ಸಾಂವಿಧಾನಿಕ ಸೌಲಭ್ಯಗಳು ಸಿಗುತ್ತಿಲ್ಲ. ಸದಾಶಿವ ಆಯೋಗದ ವರದಿ ಜಾರಿಗೆ ಬಂದರೆ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಮಾಜದವರು ಇತರೆ ಸಮಾಜದವರಂತೆ ಮುಖ್ಯ ವಾಹಿನಿಗೆ ಬರಬೇಕಾದರೆ ಅವರಿಗೆ ಎಲ್ಲಾ ಸವಲತ್ತುಗಳು ಸಿಗಬೇಕು. ಆದರೆ, ಈಗಿರುವ ಮೀಸಲಾತಿ ವ್ಯವಸ್ಥೆಯಲ್ಲಿ ಅನ್ಯ ಸಮಾಜದವರಿಗೆ ಎಲ್ಲಾ ಸವಲತ್ತುಗಳು ದೊರೆಯುತ್ತಿವೆ. ಮಾದಿಗರಿಗೆ ಅನ್ಯಾಯವಾಗುತ್ತಿದೆ’ ಎಂದು ಆರೋಪಿಸಿದರು.

‘ಶಿವಶರಣ ಮಾದಾರ ಚೆನ್ನಯ್ಯನವರ ಜನ್ಮಸ್ಥಳವಾದ ಶಿವಮೊಗ್ಗದ ಬಳ್ಳಿಗಾವಿಯನ್ನು ಕಾಯಕ ಜೀವಿಗಳ ಸಾಂಸ್ಕೃತಿಕ ಕೇಂದ್ರವಾಗಿ ಸರ್ಕಾರ ಅಭಿವೃದ್ಧಿ ಪಡಿಸಬೇಕು. ಮಾದಿಗರ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ಆದಿಜಾಂಬವ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಕೊಡಬೇಕು. ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಮಾದಾರ ಚೆನ್ನಯ್ಯನವರ ಹೆಸರು ಇಡಬೇಕು’ ಎಂದು ಹಕ್ಕೊತ್ತಾಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.