ಹಗರಿಬೊಮ್ಮನಹಳ್ಳಿ: ಜಗಳೂರು ತಾಲ್ಲೂಕಿನ ಎರಡು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿರುವ ಕಾರಣ ತಾಲ್ಲೂಕಿನ ಮಾಲವಿ ಜಲಾಶಯ ತುಂಬಿದೆ, ಹೀಗಾಗಿ ತಡೆಗೋಡೆಯನ್ನು ಶನಿವಾರ ಸ್ವಲ್ಪ ಒಡೆದು ಹಗರಿ ಹಳ್ಳದ ಮೂಲಕ ತುಂಗಭದ್ರಾ ನದಿಗೆ ಬಿಡಲಾಗಿದೆ.
‘ತಾಲ್ಲೂಕಿನ ಮಾಲವಿ ಜಲಾಶಯದಲ್ಲಿ ಸಂಗ್ರಹಗೊಂಡಿರುವ ನೀರು ತಡೆಗೋಡೆ ಒಡೆದು ಹೊರ ಹೋಗಿರುವುದಲ್ಲ. ಜಲಾಶಯದಲ್ಲಿ ಇದೀಗ ಕ್ರೆಸ್ಟ್‌ಗೇಟ್‌ಗಳ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಕ್ರೆಸ್ಟ್‌ಗೇಟ್ ಬಳಿ ನೀರು ನೀರು ಬರದಂತೆ ತಡೆಗೋಡೆ ನಿರ್ಮಿಸಲಾಗಿದೆ. ಅದರಲ್ಲಿ ಒಂದು ಭಾಗವನ್ನು ನೀರು ಹರಿಯಲು ಅನುವು ಮಾಡಿಕೊಡಲಾಗಿದೆ ಅಷ್ಟೇ’ ಎಂದು ಮಾಲವಿ ಜಲಾಶಯದ ಶಾಖಾಧಿಕಾರಿ ಹುಲಿರಾಜ್ ಶನಿವಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಾಲವಿ ಜಲಾಶಯದ 10 ಕ್ರೆಸ್ಟ್‌ಗೇಟ್‌ಗಳ ದುರಸ್ತಿ ಕಾರ್ಯ ಇದೀಗ ನಡೆಯುತ್ತಿದೆ. ಈಗಾಗಲೇ ಮೂರು ಗೇಟ್‌ಗಳನ್ನು ದುರಸ್ತಿಗೊಳಿಸಿ ಅಳವಡಿಸಲಾಗಿದೆ. ಇತರ ಗೇಟ್‌ಗಳ ದುರಸ್ತಿ ಕಾರ್ಯ ನಡೆಯುತ್ತಿದೆ’ ಎಂದು ಅವರು ಹೇಳಿದ್ದಾರೆ.
2 ಟಿಎಂಸಿ ಅಡಿ ಸಾಮರ್ಥ್ಯದ ಮಾಲವಿ ಜಲಾಶಯ ಈ ಬಾರಿ ಉತ್ತಮ ಮಳೆಯ ಕಾರಣಕ್ಕೆ ಭರ್ತಿಯಾಗುವುದು ಖಚಿತವಾಗಿತ್ತು. ಆದರೆ ಕ್ರೆಸ್ಟ್‌ಗೇಟ್‌ಗಳ ದುರಸ್ತಿ ಕಾರ್ಯ ಕೈಗೆತ್ತಿಕೊಂಡ ಕಾರಣ ಬಹಳಷ್ಟು ನೀರು ಈಗಾಗಲೇ ಹಗರಿ ಹಳ್ಳದ ಮೂಲಕ ತುಂಗಭದ್ರಾ ನದಿ ಒಡಲು ಸೇರಿದೆ. ಈ ಜಲಾಶಯ 16 ಹಳ್ಳಿಗಳ 8 ಸಾವಿರ ಎಕರೆಗೆ ನೀರುಣಿಸುವ ಸಾಮರ್ಥ್ಯ ಹೊಂದಿದೆ. ಇನ್ನೂ ಆರು ತಿಂಗಳೊಳಗೆ ಕ್ರೆಸ್ಟ್‌ಗೇಟ್ ಅಳವಡಿಕೆ ಕಾರ್ಯ ಪೂರ್ಣಗೊಳ್ಳದ ಕಾರಣ ಈ ಬಾರಿ ಜಲಾಶಯದ ನೀರು ರೈತರಿಗೆ ಲಭ್ಯವಾಗುವುದಿಲ್ಲ. ಹೀಗಾಗಿ ಇದೀಗ ಪೋಲಾಗುತ್ತಿರುವ ನೀರು ಜಲಾಶಯದಲ್ಲಿ ಸಂಗ್ರಹಗೊಂಡರೂ ಯಾವುದೇ ಪ್ರಯೋಜನಕ್ಕೆ ಬಾರದಂತಹ ನೀರೇ ಆಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.