ADVERTISEMENT

ಮೈಲಾರ ಕಾರಣಿಕ: ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 18:37 IST
Last Updated 7 ಫೆಬ್ರುವರಿ 2023, 18:37 IST
   

ಹೂವಿನಹಡಗಲಿ (ವಿಜಯನಗರ ಜಿಲ್ಲೆ) : "ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್" ಇದು ಈ ವರ್ಷದ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿ.

ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಮಂಗಳವಾರ ಸಂಜೆ ಲಕ್ಷಾಂತರ ಭಕ್ತರ ನಡುವೆ ಕಾರಣಿಕ ಮಹೋತ್ಸವ ಜರುಗಿತು.

ದೇವಸ್ಥಾನ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅಶ್ವರೂಢರಾಗಿ ಡೆಂಕನ ಮರಡಿಗೆ ಆಗಮಿಸಿ ಕಾರಣಿಕ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಿದರು. ಈ ಹಿಂದೆ ವಿಜಯನಗರದ ಅರಸರು ಮೈಲಾರಲಿಂಗ ಸ್ವಾಮಿಗೆ ಅರ್ಪಿಸಿದ್ದ ಮೂರ್ತಿಗಳ ಉತ್ಸವದೊಂದಿಗೆ ಗೊರವಯ್ಯ ರಾಮಣ್ಣ ಅವರನ್ನು ಸಿಂಹಾಸನ ಕಟ್ಟೆಯಿಂದ ಕಾರಣೀಕ ಸ್ಥಳಕ್ಕೆ ಗೊರವ ಸಮೂಹ ಭವ್ಯ ಮೆರವಣಿಗೆಯಲ್ಲಿ ಕರೆತಂದಿತು. ಈ ವೇಳೆ 'ಏಳು ಕೋಟಿ ಏಳು ಕೋಟಿಗೂ.... ಚಹಾಂಗ ಬಲೋ' ಎಂಬ ಸ್ವಾಮಿಯ ಉದ್ಘೋಷ ಮುಗಿಲು ಮುಟ್ಟಿತು.

ADVERTISEMENT

ಸುಕ್ಷೇತ್ರದ ಧಾರ್ಮಿಕ ಪರಂಪರೆಯಂತೆ ಧರ್ಮಕರ್ತರಿಂದ ಭಂಡಾರದ ಆಶೀರ್ವಾದ ಪಡೆದ ಗೊರವಯ್ಯ ರಾಮಣ್ಣ ಬಿಲ್ಲು ಏರಿ ಮೇಲಿನಂತೆ ಕಾರಣಿಕ ನುಡಿದರು.

ಈ ವರ್ಷದ ಕಾರಣಿಕ ನುಡಿಯನ್ನು ಭಕ್ತರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದರು. "ಸ್ವಾಮಿಯ ನುಡಿಯಲ್ಲಿ ಮಿಶ್ರಫಲ ಅಡಗಿದೆ. ಮಳೆ, ಬೆಳೆ ಸಮೃದ್ದಿಯಾಗಿ ನಾಡು ಸುಭಿಕ್ಷೆಯಾಗಬಹುದು. ಮಳೆ ಹೆಚ್ಚಾಗಿ ಬೆಳೆಹಾನಿ ಸಂಭವಿಸುವ ಸಾಧ್ಯತೆಯೂ ಇದೆ. ಮುಂದಿನ ಚುನಾವಣೆಯಲ್ಲಿ ಒಂದೇ ಪಕ್ಷ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುವ ಸೂಚನೆ ಇದೆ" ಎಂದು ಹಿರಿಯರು ಕೃಷಿ, ರಾಜಕೀಯ, ವಾಣಿಜ್ಯ, ಸಾಮಾಜಿಕ ಕ್ಷೇತ್ರಗಳ ಮೇಲೆ ತಾಳೆ ಹಾಕಿ ವಿಶ್ಲೇಷಿಸುತ್ತಿದ್ದರು. ಸ್ವಾಮಿಯ ಉಕ್ತಿ ಶುಭದಾಯಕವಾಗಿದೆ ಎಂದು ಕೆಲವರು ಅರ್ಥೈಸಿದರು.

ಈ ಸಂದರ್ಭದಲ್ಲಿ ಕಾಗಿನೆಲೆ ಕನಕ ಪೀಠದ ನಿರಂಜನಾನಂದ ಸ್ವಾಮೀಜಿ, ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಸಂಸದ ವೈ.ದೇವೇಂದ್ರಪ್ಪ, ಮಾಜಿ ಶಾಸಕರಾದ ಬಿ.ಚಂದ್ರನಾಯ್ಕ, ಬಸವರಾಜ ಶಿವಣ್ಣನವರ, ಜಿಲ್ಲಾಧಿಕಾರಿ ಟಿ.ವೆಂಕಟೇಶ, ಜಿಪಂ ಸಿಇಒ ಸದಾಶಿವ ಪ್ರಭು,ಐಜಿಪಿ ಬಿ.ಎಸ್.ಲೋಕೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್., ಹರಪನಹಳ್ಳಿ ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ.ಹೆಚ್.ಪ್ರಕಾಶರಾವ್, ತಹಶೀಲ್ದಾರ್ ಕೆ.ಶರಣಮ್ಮ, ತಾ.ಪಂ. ಇಒ ಎಸ್.ಎಸ್.ಪ್ರಕಾಶ, ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ.ಕೃಷ್ಣಪ್ಪ, ಗ್ರಾ.ಪಂ. ಅಧ್ಯಕ್ಷ ನಾಗಪ್ಪ ದೇವರಗುಡ್ಡ ಇತರರು ಇದ್ದರು.

************

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.