ಹೊಸಪೇಟೆ (ವಿಜಯನಗರ): ಮಕರ ಸಂಕ್ರಾಂತಿಯ ಸಂಭ್ರಮ ವಿಜಯನಗರ ಜಿಲ್ಲೆಯಾದ್ಯಂತ ಮನೆ ಮಾಡಿದ್ದು, ಮನೆಗಳ ಮುಂದೆ ರಂಗೋಲಿ ಬಿಡಿಸಿ ಚಿತ್ತಾರ ಮೂಡಿಸಲಾಗಿದ್ದರೆ, ಹಂಪಿ ವಿರೂಪಾಕ್ಷ ದೇವಸ್ಥಾನದ ಬಳಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಬೆಳಿಗ್ಗೆಯಿಂದಲೇ ಹಂಪಿಯತ್ತ ತೆರಳಿದ್ದ ಸಾವಿರಾರು ಮಂದಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಹಂಪಿ ವಿರೂಪಾಕ್ಷನ ಸನ್ನಿಧಿ ದಕ್ಷಿಣ ಕಾಶಿ ಎಂದೇ ಖ್ಯಾತ. ತುಂಗೆಯೂ ಗಂಗೆಗೆ ಸಮಾನ ಎಂಬ ಭಾವದೊಂದಿಗೆ ಮಹಾಕುಂಭಮೇಳವನ್ನೇ ಮನದಲ್ಲಿ ನೆನೆದು ಸ್ನಾನ ಮಾಡಿದವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಸ್ನಾನ ಮಾಡಿ ದೇವರ ದರ್ಶನ ಪಡೆದ ಸಾವಿರಾರು ಮಂದಿ ಪುನೀತರಾದರು.
ಸೂರ್ಯನು ಮಕರ ರಾಶಿಗೆ ತೆರಳುವುದೆಂದರೆ ಉತ್ತರಾಯಣ ಪರ್ವ ಕಾಲ ಪ್ರಾರಂಭವಾಯಿತೆಂಬುದು ಜನರ ನಂಬಿಕೆಯಾಗಿದ್ದು, ಈ ಪುಣ್ಯಕಾಲದಲ್ಲಿ ದೇವರ ದರ್ಶನದಿಂದ ಒಳಿತಾಗುತ್ತದೆ ಎಂಬ ಭಾವನೆಯೊಂದಿಗೆ ಜನರು ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಹೊಸಪೇಟೆ ನಗರ ಮತ್ತು ಸುತ್ತಮುತ್ತ ಮುಖ್ಯವಾಗಿ ನಾಯಕ ಸಮುದಾಯದವರು ಮನೆಗಳ ಮುಂದೆ ರಂಗೋಲಿ ಬಿಡಿಸಿ, ಬಾಗಿಲಿಗೆ ಕಬ್ಬು ಕಟ್ಟಿ ಸಿಂಗರಿಸುವುದು ಕಾಣಿಸುತ್ತದೆ. ಈ ಬಾರಿ ಸಹ ಅಂತಹ ದೃಶ್ಯ ಎಲ್ಲೆಡೆ ಕಾಣಿಸಿತು. ಇತರ ಸಮುದಾಯದವರು ಸಹ ಮನೆಗಳ ಮುಂದೆ ರಂಗೋಲಿ ಬಿಡಿಸಿ ಹಬ್ಬವನ್ನು ಆಚರಿಸಿದರು. ಸುತ್ತಮುತ್ತಲಿನ ಎಲ್ಲಾ ದೇವಸ್ಥಾನಗಳಿಗೂ ಭಕ್ತರು ತೆರಳಿ ದೇವರ ದರ್ಶನ ಪಡೆದರು. ಮನೆಗಳಲ್ಲಿ ಎಳ್ಳು ಹೋಳಿಗೆ ಮಾಡುವುದು ಬಹುತೇಕ ಸಾಮಾನ್ಯವಾಗಿದೆ.
ಚಳಿ ಮಾಯ: ಜಿಲ್ಲೆಯಲ್ಲಿ ಒಮ್ಮಿಂದೊಮ್ಮೆಲೆ ಚಳಿ ಮಾಯವಾಗಿದ್ದು, ಬಿಸಿಲಿನ ಝಳ ನಿಧಾನವಾಗಿ ಹೆಚ್ಚತೊಡಗಿದೆ. ಮಕರ ಸಂಕ್ರಾಂತಿಯ ಬಳಿಕ ಚಳಿ ಕಡಿಮೆಯಾಗುತ್ತದೆ ಎಂಬ ಲೋಕಾರೂಢಿ ಇಲ್ಲಿ ಸತ್ಯವಾಗಿದೆ. ಶಿವರಾತ್ರಿ ಬಳಿಕ ಬಿಸಿಲಿನ ತೀವ್ರತೆ ಹೆಚ್ಚಿ ಸುಮಾರು ಮೂರರಿಂದ ನಾಲ್ಕು ತಿಂಗಳು ವಿಪರೀತ ಬಿಸಿಲು ಈ ಭಾಗದಲ್ಲಿ ಕಾಡುತ್ತಿರುತ್ತದೆ. ಅದಕ್ಕೆ ಈಗಲೇ ವೇದಿಕೆ ಸಜ್ಜಾಗತೊಡಗಿದೆ.
ಈ ಬಾರಿ ಚಳಿಗಾಲ ಬಹುತೇಕ ಒಂದೇ ತಿಂಗಳಲ್ಲಿ ಮುಗಿದು ಹೋದಂತಾಗಿದೆ. ನವೆಂಬರ್ ಬಳಿಕ ಎರಡು ಬಾರಿ ಚಂಡಮಾರುತದ ಪರಿಣಾಮ ಮಳೆ ಸುರಿದ ಹಾಗೂ ಮಳೆ ಮೋಡ ಕವಿದ ಕಾರಣ ಚಳಿಯ ಪ್ರಮಾಣ ಕಡಿಮೆಯಾಗಿತ್ತು. ಡಿಸೆಂಬರ್ ಎರಡನೇ ವಾರದಿಂದ ಜನವರಿ ಎರಡನೇ ವಾರದವರೆಗೆ ಮಾತ್ರ ಈ ಭಾಗದಲ್ಲಿ ತೀವ್ರ ಚಳಿಯ ಅನುಭವ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.