ADVERTISEMENT

ಹೊಸಪೇಟೆ: ಎರಡೇ ದಿನದಲ್ಲಿ ತುಂಗಭದ್ರಾ ಜಲಾಶಯಕ್ಕೆ ಹರಿದು ಬಂತು 12 ಟಿಎಂಸಿ ನೀರು

ಒಳಹರಿವು ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕವಾಗುವ ಹೆಚ್ಚಿನ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 7:58 IST
Last Updated 8 ಜುಲೈ 2022, 7:58 IST
ಸಮುದ್ರದಂತೆ ಭಾಸವಾಗುತ್ತಿರುವ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶ
ಸಮುದ್ರದಂತೆ ಭಾಸವಾಗುತ್ತಿರುವ ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶ   

ಹೊಸಪೇಟೆ (ವಿಜಯನಗರ): ಜಲಾನಯನ ಪ್ರದೇಶ ಹಾಗೂ ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಸತತ ಹೆಚ್ಚಳವಾಗುತ್ತಿದೆ.

ಎರಡೇ ದಿನಗಳಲ್ಲಿ ಅಣೆಕಟ್ಟೆಗೆ 12 ಟಿಎಂಸಿ ಅಡಿಗಿಂತಲೂ ಅಧಿಕ ನೀರು ಹರಿದು ಬಂದಿದೆ. ಸದ್ಯ 75,843 ಕ್ಯುಸೆಕ್‌ ಸರಾಸರಿ ನೀರಿನ ಒಳಹರಿವು ಇದೆ. ಇದೇ ರೀತಿ ಮಳೆಯಿದ್ದರೆ 1 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರು ಹರಿದು ಬರಬಹುದು ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ 60941 ಕ್ಯುಸೆಕ್‌ ಒಳಹರಿವು ದಾಖಲಾದರೆ, ಬುಧವಾರ 34075 ಕ್ಯುಸೆಕ್‌, ಮಂಗಳವಾರ 22,536 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು.

ಒಟ್ಟು 133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 105.788 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದು. ಶುಕ್ರವಾರಕ್ಕೆ ಜಲಾಶಯದಲ್ಲಿ 64.728 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಗುರುವಾರ 58.212 ಟಿಎಂಸಿ ಅಡಿ, ಬುಧವಾರ 52.989 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು. ಒಂದು ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರು ಬರುವ ಸಾಧ್ಯತೆ ಇರುವುದರಿಂದ ನಾಲ್ಕೈದು ದಿನದೊಳಗೆ ಜಲಾಶಯ ಸಂಪೂರ್ಣ ತುಂಬಬಹುದು.

ನದಿ ತೀರ ಪ್ರದೇಶಗಳಲ್ಲಿ ಕಟ್ಟೆಚ್ಚರ:ಜಿಲ್ಲೆಯ ಹರಪನಹಳ್ಳಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ನದಿ ತೀರದ ಗ್ರಾಮಗಳಲ್ಲಿ ಜಿಲ್ಲಾಡಳಿತದಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಸತತವಾಗಿ ನದಿ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಅಪಾಯ ಇರುವ ಗ್ರಾಮಗಳಲ್ಲಿ ಡಂಗುರ ಸಾರಲಾಗಿದೆ. ಮೀನುಗಾರರು, ಜನ ನದಿ ತೀರದಲ್ಲಿ ಓಡಾಡದಂತೆ ಕ್ರಮ ಕೈಗೊಳ್ಳಲಾಗಿದೆ.

ಮುಂದುವರಿದ ಮಳೆ:ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ಶುಕ್ರವಾರ ಬೆಳಿಗ್ಗೆಯಿಂದ ಎಡೆಬಿಡದೇ ಜಿಟಿಜಿಟಿ ಮಳೆಯಾಗುತ್ತಿದೆ. ಸತತ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ವಾತಾವರಣ ಸಂಪೂರ್ಣ ತಂಪಾಗಿದೆ. ನಾಲ್ಕೈದು ದಿನಗಳಿಂದ ಜಿಲ್ಲೆಯಾದ್ಯಂತ ಕಾರ್ಮೋಡ ಕವಿದ ವಾತಾವರಣ ಇತ್ತು. ಬಿಟ್ಟು ಬಿಟ್ಟು ತುಂತುರು ಮಳೆಯಾಗುತ್ತಿತ್ತು. ತಾಲ್ಲೂಕಿನ ಹಂಪಿ, ಕಮಲಾಪುರ, ಕಡ್ಡಿರಾಂಪುರ, ಹೊಸೂರು, ಬಸವನದುರ್ಗ, ಕಾಳಘಟ್ಟ, ಧರ್ಮದಗುಡ್ಡ, ನಾಗೇನಹಳ್ಳಿ ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.