ADVERTISEMENT

ಹೂವಿನಹಡಗಲಿ: ಮೈಲಾರದತ್ತ ಭಕ್ತರ ದಂಡು

ಕಾರಣಿಕ ಮಹೋತ್ಸವ ನಾಳೆ: ಮೇಳೈಸಿದ ಗ್ರಾಮೀಣ ಸೊಗಡು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 1:48 IST
Last Updated 3 ಫೆಬ್ರುವರಿ 2026, 1:48 IST
<div class="paragraphs"><p>ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರಕ್ಕೆ ಹೊರಟಿದ್ದ ಎತ್ತಿನ ಬಂಡಿ</p></div>

ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರಕ್ಕೆ ಹೊರಟಿದ್ದ ಎತ್ತಿನ ಬಂಡಿ

   

ಹೂವಿನಹಡಗಲಿ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಫೆ. 4ರಂದು ಮೈಲಾರಲಿಂಗೇಶ್ವರ ಸ್ವಾಮಿ ಕಾರಣಿಕ ಮಹೋತ್ಸವ ಜರುಗಲಿದೆ. ನಾಡಿನ ನಾನಾ ಭಾಗಗಳಿಂದ ಭಕ್ತರ ದಂಡು ಸುಕ್ಷೇತ್ರಕ್ಕೆ ಹರಿದು ಬರುತ್ತಿದೆ.

ಸ್ವಾಮಿಯ ಕಾರಣಿಕ ನುಡಿ ನೆರವೇರುವ ಮೂರು ದಿನಗಳ ಮುಂಚೆ, ಭಾರತ ಹುಣ್ಣಿಮೆ ದಿನದಿಂದಲೇ ಭಕ್ತರು ಸುಕ್ಷೇತ್ರದತ್ತ ಪ್ರಯಾಣ ಬೆಳೆಸಿದ್ದಾರೆ. ಹೂಮಾಲೆ, ಬಣ್ಣದ ರಿಬ್ಬನ್, ಗೆಜ್ಜೆ ಸರ, ಕೋಡಂಸ, ಜೂಲದಿಂದ ಅಲಂಕರಿಸಿದ ಎತ್ತುಗಳ ಗೆಜ್ಜೆ ಸದ್ದಿನೊಂದಿಗೆ ಮೈಲಾರ- ತೋರಣಗಲ್ಲು ರಾಜ್ಯ ಹೆದ್ದಾರಿಯಲ್ಲಿ ಸಾಗುವ ಸಾಲು ಸಾಲು ಸವಾರಿ ಬಂಡಿಗಳ ಓಟ ಕಣ್ಮನ ಸೆಳೆಯುತ್ತಿದೆ.

ADVERTISEMENT

ಮೈಲಾರಕ್ಕೆ ಸಾಗುವ ಎಲ್ಲ ಮಾರ್ಗಗಳಲ್ಲಿ ಎತ್ತಿನ ಬಂಡಿ, ಟ್ರ್ಯಾಕ್ಟರ್, ಟಂಟಂ ವಾಹನಗಳು ಓಡುತ್ತಿವೆ. ಮೈಲಾರಲಿಂಗ ಸ್ವಾಮಿಯನ್ನು ಸ್ಮರಿಸುವ ‘ಏಳು ಕೋಟಿ, ಏಳು ಕೋಟಿ ಚಾಂಗಮಲೋ’ ಘೋಷಣೆಗಳು ರಸ್ತೆಯ ಮಾರ್ಗದಲ್ಲಿ ಮಾರ್ದನಿಸುತ್ತಿವೆ.

ನಾಡಿನ ನಾನಾ ಭಾಗಗಳಿಂದ ಮೈಲಾರ ಸುಕ್ಷೇತ್ರಕ್ಕೆ ಬಂದಿರುವ ಭಕ್ತರು ಜಾತ್ರಾ ಮೈದಾನ, ಹೊಲ ಗದ್ದೆಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ರೈತರು ತಮ್ಮ ಪರಿವಾರದೊಂದಿಗೆ ಎತ್ತಿನ ಬಂಡಿ, ಟ್ರ್ಯಾಕ್ಟರ್‌ನಲ್ಲಿ ಬಂದು ವಾಸ್ತವ್ಯ ಹೂಡಿರುವುದರಿಂದ ಮೈಲಾರದಲ್ಲಿ ಗ್ರಾಮೀಣ ಸೊಗಡು ಮೇಳೈಸಿದೆ.

ಮೈಲಾರಲಿಂಗನ ಸನ್ನಿಧಿಗೆ ಭಕ್ತಿಯ ನಡಿಗೆ: ಮೈಲಾರಲಿಂಗೇಶ್ವರ ಸ್ವಾಮಿಸನ್ನಿಧಿಗೆ ಅಪಾರ ಭಕ್ತರು ಪಾದಯಾತ್ರೆಯಲ್ಲಿ ತೆರಳಿದ್ದಾರೆ. ಕೊಪ್ಪಳ, ಗದಗ, ವಿಜಯನಗರ, ದಾವಣಗೆರೆ ಜಿಲ್ಲೆಯ ಪಾದಯಾತ್ರಿಗಳು ಬಿಸಿಲು, ದಣಿವು, ಆಯಾಸ ಲೆಕ್ಕಿಸದೇ ಮೈಲಾರಲಿಂಗನನ್ನು ಮನದಲ್ಲೇ ನೆನೆಯುತ್ತಾ ಸುಕ್ಷೇತ್ರದತ್ತ ಹೆಜ್ಜೆ ಹಾಕಿದ್ದಾರೆ.

ನಮ್ಮ ಮನೆಗೆ, ಮಕ್ಕಳಿಗೆ ಒಳ್ಳೆಯದಾಗಿದೆ. ಹಾಗಾಗಿ ಎರಡನೇ ವರ್ಷವೂ ಕಾಲ್ನಡಿಗೆಯಲ್ಲಿ ಬಂದಿರುವೆ
ಯಲ್ಲಮ್ಮ, ಏಣಿಗಿ ಬಸಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.