ADVERTISEMENT

ಹೂವಿನಹಡಗಲಿ: ಪೌರ ಕಾರ್ಮಿಕ ಮಹಿಳೆ ಮುಡಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

ಅರ್ಜಿ ಹಾಕದೇ ಪ್ರಶಸ್ತಿ ಗಿಟ್ಟಿಸಿಕೊಂಡ ದಲಿತ ಮಹಿಳೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 15:59 IST
Last Updated 30 ಅಕ್ಟೋಬರ್ 2022, 15:59 IST
ಮಲ್ಲಮ್ಮ
ಮಲ್ಲಮ್ಮ   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಪಟ್ಟಣದ ಬೀದಿಗಳನ್ನು ಗುಡಿಸಿ, ನೈರ್ಮಲ್ಯ ಕಾಪಾಡುವ ಕಾಯಕವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಪೌರ ಕಾರ್ಮಿಕ ಮಹಿಳೆ ಎಂಟುಮನಿ ಮಲ್ಲಮ್ಮ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಪ್ರಶಸ್ತಿಗಾಗಿ ಇವರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿಲ್ಲ. ಯಾರಿಂದಲೂ ಶಿಫಾರಸು ಮಾಡಿಸಿಲ್ಲ. ಪೌರ ಕಾರ್ಮಿಕ ಮಹಿಳೆಯ ಉತ್ತಮ ಸೇವೆಯನ್ನು ಸರ್ಕಾರವೇ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಶೇಷ.

ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ಮಿಕರಾಗಿದ್ದ ಇವರ ಪತಿ ಎ.ಪರಶುರಾಮಪ್ಪ 1986ರಲ್ಲಿ ನಿಧನರಾದ ಬಳಿಕ ಮಲ್ಲಮ್ಮ ಅನುಕಂಪ ಆಧಾರದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ್ದಾರೆ.

ಸೇವೆಗೆ ಸೇರಿದಾಗಿನಿಂದ ಹೆಚ್ಚು ರಜೆಗಳನ್ನು ಪಡೆಯದೇ ಸ್ವಚ್ಛತಾ ಸಿಬ್ಬಂದಿಯಾಗಿ ಮಲ್ಲಮ್ಮ ಉತ್ತಮ ಸೇವೆ ಸಲ್ಲಿಸಿದ್ದಾರೆ. ಹಬ್ಬ ಹರಿದಿನ, ಕುಟುಂಬದ ಕಾರ್ಯಕ್ರಮಗಳನ್ನೂ ಲೆಕ್ಕಿಸದೇ ದಿನಂಪ್ರತಿ ಬೀದಿ ಗುಡಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಮಲ್ಲಮ್ಮ 2020ರ ಜನವರಿ 31 ರಂದು ನಿವೃತ್ತಿ ಹೊಂದಿದ್ದಾರೆ.

ಯಾವುದೇ ಪ್ರಶಸ್ತಿ, ಪುರಸ್ಕಾರದ ಹಂಗಿಲ್ಲದೇ, 34 ವರ್ಷಗಳಿಂದ ಪಟ್ಟಣ ನೈರ್ಮಲ್ಯ ಕಾಪಾಡುವ ಕೆಲಸದಲ್ಲಿ ಭಾಗಿಯಾದ ಈ ಮಹಿಳೆಯನ್ನು ಪ್ರಶಸ್ತಿಯೇ ಹುಡುಕಿಕೊಂಡು ಬಂದಿದೆ.

‘ನನಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದಾಗ ನಂಬಲಾಗಲಿಲ್ಲ. ಸೇವೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತೋಷ ತಂದಿದೆ’ ಎಂದು ಮಲ್ಲಮ್ಮ ಹೇಳಿದರು.

‘ನಾನು ಕೆಲಸಕ್ಕೆ ಸೇರಿದಾಗ ಮಕ್ಕಳೆಲ್ಲಾ ಚಿಕ್ಕವರಿದ್ರು. ಅತ್ತೆ ಬಳಿ ಮಕ್ಕಳನ್ನು ಬಿಟ್ಟು, ಬೆಳಗಿನಜಾವ ನಾಲ್ಕುವರೆಗೆ ಬೀದಿ ಗುಡಿಸಲು ಹೋಗುತ್ತಿದ್ದೆ. ನಮ್ಮಂತವರಿಗೆ ಪ್ರಶಸ್ತಿ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ’ ಎಂದರು.

‘ಪೌರ ಕಾರ್ಮಿಕ ಮಹಿಳೆ ಮಲ್ಲಮ್ಮನಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ನಮಗೆ ಹೆಮ್ಮೆ ತಂದಿದೆ. ಅವರನ್ನು ಪುರಸಭೆಯಿಂದಲೂ ಅಭಿನಂದಿಸುತ್ತೇವೆ’ ಎಂದು ಪುರಸಭೆ ಅಧ್ಯಕ್ಷ ಜ್ಯೋತಿ ಮಲ್ಲಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.