ADVERTISEMENT

ಕನ್ನಡ ವಿವಿಯಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆ: ಮಾಹಿತಿ ನೀಡಲು ರಾಜ್ಯಪಾಲ ಸೂಚನೆ

ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ₹50.86 ಕೋಟಿ ಕಾಮಗಾರಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ಮಾರ್ಚ್ 2022, 8:02 IST
Last Updated 29 ಮಾರ್ಚ್ 2022, 8:02 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕ ಕಾಯ್ದೆ (ಕೆಟಿಪಿಪಿ) ಉಲ್ಲಂಘಿಸಿ ₹50.86 ಕೋಟಿ ಕಾಮಗಾರಿ, ವಸ್ತುಗಳ ಖರೀದಿ ಪ್ರಕರಣವನ್ನು ರಾಜ್ಯಪಾಲರು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಸಚಿವಾಲಯಕ್ಕೆ ಸಮಗ್ರ ಮಾಹಿತಿ ನೀಡಬೇಕೆಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಯವರು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯವರಿಗೆ ಪತ್ರ ಬರೆದು ನಿರ್ದೇಶನ ನೀಡಿದ್ದಾರೆ. ರಾಜ್ಯಪಾಲರ ಸಚಿವಾಲಯದಿಂದ ಬರೆದಿರುವ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಆಗಿದ್ದೇನು?:

ADVERTISEMENT

2015ರಿಂದ 2019ರ ಅವಧಿಯಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ₹50.86 ಕೋಟಿ ಮೊತ್ತದ ವಿವಿಧ ಕಾಮಗಾರಿಗಳು, ವಸ್ತುಗಳ ಖರೀದಿಯನ್ನು ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ಕೈಗೆತ್ತಿಕೊಳ್ಳಲಾಗಿತ್ತು ಎಂದು ಲೋಕಾಯುಕ್ತ ತನ್ನ ಅಂತಿಮ ವರದಿಯಲ್ಲಿ ತಿಳಿಸಿದೆ. ಆ ವರದಿ ಆಧರಿಸಿ ದೂರುದಾರ, ವಿಶ್ವವಿದ್ಯಾಲಯದ ಕಾನೂನು ಘಟಕದ ಸೂಪರಿಟೆಂಡೆಂಟ್‌ ಎಚ್‌.ಎಂ. ಸೋಮನಾಥ ಅವರು ಫೆಬ್ರುವರಿ 28ರಂದು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು.

‘ಮಲ್ಲಿಕಾ ಎಸ್‌. ಘಂಟಿ, ಡಿ.ಪಾಂಡುರಂಗಬಾಬು ಅವರು ಆ ಅವಧಿಯಲ್ಲಿ ಕ್ರಮವಾಗಿ ಕುಲಪತಿ, ಕುಲಸಚಿವರಾಗಿದ್ದರು. ಇವರಿಬ್ಬರೂ ಸೇರಿದಂತೆ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಸಾರ್ವಜನಿಕ ತೆರಿಗೆ ಹಣದ ಆರ್ಥಿಕ ನಷ್ಟ ಮರು ಭರಿಸಿಕೊಳ್ಳಬೇಕು’ ಎಂದು ದೂರಿನಲ್ಲಿ ಕೋರಿದ್ದರು. ಆ ದೂರು ಆಧರಿಸಿ ರಾಜ್ಯಪಾಲರ ಸಚಿವಾಲಯವು ಈಗ ಉನ್ನತ ಶಿಕ್ಷಣ ಇಲಾಖೆಗೆ ಮಾಹಿತಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

‘ಉತ್ತರ ಲೆಕ್ಕ ತಪಾಸಣೆಯಲ್ಲಿ ಒಪ್ಪಿಲ್ಲ’:

‘ಉನ್ನತ ಪ್ರಾಧಿಕಾರಗಳ ಸೂಚನೆ, ಅನುಮೋದನೆ ಮೇರೆಗೆ ಕನ್ನಡ ವಿ.ವಿ.ಯಲ್ಲಿ ಕೆಲಸಗಳನ್ನು ಮಾಡಲಾಗಿದೆ ಎಂದು ವಿಶ್ರಾಂತ ಕುಲಸಚಿವ ಡಿ. ಪಾಂಡುರಂಗಬಾಬು ಮತ್ತಿತರ ಅಧಿಕಾರಿಗಳು ‘ಪ್ರಜಾವಾಣಿ’ಗೆ (ಮಾ.26ರ ವರದಿ) ಸ್ಪಷ್ಟನೆ ನೀಡಿದ್ದಾರೆ. ಈ ಉತ್ತರವನ್ನು ಲೆಕ್ಕ ತಪಾಸಣೆಯಲ್ಲಿ ಒಪ್ಪಿಲ್ಲ’ ಎಂದು ಕನ್ನಡ ವಿ.ವಿ. ಕಾನೂನು ಘಟಕದ ಸೂಪರಿಟೆಂಡೆಂಟ್‌ ಎಚ್‌.ಎಂ. ಸೋಮನಾಥ ತಿಳಿಸಿದ್ದಾರೆ.

‘ಟೆಂಡರ್ ರಹಿತವಾಗಿ ಕೆಲಸಗಳನ್ನು ಮಾಡುವುದಕ್ಕೆ ಸೂಚನೆ ಕೊಡುವ ಅಥವಾ ಅನುಮೋದನೆ ನೀಡುವ ಅಧಿಕಾರ ಉನ್ನತ ಪ್ರಾಧಿಕಾರಗಳಿಗೆ ಇಲ್ಲವೆಂದೂ, ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆಗೆ ಅಧಿಕಾರಿಗಳೊಂದಿಗೆ ಉನ್ನತ ಪ್ರಾಧಿಕಾರ ಕಾರ್ಯಕಾರಿ ಸಮಿತಿಯೂ ಜವಾಬ್ದಾರಿಯಾಗಿದೆ. ಎಲ್ಲರ ವಿರುದ್ಧವೂ ಕ್ರಮ ಜರುಗಿಸಬೇಕೆಂದು 2016-17ನೇ ಲೆಕ್ಕ ತಪಾಸಣಾ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅಧಿಕಾರಿಗಳು ಸುಳ್ಳು ಸ್ಪಷ್ಟನೆ ನೀಡಿದ್ದಾರೆ. ಮೇಲಾಗಿ, ತಮ್ಮ ಸ್ಪಷ್ಟನೆಯಲ್ಲಿ ಅಧಿಕಾರಿಗಳು ಯಾರೊಬ್ಬರೂ ಲೋಕಾಯುಕ್ತ ವರದಿಯನ್ನು ಅಲ್ಲಗಳೆದಿಲ್ಲ ಅಥವಾ ಅದರಲ್ಲಿ ಸುಳ್ಳಿನ ಅಂಶಗಳಿವೆ ಎಂಬುದನ್ನು ನಿರೂಪಿಸಿಲ್ಲ. ಲೋಕಾಯುಕ್ತ ವರದಿ ಆಧರಿಸಿ, ತಪ್ಪಿತಸ್ಥ ಅಧಿಕಾರಿಗಳ ಮಿತಿಮೀರಿದ ಆಸ್ತಿ ಮತ್ತು ಬೇನಾಮಿ ಆಸ್ತಿಗಳ ತನಿಖೆಗೆ ಸದ್ಯದಲ್ಲೇ ಸೂಕ್ತ ಪ್ರಾಧಿಕಾರದಲ್ಲಿ ದೂರು ದಾಖಲಿಸಲಿದ್ದೇನೆ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.