ADVERTISEMENT

ಸಂಭ್ರಮದಿಂದ ಜರುಗಿದ ಕೊಟ್ಟೂರೇಶ್ವರ ರಥೋತ್ಸವ

ಲಕ್ಷಾಂತರ ಭಕ್ತರು ಭಾಗಿ: ರಥಕ್ಕೆ ಬಾಳೆಹಣ್ಣು, ಉತ್ತುತ್ತಿ ತೂರಿ ಭಕ್ತಿ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 4:33 IST
Last Updated 23 ಫೆಬ್ರುವರಿ 2025, 4:33 IST
ಕೊಟ್ಟೂರಿನ ಕೊಟ್ಟೂರೇಶ್ವರಸ್ವಾಮಿ ರಥೋತ್ಸವದ ಪ್ರಯುಕ್ತ ಪಲ್ಲಕ್ಕಿ ಉತ್ಸವ ಜರುಗಿತುಪ್ರಜಾವಾಣಿ ಚಿತ್ರ: ಲವ.ಕೆ.
ಕೊಟ್ಟೂರಿನ ಕೊಟ್ಟೂರೇಶ್ವರಸ್ವಾಮಿ ರಥೋತ್ಸವದ ಪ್ರಯುಕ್ತ ಪಲ್ಲಕ್ಕಿ ಉತ್ಸವ ಜರುಗಿತುಪ್ರಜಾವಾಣಿ ಚಿತ್ರ: ಲವ.ಕೆ.   

ಕೊಟ್ಟೂರು: ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವು ನೆರೆದಿದ್ದ ಅಪಾರ ಭಕ್ತರ ಸಮ್ಮುಖದಲ್ಲಿ ಶನಿವಾರ ಸಡಗರ, ಸಂಭ್ರಮದಿಂದ ಜರುಗಿತು.

ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ಕ್ರಿಯಾ ಮೂರ್ತಿಗಳ ನೇತೃತ್ವದಲ್ಲಿ ಅರ್ಚಕರ ಬಳಗವು ಪೂಜಾ ಕೈಂಕರ್ಯಗಳನ್ನು ನೇರವೇರಿಸುತ್ತಿದ್ದಂತೆ ಸರತಿ ಸಾಲಿನಲ್ಲಿ ಭಕ್ತರು ಸ್ವಾಮಿಯ ದರ್ಶನ ಪಡೆಯಲು ಮುಂದಾದರು.

ಸಂಜೆ ಶ್ರೀ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದ ನಂತರ ದೇವಸ್ಥಾನದಿಂದ ಸಕಲ ಬಿರುದಾವಳಿಗಳೊಂದಿಗೆ ಹೊರಟ ಪಲ್ಲಕ್ಕಿ ಉತ್ಸವ, ರಥ ಬೀದಿಯ ಮುಖಾಂತರ ಸಕಲ ಮಂಗಲವಾದ್ಯ ಮೇಳಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿತು. ದ್ವಾರಬಾಗಿಲ ಹತ್ತಿರ ಬಂದಾಗ ಪರಿಶಿಷ್ಠ ಜಾತಿಯ ಉಡಸಲಮ್ಮ ಹಾಗೂ ದುರ್ಗಮ್ಮ ಅವರು ಸ್ವಾಮಿಗೆ ಆರತಿ ಬೆಳಗಿದ ನಂತರ ಪಲ್ಲಕ್ಕಿ ಉತ್ಸವ ರಥ ಬಯಲಿನತ್ತ ಸಾಗಿತು.

ADVERTISEMENT

ರಥವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕುತ್ತಿದ್ದಂತೆ ಅರ್ಚಕರು ರಥವನ್ನೇರಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದಂತೆ ಭಕ್ತರು ‘ಕೊಟ್ಟೂರ ದೊರೆಯೇ ನಿನಗಾರು ಸರಿಯೇ, ಸರಿ ಸರಿ ಅಂದವರ ಹಲ್ಲು ಮುರಿಯೇ ಬಹುಪರಾಕ್’ ಎಂದು ಜೈಕಾರ ಹಾಕುತ್ತ ರಥವನ್ನು ಎಳೆದರು. ಈ ವೇಳೆ ನೆರದ ಅಪಾರ ಭಕ್ತರು ತೇರಿಗೆ ಬಾಳೆಹಣ್ಣು, ಉತ್ತುತ್ತಿ ಮತ್ತು ದವನವನ್ನು ತೂರಿ ಭಕ್ತಿ ಮೆರದರು. ಗಾಲಿಗಳಿಗೆ ತೆಂಗಿನಕಾಯಿ ಒಡೆದರು. ನಂತರ ರಥವು ಪಾದಗಟ್ಟೆ ತಲುಪಿ ಗೋದೂಳಿ ಸಮಯದಲ್ಲಿ ಮೂಲ ನೆಲೆಗೆ ಬಂದು ನಿಂತಿತು.

ಪಟ್ಟಣಕ್ಕೆ ಸಂಪರ್ಕ ಕಲ್ಪಸುವ ಎಲ್ಲಾ ರಸ್ತೆಗಳಲ್ಲೂ ಸೇವಾರ್ಥಿಗಳು ಎಳೆನೀರು, ಹಣ್ಣು ಹಂಪಲುಗಳನ್ನು ನೀಡಿ ಅವರ ಸೇವೆಗೆ ಮುಂದಾಗಿದ್ದರು. ಪಟ್ಟಣದ ಹೊರವಲಯದಲ್ಲಿ ನಿರ್ಮಿಸಿದ್ದ ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸರು ವಾಹನಗಳನ್ನು ತಡೆದ ಪ್ರಯುಕ್ತ ಭಕ್ತರು ನಡೆದುಕೊಂಡು ಬರುವಂತಹ ಪರಿಸ್ಥಿತಿ ಕಂಡುಬಂದಿತು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತ ಸಮೂಹ ರಥ ಸಾಗುವಾಗ ಶ್ರೀಸ್ವಾಮಿಯ ಜಯಘೋಷಣೆ ಮಾಡುತ್ತಾ ಭಕ್ತಿ ಭಾವ ಮೆರೆದು ರಥೋತ್ಸವಕ್ಕೆ ಸಾಕ್ಷಿಯಾದರು.

ಕೊಟ್ಟೂರಿನ ಕೊಟ್ಟೂರೇಶ್ವರ ಸ್ವಾಮಿಗೆ ಪರಿಶಿಷ್ಟ ಜಾತಿಯ ಮಹಿಳೆಯರು ಆರತಿ ಬೆಳಗಿದರು
ಕೊಟ್ಟೂರಿನ ಕೊಟ್ಟೂರೇಶ್ವರಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಅಪಾರ ಜನಸ್ತೋಮ
ಎಲ್ಲೆಡೆ ಕೊಟ್ಟೂರೇಶ್ವರ ಸ್ವಾಮಿಗೆ ಜೈಕಾರ ರಥ ಎಳೆದು ಭಕ್ತಿಪರವಶರಾದ ಭಕ್ತರು ಪರಿಶಿಷ್ಟ ಜಾತಿ ಮಹಿಳೆಯರು ಆರತಿ ಬೆಳೆಗಿದ ಬಳಿಕವೇ ರಥೋತ್ಸವ ಆರಂಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.