
ಕೊಟ್ಟೂರಿನಲ್ಲಿ ಶನಿವಾರ ಮನೆಯಿಂದ ಮೃತದೇಹಗಳನ್ನು ಸಾಗಿಸಲು ಸಜ್ಜಾಗಿ ನಿಂತಿದ್ದ ಆಂಬುಲೆನ್ಸ್
ಪ್ರಜಾವಾಣಿ ಚಿತ್ರ
ಕೊಟ್ಟೂರು: ಪಟ್ಟಣದ ಲಾಲ್ ಬಹಾದ್ದೂರ್ ಶಾಸ್ತ್ರಿ ಬಡಾವಣೆಯ ಮನೆಯೊಂದರಲ್ಲಿ ವಾಸವಿದ್ದ ಮೂವರ ಕೊಲೆ ಪ್ರಕರಣದಿಂದ ಇಡೀ ಪಟ್ಟಣವೇ ಬೆಚ್ಚಿಬಿದ್ದಿದ್ದು, ಇಲ್ಲಿ ಈವರೆಗೂ ಸಂಭವಿಸದ ಇಂತಹ ಅಪರಾಧ ಕೃತ್ಯ ಕಂಡು ಜನ ತಲ್ಲಣಗೊಂಡಿದ್ದಾರೆ. ಕೊಲೆ ನಡೆಸಿದ್ದು ಒಬ್ಬರೆ ಇರಬಹುದೇ ಅಥವಾ ಇನ್ನೂ ಕೆಲವರು ಕೈಜೋಡಿಸಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ.
ಶನಿವಾರ ಬೆಳಿಗ್ಗೆ 11ರ ಸುಮಾರಿಗೆ ಬೆಂಗಳೂರಿನ ತಿಲಕ್‌ನಗರ ಪೊಲೀಸರು ದೂರು ನೀಡಿದ ಅಕ್ಷಯ್ ಕುಮಾರ್ ಜತೆಗೆ ಪಟ್ಟಣಕ್ಕೆ ಬಂದಾಗ, ಮನೆಯೊಳಗೆ ಆತ ತೋರಿಸಿದ ಜಾಗದಲ್ಲೇ ಮೂವರ ಹೆಣಗಳೂ ಸಿಕ್ಕಿದ್ದವು. ಆಗ ಸಾರ್ವಜನಿಕರಂತೂ ಆತಂಕದಲ್ಲಿ ಹೌಹಾರಿದ್ದರು.
ಅಕ್ಷಯ್ ದ್ವಂದ್ವ ಹೇಳಿಕೆ ನೀಡಿದ್ದ. ತನ್ನ ಮನೆಯಲ್ಲಿ ಹೆಣ ಇಲ್ಲದಿದ್ದರೆ ಸಂಡೂರಿನಲ್ಲಿ ಹೆಣ ನೀರಿಗೆ ಎಸೆಯಲಾಗಿದೆ ಎಂಬ ಹೇಳಿಕೆ ನೀಡಿದ್ದ. ಮನೆಯಲ್ಲೇ ಹೆಣ ಸಿಕ್ಕ ಕಾರಣ ಪೊಲೀಸರು ನಿರಾಳರಾಗಿದ್ದರು. ಆದರೆ ಮನೆ ಸಮೀಪಕ್ಕೆ ಯಾರನ್ನೂ ಬಿಟ್ಟುಕೊಡಲಿಲ್ಲ. ಕೊಳೆಯುವ ಹಂತಕ್ಕೆ ತಲುಪಿದ್ದ ಶರೀರಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಬಳಿಕ ಮನೆಯ ಬಾಗಿಲು ಬಂದ್ ಮಾಡಿ, ಬೀಗಮುದ್ರೆ ಹಾಕಲಾಯಿತು.
ನಾಯಿ ಜತೆ ವಾಯುವಿಹಾರ: ಆರೋಪಿಯ ಮನಸ್ಥಿತಿ ಎಂತಹದು ಎಂಬುದೇ ಪಟ್ಟಣದ ತುಂಬೆಲ್ಲ ಮನೆಮಾತಾಗಿಬಿಟ್ಟಿದೆ. ಮೃತ ಕಾಲೇಜು ವಿದ್ಯಾರ್ಥಿನಿ ಅಮೃತಾ ಪ್ರತಿ ದಿನ ಸಂಜೆ ನಾಯಿಯೊಂದಿಗೆ ವಾಯುವಿಹಾರ ಮಾಡುತ್ತಿದ್ದುದನ್ನು ಅಕ್ಕಪಕ್ಕದ ಮನೆಯವರು ಕಂಡಿದ್ದಾರೆ. ಮೃತಪಟ್ಟ ಪೋಷಕರಾದ ಭೀಮರಾಜ್ ಮತ್ತು ಜಯಮ್ಮ ಅವರೂ ಸೌಮ್ಯ ಸ್ವಭಾವದವರೇ ಆಗಿದ್ದರು ಎಂದು ನೆನೆದು ಬಡಾವಣೆಯ ಜನ ಕಂಬನಿಗರೆದರು.
‘ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿನ ಪೊಲೀಸರು ಕರೆದುಕೊಂಡು ಹೋಗಿದ್ದು, ನ್ಯಾಯಾಲಯದ ಅನುಮತಿಯೊಂದಿಗೆ ಕೊಟ್ಟೂರು ಠಾಣೆಗೆ ದೂರು ವರ್ಗಾವಣೆಗೊಂಡ ನಂತರ ಮುಂದಿನ ತನಿಖೆ ಕೈಗೊಳ್ಳಲಾಗುತ್ತದೆ’ ಎಂದು ಪಟ್ಟಣದ ಠಾಣಾಧಿಕಾರಿ ಗೀತಾಂಜಲಿ ಶಿಂಧೆ ತಿಳಿಸಿದ್ದಾರೆ.
ಜನಸಂದಣಿ: ಘಟನಾಸ್ಧಳ ಹಾಗೂ ಆಸ್ಪತ್ರೆಯ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಘಟನೆಯಿಂದ ಪಟ್ಟಣದ ಮನೆ ಮಾಲೀಕರಲ್ಲಿ ಭಯ ಮೂಡಿದ್ದು, ಮನೆ ಬಾಡಿಗೆ ನೀಡುವಾಗ ಪೂರ್ವಾಪರ ವಿಚಾರಿಸದೇ ಬಾಡಿಗೆ ನೀಡಬಾರದೆಂಬ ಮಾತುಗಳು ಕೇಳಿಬಂದವು.
‘ಕಠಿಣ ಶಿಕ್ಷೆಯಾಗಲಿ’
ಭೀಮರಾಜ್ ಕುಟುಂಬದ ಸದಸ್ಯರು ಬೆಳಿಗ್ಗೆಯೇ ಪಟ್ಟಣಕ್ಕೆ ಬಂದಿದ್ದರು. ‘ನಮ್ಮ ಕುಟುಂಬಕ್ಕೆ ಕಳಂಕ ತಂದ ಇವನಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ನಾವ್ಯಾರೂ ಇವನಿಗೆ ಜಾಮೀನು ನೀಡಲು ಮುಂದಾಗುವುದಿಲ್ಲ’ ಎಂಬ ಆಕ್ರೋಶದ ಮಾತುಗಳನ್ನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.