ADVERTISEMENT

ಜಂಪ್‌ರೋಪ್‌; ವಿಜಯನಗರದಲ್ಲಿ ನೂತನ ಗಿನ್ನಿಸ್‌ ದಾಖಲೆ

ಸತತ 36 ಗಂಟೆ ಡಬಲ್‌ ಡಚ್‌ ಸ್ಪರ್ಧೆ ಆಡಿದ ಸ್ಪರ್ಧಾಳುಗಳು

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 17:00 IST
Last Updated 30 ಜುಲೈ 2022, 17:00 IST
ಹೊಸ ದಾಖಲೆ ಬರೆದ ಸ್ಪರ್ಧಿಗಳು ಭಾರತ ಧ್ವಜದೊಂದಿಗೆ ಸಂಭ್ರಮಾಚರಿಸಿದರು
ಹೊಸ ದಾಖಲೆ ಬರೆದ ಸ್ಪರ್ಧಿಗಳು ಭಾರತ ಧ್ವಜದೊಂದಿಗೆ ಸಂಭ್ರಮಾಚರಿಸಿದರು   

ಹೊಸಪೇಟೆ (ವಿಜಯನಗರ): ನಗರದಲ್ಲಿ ಆಯೋಜಿಸಿದ್ದ 19ನೇ ರಾಷ್ಟ್ರೀಯ ಜಂಪ್‍ರೋಪ್‌ ‘ಡಬಲ್ ಡಚ್’ ಚಾಂಪಿಯನ್‌ಶಿಪ್‌ ಶನಿವಾರ ನೂತನ ಗಿನ್ನಿಸ್‌ ದಾಖಲೆ ಬರೆಯಿತು.

18 ರಾಜ್ಯಗಳ 150 ಸ್ಪರ್ಧಾಳುಗಳು ಸತತ 36 ಗಂಟೆ ಜಂಪ್‌ರೋಪ್‌ ಆಡಿ ಹೊಸ ದಾಖಲೆ ಬರೆದರು. ಶುಕ್ರವಾರ ಬೆಳಿಗ್ಗೆ 8ಕ್ಕೆ ಆರಂಭಗೊಂಡಿದ್ದ ಸ್ಪರ್ಧೆ ಶನಿವಾರ ರಾತ್ರಿ 8ಕ್ಕೆ ಕೊನೆಗೊಂಡಿತು. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನ ಅಧ್ಯಕ್ಷ ಶೌನ್, ಉಪಾಧ್ಯಕ್ಷ ಥಕಾಶಿ ಅವರು ನೂತನ ದಾಖಲೆ ಸೃಷ್ಟಿಯಾಗಿದೆ ಎಂದು ಘೋಷಿಸಿದರು. ಈ ವೇಳೆ ಸ್ಪರ್ಧಾಳುಗಳಲ್ಲಿ ಹರ್ಷ ಮುಗಿಲು ಮುಟ್ಟಿತು. ಎಲ್ಲರೂ ಪರಸ್ಪರ ತಬ್ಬಿಕೊಂಡು ಸಂತಸ ಹಂಚಿಕೊಂಡರು. ಭಾರತದ ತ್ರಿವರ್ಣ ಧ್ವಜ ಹಾಗೂ ಕನ್ನಡ ಧ್ವಜ ಹಿಡಿದು ಸಂಭ್ರಮಿಸಿದರು. ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಜಂಪ್‍ರೋಪ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ಜಂಪ್‍ರೋಪ್ ಅಸೋಸಿಯೇಷನ್‌, ವಿಕಾಸ ಬ್ಯಾಂಕ್ ಸಹಭಾಗಿತ್ವದಲ್ಲಿ ಚಾಂಪಿಯನ್‌ಶಿಪ್‌ ಹಮ್ಮಿಕೊಳ್ಳಲಾಗಿತ್ತು. ಜಂಪ್‌ ರೋಪ್‌ ಫೆಡರೇಶನ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‍ ರಜಾಕ್‌, ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ, ಫೆಡರೇಶನ್‌ ಸಹ ಕಾರ್ಯದರ್ಶಿ ಸಾಜೀದ್‍ಖಾನ್, ನಿರ್ದೇಶಕ ಅನಂತ ಜೋಶಿ, ಹಿರಿಯ ನಿರ್ದೇಶಕ ಅಶೋಕ ದುಗಾರೆ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.