ADVERTISEMENT

ಶ್ರೀರಾಮುಲು, ಆನಂದ್‌ ಸಿಂಗ್‌ ಪರಸ್ಪರ ಹೊಗಳಿಕೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 16:50 IST
Last Updated 12 ಫೆಬ್ರುವರಿ 2022, 16:50 IST
   

ಹೊಸಪೇಟೆ (ವಿಜಯನಗರ): ನಗರದ ಜಿಲ್ಲಾ ಕೇಂದ್ರ ಬಸ್‌ ನಿಲ್ದಾಣದಲ್ಲಿ ₹1.46 ಕೋಟಿಯಲ್ಲಿ ನಿರ್ಮಿಸಿರುವ 26 ಮಳಿಗೆಗಳನ್ನು ಹೊಂದಿರುವ ನೂತನ ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಸಮಾರಂಭವು ಸಚಿವದ್ವಯರ ಪರಸ್ಪರ ಹೊಗಳಿಕೆಗೆ ಸಾಕ್ಷಿಯಾಯಿತು.

ಶನಿವಾರ ಸಂಜೆ ನಾಲ್ಕು ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಸಾರಿಗೆ ಸಚಿವ ಬಿ. ಶ್ರೀರಾಮುಲು, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ 7.30ಕ್ಕೆ ಬಂದರು. ಬಳಿಕ ಉದ್ಘಾಟನೆ ನೆರವೇರಿಸಿದ ಶ್ರೀರಾಮುಲು, ’ಆನಂದ್ ಸಿಂಗ್ ಬದ್ಧತೆ ಇರುವ ರಾಜಕಾರಣಿ. ರೈತರು, ಕಾರ್ಮಿಕರ ಪರ ಕೆಲಸ ಮಾಡುವ ರಾಜಕಾರಣಿ. ಬಳ್ಳಾರಿ–ವಿಜಯನಗರ ಜಿಲ್ಲೆಗಳ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿಯ ಸರ್ಕಾರವಿದೆ. ಡಬಲ್‌ ಎಂಜಿನ್‌ ಸರ್ಕಾರದಂತೆ ನಾವಿಬ್ಬರೂ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದರು.

2012ರಲ್ಲಿ ಮಾತು ಕೊಟ್ಟಂತೆ ಈಗ ವಾಣಿಜ್ಯ ಮಳಿಗೆಗಳನ್ನು ಆನಂದ್‌ ಸಿಂಗ್‌ ನಿರ್ಮಿಸಿ, ನೈಜ ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದಾರೆ.ಬೆಂಗಳೂರಿನ ನ್ಯಾಷನಲ್‌ ಮಾರುಕಟ್ಟೆ ಮಾದರಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದಾರೆ. ಜಿಲ್ಲೆ ಬಗ್ಗೆ ಸಾಕಷ್ಟು ಕನಸ್ಸುಗಳನ್ನು ಹೊಂದಿದ್ದಾರೆ. ಸ್ವಾರ್ಥ, ಕಲ್ಮಶ ಇಲ್ಲದ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಇದು ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ADVERTISEMENT

ಆನಂದ್‌ ಸಿಂಗ್ ಮಾತನಾಡಿ, ಶ್ರೀರಾಮುಲು ವಯಸ್ಸಿನಲ್ಲಿ ನನಗಿಂತ ಚಿಕ್ಕವರು. ಆದರೆ, ರಾಜಕೀಯದಲ್ಲಿ ನನ್ನ ಗುರುಗಳು. ಶ್ರೀರಾಮುಲು, ಜನಾರ್ದನ ರೆಡ್ಡಿಯವರೇ ನನ್ನನ್ನು ರಾಜಕೀಯಕ್ಕೆ ತಂದವರು. ಸಾರಿಗೆ ಸಚಿವರಾದ ನಂತರ ಶ್ರೀರಾಮುಲು ಅವರು ಎಲ್ಲ ಕಡೆ ಓಡಾಡಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನನ್ನ ಹೋಲಿಸಿದರೆ ಎಲ್ಲೆಡೆ ಅವರು ಹೆಚ್ಚಾಗಿ ಓಡಾಡುತ್ತಾರೆ. ನನಗಿಂತ ಅವರು ಹೆಚ್ಚು ಬದ್ಧತೆ ಇರುವ ರಾಜಕಾರಣಿ ಎಂದು ಹೊಗಳಿದರು.

ಗರಂ: ಕಾರ್ಯಕ್ರಮಕ್ಕೆ ನಗರಸಭೆ ಸದಸ್ಯರನ್ನು ಆಹ್ವಾನಿಸದ್ದಕ್ಕೆ ಆನಂದ್‌ ಸಿಂಗ್‌, ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ಗರಂ ಆದರು. ಬಳಿಕ ಸದಸ್ಯರಿಗೆ ಕರೆ ಮಾಡಿ ಕಾರ್ಯಕ್ರಮಕ್ಕೆ ಕರೆಸಲಾಯಿತು. ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ್‌, ಹುಡಾ ಅಧ್ಯಕ್ಷ ಅಶೋಕ ಜೀರೆ, ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಬಿ. ಧವಳಗಿರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.