ADVERTISEMENT

ಕುರುಗೋಡು | ಪುರಾತನ ಸ್ಮಾರಕಗಳಿಗೆ ಬೇಕಿದೆ ರಕ್ಷಣೆಯ ಬೆಳಕು

ವಾಗೀಶ ಕುರುಗೋಡು
Published 30 ಸೆಪ್ಟೆಂಬರ್ 2023, 4:07 IST
Last Updated 30 ಸೆಪ್ಟೆಂಬರ್ 2023, 4:07 IST
ದೊಡ್ಡಬಸವೇಶ್ವರ ವಿಗ್ರಹ
ದೊಡ್ಡಬಸವೇಶ್ವರ ವಿಗ್ರಹ   

ಕುರುಗೋಡು: ಕುರುಗೋಡಿನ ಐತಿಹಾಸಿಕ ಮಹತ್ವದ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿನ 14 ಅಡಿ ಎತ್ತರದ ನಂದಿ ವಿಗ್ರಹ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ರಾಜ್ಯದ ಅತ್ಯಂತ ಎತ್ತರದ ಮತ್ತು ದಕ್ಷಿಣ ಭಾರತದ ಎರಡನೇ ಎತ್ತರದ ನಂದಿ ವಿಗ್ರಹ ಹೊಂದಿದ ಭವ್ಯ ದೇವಾಲಯ ಇದಾಗಿದೆ.

ದೇವಸ್ಥಾನದ ಪಶ್ಚಿಮಕ್ಕೆ ಮಹಾದ್ವಾರವಿದ್ದು, ಅದರ ಮೇಲೆ ವಿಜಯನಗರ ಸಾಮ್ರಾಜ್ಯದ ಪ್ರಖ್ಯಾತ ದೊರೆ ಶ್ರೀಕೃಷ್ಣ ದೇವರಾಯರ ಪಟ್ಟಾಭಿಷೇಕದ ಸವಿನೆನಪಿಗಾಗಿ ನಿರ್ಮಿಸಿದ ಐದು ಅಂತಸ್ತಿನ 60 ಅಡಿ ಎತ್ತರದ ರಾಜ ಗೋಪುರವಿದೆ. ದೇವಸ್ಥಾನದ ಉತ್ತರದಿಕ್ಕಿನಲ್ಲಿ ಸೋಮವಾರದ ಬಾಗಿಲು ಇದ್ದು, ಅದರ ಮೇಲೆ 30 ಅಡಿ ಎತ್ತರದ ಗೋಪುರವಿದೆ.

ADVERTISEMENT

ಕಲ್ಯಾಣಿ ಚಾಲುಕ್ಯರ ಅಂತ್ಯಕಾಲದಲ್ಲಿ ನಿರ್ಮಾಣ ಆರಂಭಗೊಂಡಿದ್ದ ದೇವಾಲಯ ಪೂರ್ಣಗೊಂಡಿದ್ದು ವಿಜಯನಗರದ ಅರಸರ ಕಾಲದಲ್ಲಿ.

ಪ್ರತಿವರ್ಷ ಹೋಳಿ ಹುಣ್ಣಿಯಮೆಯ ದಿನ ರಥೋತ್ಸವ ಜರುಗುತ್ತಿದ್ದು, ರಾಜ್ಯ ಮತ್ತು ನೆರೆಯ ರಾಜ್ಯದ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಪ್ರತಿವರ್ಷ ಶ್ರಾವಣಮಾಸದ ಮೂರನೇ ಸೋಮವಾರ ಮತ್ತು ಕಾರ್ತಿಕ ಮಾಸದಲ್ಲಿ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗುತ್ತವೆ.

ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸ ನಿರ್ಮಾಣವಾಗಿದೆ. ಕಟ್ಟಡ ತಹಶೀಲ್ದಾರ್ ಕಚೇರಿಗೆ ಬಳಕೆಯಾಗುತ್ತಿದೆ. ದೇವಸ್ಥಾನಕ್ಕೆ ಹೆಚ್ಚು ಆದಾಯವಿದೆ. ಆದರೆ ಭಕ್ತರಿಗೆ ಸೌಲಭ್ಯವಿಲ್ಲ. ದೇವಸ್ಥಾನದ ಸುತ್ತಲೂ ಇರುವ ರಕ್ಷಣಾ ಗೋಡೆಯ ಮೇಲೆ ಕೆಲವು ವಸತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಆದರೆ ಅಲ್ಲಿ ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಸೌಲಭ್ಯ ಕಲ್ಪಿಸಲು ಧಾರ್ಮಿಕ ಮತ್ತು ದತ್ತಿ ಇಲಾಖೆ ಕ್ರಮಕೈಗೊಳ್ಳುವ ಅಗತ್ಯವಿದೆ.

ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೂ ಮೊದಲು ಇಲ್ಲಿನ ಬೆಟ್ಟದ ಪ್ರದೇಶಗಳಲ್ಲಿ ಅನೇಕ ಆಕರ್ಷಕ ದೇವಸ್ಥಾನಗಳು ನಿರ್ಮಾಣಗೊಂಡಿವೆ. ಸೂಕ್ತ ರಕ್ಷಣೆ ಇಲ್ಲದೆ ಅವನತಿಯ ಅಂಚಿಗೆ ಸಾಗಿವೆ. ಅವುಗಳನ್ನು ಸಂರಕ್ಷಿಸುವ ಕಾರ್ಯಕ್ಕೆ ಪುರಾತತ್ವ ಇಲಾಖೆ ಮುಂದಾಗುವ ಅಗತ್ಯವಿದೆ.

ದೊಡ್ಡಬಸವೇಶ್ವರ ದೇವಸ್ಥಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.