ADVERTISEMENT

ವಿಜಯನಗರ | ಜಿಲ್ಲೆಯಲ್ಲಿ 825 ತೀವ್ರ ಅಪೌಷ್ಟಿಕತೆ ಮಕ್ಕಳು: ಕಳವಳ

ಹೊಸಪೇಟೆಯ ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಆಯೋಗ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 10:06 IST
Last Updated 17 ಜೂನ್ 2025, 10:06 IST
   

ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯ 825 ಮಕ್ಕಳು ಇರುವುದು ಕಳವಳಕಾರಿ ಸಂಗತಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೇಳಿದೆ.

ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ, ಡಾ. ತಿಪ್ಪೇಸ್ವಾಮಿ ಕೆ.ಟಿ. ಹಾಗೂ ಶೇಖರಗೌಡ ರಾಮತ್ನಾಳ ನೇತೃತ್ವದ ತಂಡ ಮಂಗಳವಾರ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ರು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಮಕ್ಕಳ ಅಪೌಷ್ಟಿಕ ಪುನಃಶ್ಚೇತನ ಘಟಕಕ್ಕೆ ಭೇಟಿ ನೀಡಿದ ತಂಡ, ದಾಖಲಾದ ಆರು ಮಕ್ಕಳ ಸ್ಥಿತಿಗತಿ ಪರಿಶೀಲಿಸಿತು.

ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 825 ಮಕ್ಕಳು ಮತ್ತು ಸಾಧಾರಣ ಅಪೌಷ್ಟಿಕತೆಯ 1,250 ಕ್ಕೂ ಹೆಚ್ಚು ಮಕ್ಕಳು ಇದ್ದಾರೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ತಂಡದ ಮಾಹಿತಿ ಪ್ರಕಾರ 451 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಇಷ್ಟೊಂದು ತೀವ್ರ ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತನೆ ಮಾಡುತ್ತಿರುವುದು ಸರಿಯಲ್ಲ ಎಂದು ಆಯೋಗದ ಸದಸ್ಯರು ಹೇಳಿದರು.

ಸೆಖೆ ಇದ್ದರೂ ಎ.ಸಿ ಇಲ್ಲ:

ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವಿಶೇಷ ನವಜಾತ ಶಿಶುಗಳ ಆರೈಕೆ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಯೋಗ, ಇಷ್ಟೊಂದು ಸೆಖೆಯಿದೆ ಆದರೆ ಅಳವಡಿಸಿದ ಎ.ಸಿಗಳನ್ನು ಎಕೆ ಬಂದ್ ಮಾಡಲಾಗಿದೆ ಎಂದು ಪ್ರಶ್ನಿಸಿತು. ದಾಖಲಾದ ಮಕ್ಕಳ ಆರೋಗ್ಯದ ಸ್ಥಿತಿಗತಿಯ ಕುರಿತು ಮಾಹಿತಿ ಪಡೆದುಕೊಂಡಿತು. ಮಕ್ಕಳ ಮಾದರಿ ಚುಚ್ಚು ಮದ್ದು ಕೇಂದ್ರ, ಮಕ್ಕಳ ವಾರ್ಡ್ ಹಾಗೂ ಸ್ಕ್ಯಾನಿಂಗ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ್,, ಆರ್ ಸಿ ಎಚ್ ಅಧಿಕಾರಿ ಡಾ.ಜಂಬಯ್ಯ,‌ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸುದೀಪ್ ಊಂಕಿ ಹಾಗೂ ಇತರರು ಇದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ತಂಡದವರು ಸಮನ್ವಯತೆಯ ತುರ್ತು ಸಭೆ ನಡೆಸಿ, ತೀವ್ರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಸಕಾಲದಲ್ಲಿ ದಾಖಲು ಮಾಡುವ ಮೂಲಕ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಮುಂದಾಗಲಿ
ಶಶಿಧರ ಕೋಸಂಬೆ, ಸದಸ್ಯರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.