ಕಾನಹೊಸಹಳ್ಳಿ (ಕೂಡ್ಲಿಗಿ): ಕಾನಹೊಸಹಳ್ಳಿಯಲ್ಲಿ ಫೆ. 26ರಂದು ನಡೆಯಲಿರುವ ಗ್ರಾಮದ ಆರಾಧ್ಯ ದೇವತೆ ಶಕ್ತಿ ಮಾರಮ್ಮ ದೇವಿಯ ರಥೋತ್ಸವದ ಅಂಗವಾಗಿ ರಥದ ಗಾಲಿಯನ್ನು ಮಂಗಳವಾರ ಹೊರ ಹಾಕುವ ಮೂಲಕ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಸೋಮವಾರ ರಾತ್ರಿ ಗುಗ್ಗರಿ ಹಾಕುವ ಕಾರ್ಯಕ್ಕೆ ಚಾಲನೆ ನೀಡಿಲಾಯಿತು. 346 ಸೇರು ಹುಳ್ಳಿ ಕಾಳುಗಳನ್ನು ಸುಮಾರು 46 ಮಡಿಕೆಗಳಲ್ಲಿ ಬೇಯಿಸಿ ಗುಗ್ಗರಿ ಮಾಡಿದ್ದು ವಿಶೇಷವಾಗಿತ್ತು. ಮಂಗಳವಾರ ಬೆಳಗಿನ ಜಾವಾ ಗ್ರಾಮದ ಎಲ್ಲಾ ದೇವಸ್ಥಾನಗಳಿಗೆ ಗುಗ್ಗರಿ ನೈವೇದ್ಯ ಅರ್ಪಿಸಿ, ದೈವಸ್ಥರಿಗೆ ಹಾಗೂ ಭಕ್ತರಿಗೆ ವಿತರಿಸಲಾಯಿತು.
ನಂತರ ತೇರು ಗಡ್ಡೆ ಮನೆ ಬಾಗಿಲು ತೆರೆದು ತೇರು ಗಡ್ಡೆಗೆ ಪೂಜೆ ಸಲ್ಲಿಸಿದ ಭಕ್ತರು, ಮಧ್ಯಾಹ್ನ ಸಕಲ ವಾದ್ಯಗಳ ಮೂಲಕ ರಥದ ಮನೆಯಿಂದ ದೇವಿಯ ರಥದ ಗಾಲಿ (ಗಡ್ಡೆ) ಯನ್ನು ಎಳೆದುಕೊಂಡು ಬಂದು ರಥದ ಬಯಲಿನಲ್ಲಿ ನಿಲ್ಲಿಸಿದರು. ಅನಂತರ ತೇರು ಗಡ್ಡೆಯನ್ನು ತೊಳೆದು ಗ್ರಾಮಸ್ಥರು ಸೇರಿದಂತೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಧಿ ವಿಧಾನಗಳಂತೆ ರಥದ ಗಾಲಿಗೆ ಪೂಜೆ ಸಲ್ಲಿಸಿಲಾಯಿತು. ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಜಾತ್ರಾ ಮಹೋತ್ಸವದ ಅಂಗವಾಗಿ ಫೆ.10 ರಂದು ಕೋಟೆಗೆ ಏಣಿ ಹಾಕುವುದು, 16 ರಂದು ಮಳ್ಳುಳ್ಳಿ ಪಡುಗ ಕೊಡುವುದು, 20 ರಂದು ಕಳಾಸರೋಹಣ, 23 ರಂದು ಜಲ್ಲಿ ಮಾರಮ್ಮ ಪೂಜೆ ಹಾಗೂ 24 ರಂದು ತಾಯಿ ಚೌಕಿ ಮನೆ ಪ್ರವೇಶ ಹಾಗೂ 26 ರಂದು ಶಕ್ತಿ ಮಾರಮ್ಮ ದೇವಿಯ ಮಹಾ ರಥೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.