
ಹೂವಿನಹಡಗಲಿ: ತಾಲ್ಲೂಕಿನ ಅಂಗೂರು ಬಳಿ ನಿರ್ಮಾಣಗೊಂಡಿರುವ ಕುಡುಗೋಲಮಟ್ಟಿ ಏತ ನೀರಾವರಿ ಯೋಜನೆಗೆ ₹16.80 ಕೋಟಿ ಖರ್ಚಾಗಿದ್ದರೂ ರೈತರ ಹೊಲಗಳಿಗೆ ಹನಿ ನೀರು ಹರಿದಿಲ್ಲ. ಇದೀಗ ತಾಂತ್ರಿಕ ನ್ಯೂನತೆ ಸರಿಪಡಿಸಲು ಹೆಚ್ಚುವರಿ ₹10.70 ಕೋಟಿಗೆ ಬೇಡಿಕೆ ಸಲ್ಲಿಸುವ ಮೂಲಕ ಈ ಕುಡುಗೋಲಮಟ್ಟಿ ಯೋಜನೆ ಸರ್ಕಾರಕ್ಕೆ ತುಟ್ಟಿಯಾಗಿ ಪರಿಣಮಿಸಿದೆ.
ಅಂಗೂರು, ಬೀರಬ್ಬಿ, ಕೋಟಿಹಾಳ, ಅರಳಿಹಳ್ಳಿ, ಕತ್ತೆಬೆನ್ನೂರು ಗ್ರಾಮಗಳ 1,012 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಈ ಏತ ನೀರಾವರಿ ಯೋಜನೆಗೆ 2008ರಲ್ಲಿ ₹7.80 ಕೋಟಿ ಮಂಜೂರಾಗಿತ್ತು. ನಂತರ ₹12.03 ಕೋಟಿಗೆ ಪರಿಷ್ಕರಣೆಗೊಂಡಿತು. ಕಾಮಗಾರಿ ಮುಗಿಯುವ ವೇಳೆಗೆ ಒಟ್ಟು ₹16.80 ಕೋಟಿ ಖರ್ಚಾಗಿದೆ. ಸಣ್ಣಪುಟ್ಟ ಕಾಮಗಾರಿ ಬಾಕಿ ಇರುವಾಗಲೇ 2012ರಲ್ಲಿ ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಯೋಜನೆ ಲೋಕಾಪರ್ಣೆಗೊಳಿಸಿದ್ದರು. ಉದ್ಘಾಟನೆಯಾಗಿ 13 ವರ್ಷ ಕಳೆದರೂ ರೈತರ ಹೊಲಗಳಿಗೆ ನೀರು ಹರಿಯುತ್ತಿಲ್ಲ.
ತುಂಗಭದ್ರಾ ನದಿಯ ನೀರನ್ನು ಬೃಹತ್ ಪಂಪ್‌ಗಳಿಂದ ಎತ್ತಿ ಕಾಲುವೆ, ಪೈಪ್‌ಲೈನ್‌ಗಳ ಮೂಲಕ ರೈತರ ಜಮೀನುಗಳಿಗೆ ಹರಿಸುವುದು ಯೋಜನೆಯ ಉದ್ದೇಶ. ಅಂಗೂರು ಬಳಿ ಪಂಪ್ ಹೌಸ್ ನಿರ್ಮಿಸಿ 400 ಅಶ್ವಶಕ್ತಿಯ ಮೂರು, 240 ಅಶ್ವಶಕ್ತಿಯ ಮೂರು ಮೋಟಾರ್‌ಗಳನ್ನು ಅಳವಡಿಸಲಾಗಿದೆ.
ಪರೀಕ್ಷಾರ್ಥ ಪ್ರಯೋಗದ ಹಂತದಲ್ಲೇ ಪೈಪ್‌ಲೈನ್ ಕಿತ್ತು, ಭಾರೀ ಸೋರಿಕೆ ಉಂಟಾಗಿದ್ದರಿಂದ ಯೋಜನೆ ಬಂದ್ ಮಾಡಲಾಗಿತ್ತು. ‘ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ಬೃಹತ್ ಮೊತ್ತದ ಯೋಜನೆ ಕಾರ್ಯಗತಗೊಳ್ಳದಿದ್ದರೂ ಕಾಮಗಾರಿ ನಿರ್ವಹಿಸಿದವರನ್ನು ಹೊಣೆ ಮಾಡಿ ಏಕೆ ಕ್ರಮ ಜರುಗಿಸಿಲ್ಲ’ ಎಂದು ಅಂಗೂರು ಗ್ರಾಮದ ರೈತರು ಪ್ರಶ್ನಿಸುತ್ತಿದ್ದಾರೆ.
ಇದೀಗ ಈ ಯೋಜನೆಯ ದುರಸ್ತಿ ಕೆಲಸಕ್ಕೆ ಮೂಲ ಯೋಜನೆಗಿಂತ ಹೆಚ್ಚು ಹಣವನ್ನು ಸರ್ಕಾರ ಖರ್ಚು ಮಾಡುವಂತಾಗಿದೆ. 1 ಮತ್ತು 2ನೇ ಹಂತದಲ್ಲಿ ಅಳವಡಿಸಿರುವ ಒಟ್ಟು 4.71 ಕಿ.ಮೀ. ಪಿಎಸ್‌ಸಿ ಪೈಪ್‌ಲೈನ್ ಬದಲಾಯಿಸಿ ಮೈಲ್ಡ್ ಸ್ಟೀಲ್ ಪೈಪ್ ಹಾಕಲು ₹10.70 ಕೋಟಿ ಮೊತ್ತದ ಅಂದಾಜು ಪತ್ರಿಕೆ ತಯಾರಿಸಿ ತಾಂತ್ರಿಕ ಅನುಮೋದನಾ ಸಮಿತಿಗೆ ಸಲ್ಲಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಮಹತ್ವದ ನೀರಾವರಿ ಯೋಜನೆ ದಶಕದಿಂದ ನನೆಗುದಿಗೆ ಬಿದ್ದಿದೆ. ದನಕರುಗಳಿಗೂ ಕುಡಿಯುವ ನೀರಿಲ್ಲದಂತಾಗಿದೆ. ನ್ಯೂನತೆ ಸರಿಪಡಿಸಿ ಜಮೀನುಗಳಿಗೆ ನೀರು ಹರಿಸಬೇಕುದಿನಕರ ಬೀರಬ್ಬಿ ಗ್ರಾಮದ ರೈತ
ಅವೈಜ್ಞಾನಿಕ ಕಾಮಗಾರಿಯಿಂದ ಸಮಸ್ಯೆಯಾಗಿದೆ. ಇಡೀ ಪೈಪ್‌ಲೈನ್ ಬದಲಾವಣೆಗೆ ಕ್ರಿಯಾ ಯೋಜನೆ ತಯಾರಿಸಿ ಟಿಎಸಿಗೆ ಮಂಡಿಸಿದ್ದೇವೆ. ಸದ್ಯದಲ್ಲೇ ಅನುಮೋದನೆ ದೊರೆಯಲಿದೆಮುರುಳೀಧರ ಎಇಇ ಸಣ್ಣ ನೀರಾವರಿ ಇಲಾಖೆ ಉಪ ವಿಭಾಗ ಹಡಗಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.