ADVERTISEMENT

ನೌಕರರ ಬೆದರಿಸಿ ಕರ್ತವ್ಯಕ್ಕೆ ಕಳಿಸುತ್ತಿರುವ ಅಧಿಕಾರಿಗಳ ವಿರುದ್ದ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 12:55 IST
Last Updated 13 ಏಪ್ರಿಲ್ 2021, 12:55 IST
ಸಾರಿಗೆ ಸಂಸ್ಥೆಯ ನೌಕರರನ್ನು ಬೆದರಿಸಿ ಕರ್ತವ್ಯಕ್ಕೆ ಕಳಿಸುತ್ತಿರುವ ಕೂಡ್ಲಿಗಿ ಘಟಕದ ಮೇಲಾಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಾಬೇಕು ಎಂದು ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಮಂಗಳವಾರ ಕೂಡ್ಲಿಗಿ ಠಾಣೆಯಲ್ಲಿ ದೂರು ಸಲ್ಲಿಸಿದರು.
ಸಾರಿಗೆ ಸಂಸ್ಥೆಯ ನೌಕರರನ್ನು ಬೆದರಿಸಿ ಕರ್ತವ್ಯಕ್ಕೆ ಕಳಿಸುತ್ತಿರುವ ಕೂಡ್ಲಿಗಿ ಘಟಕದ ಮೇಲಾಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಾಬೇಕು ಎಂದು ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಮಂಗಳವಾರ ಕೂಡ್ಲಿಗಿ ಠಾಣೆಯಲ್ಲಿ ದೂರು ಸಲ್ಲಿಸಿದರು.   

ಕೂಡ್ಲಿಗಿ: ಸಾರಿಗೆ ಸಂಸ್ಥೆಯ ನೌಕರರನ್ನು ಬೆದರಿಸಿ ಕರ್ತವ್ಯಕ್ಕೆ ಕಳಿಸುತ್ತಿರುವ ಕೂಡ್ಲಿಗಿ ಘಟಕದ ಮೇಲಾಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಮಂಗಳವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

‘ತಮಗೆ ಸಿಗಬೇಕಾದ ನ್ಯಾಯ ಸಮ್ಮತದ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ಹಮ್ಮಿಕೊಂಡಿದ್ದಾರೆ. ಆದರೆ ಸ್ಥಳೀಯ ಘಟಕದ ಮೇಲಾಧಿಕಾರಿಗಳು ನೌಕರರನ್ನು ವರ್ಗಾವಣೆ ಮಾಡುವುದಾಗಿ ಭಯ ಪಡಿಸಿ ಕರ್ತವ್ಯಕ್ಕೆ ಹಾಜಾರಾಗಲು ಸೂಚಿಸುತ್ತಿದ್ದಾರೆ’ ಎಂದು ಹೇಳಿದರು.

‘ಮುಷ್ಕರ ವಿಷಯ ತಿಳಿಸಿದವರ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ. ಅಲ್ಲದೆ ಕರ್ತವ್ಯಕ್ಕೆ ಹಾಜರಾದ ಕೆಲವರನ್ನು ನಿರಂತರವಾಗಿ ದುಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಆಕಸ್ಮಿಕವಾಗಿ ಏನಾದರೂ ಅವಘಡಗಳು ಉಂಟಾದರೆ ನಮ್ಮ ಕುಟುಂಬದ ಗತಿ ಏನು’ ಎಂದು ನೌಕರರು ಪ್ರಶ್ನಿಸುತ್ತಿದ್ದಾರೆ.

‘ಮೇಲಾಧಿಕಾರಿಗಳ ವರ್ತನೆ ನೋಡಿದರೆ ಪ್ರಜಾಪ್ರಭುತ್ವದಲ್ಲಿ ಹೆದರಿಸಿ ಬೆದರಿ ಕರ್ತವ್ಯ ಮಾಡಿಸಿಕೊಳ್ಳುತ್ತಿರುವುದು ಕಾನೂನಿಗೆ ವಿರುದ್ಧವಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಕೂಡ್ಲಿಗಿ ಘಟಕದ ಕೆಲ ನೌಕರರನ್ನು ಈಗಾಗಲೇ ದೂರದ ಊರುಗಳಿಗೆ ವರ್ಗಾವಣೆ ಮಾಡಿ, ಉಳಿದ ನೌಕರರಲ್ಲಿ ಭಯ ಹುಟ್ಟಿಸಿ ಕರ್ತವ್ಯ ಮಾಡಿಸುತ್ತಿದ್ದಾರೆ. ಇಂತಹ ದಬ್ಬಾಳಿಕೆ ಹಾಗೂ ಸರ್ವಾಧಿಕಾರಿಗಳಾಗಿ ವರ್ತನೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ.

ಪೊಲೀಸ್‌ ಠಾಣೆಯ ಎಎಸ್‍ಐ ಲಕ್ಷ್ಮಣ ದೂರು ಸ್ವೀಕರಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರುಸಿದ್ದನಗೌಡ, ಜಿಲ್ಲ ಎಸ್ಟಿ ಘಟಕದ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ, ಎಸ್ಸಿ ಘಟಕದ ಅಧ್ಯಕ್ಷ ಡಿ.ಎಚ್. ದುರುಗೇಶ್, ಪಟ್ಟಣ ಪಂಚಾಯ್ತಿ ಸದಸ್ಯ ಸೈಯದ್ ಶುಕುರ್, ಮುಖಂಡರಾದ ಡಾಣಿ ರಾಘವೇಂದ್ರ, ಅಜೇಯ, ಮಾಳ್ಗಿ ಚಂದ್ರಪ್ಪ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.