ADVERTISEMENT

ಹೊಸಪೇಟೆ: ಭಾರತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

‘ಸಂಯುಕ್ತ ಹೋರಾಟ ಕರ್ನಾಟಕ’ ಕರೆ ಕೊಟ್ಟಿದ್ದ ಬಂದ್‌ ಸಂಪೂರ್ಣ ಶಾಂತಿಯುತ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 11:42 IST
Last Updated 27 ಸೆಪ್ಟೆಂಬರ್ 2021, 11:42 IST
ಭಾರತ ಬಂದ್‌ ನಿಮಿತ್ತ ‘ಸಂಯುಕ್ತ ಹೋರಾಟ ಕರ್ನಾಟಕ’ ಸಂಘಟನೆಯ ಅಪಾರ ಕಾರ್ಯಕರ್ತರು ಸೋಮವಾರ ಹೊಸಪೇಟೆಯಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು
ಭಾರತ ಬಂದ್‌ ನಿಮಿತ್ತ ‘ಸಂಯುಕ್ತ ಹೋರಾಟ ಕರ್ನಾಟಕ’ ಸಂಘಟನೆಯ ಅಪಾರ ಕಾರ್ಯಕರ್ತರು ಸೋಮವಾರ ಹೊಸಪೇಟೆಯಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು   

ಹೊಸಪೇಟೆ (ವಿಜಯನಗರ): ಮೂರು ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ‘ಸಂಯುಕ್ತ ಹೋರಾಟ ಕರ್ನಾಟಕ’ ಸಂಘಟನೆ ಸೋಮವಾರ ಕರೆ ಕೊಟ್ಟಿದ್ದ ಭಾರತ ಬಂದ್‌ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದೇಶದ 500ಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಒಳಗೊಂಡ ಜಂಟಿ ಹೋರಾಟ ಸಮಿತಿಯು ಈ ಬಂದ್‌ಗೆ ಕರೆ ಕೊಟ್ಟಿತ್ತು. ರಾಜ್ಯದ 15ಕ್ಕೂ ಹೆಚ್ಚು ಸಂಘಟನೆಗಳು ಕೂಡಿಕೊಂಡು ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ವೇದಿಕೆಯಡಿ ಬಂದ್‌ ನಡೆಸಿದವು.
ನಗರದಲ್ಲಿ ಸೋಮವಾರ ಬಂದ್‌ ಸಂಪೂರ್ಣ ಶಾಂತಿಯುತವಾಗಿ ಜರುಗಿತು. ಬೆಳಿಗ್ಗೆ ಎಂದಿನಂತೆ ತರಕಾರಿ, ಹಾಲು, ದಿನಪತ್ರಿಕೆ ಪೂರೈಕೆಯಾಯಿತು. ಪೆಟ್ರೋಲ್‌ ಬಂಕ್‌, ಔಷಧಿ ಅಂಗಡಿ, ಆಸ್ಪತ್ರೆ, ಶಾಲಾ ಕಾಲೇಜುಗಳು, ಅಂಗಡಿ, ಹೋಟೆಲ್‌ಗಳು ತೆರೆದಿದ್ದವು. ಬಸ್‌, ಆಟೊ, ಸರಕು ಸಾಗಣೆ ವಾಹನ ಸಂಚಾರ ಸಾಮಾನ್ಯವಾಗಿತ್ತು.

ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಪ್ರತಿಭಟನಾಕಾರರು ಬೈಕ್‌ಗಳಲ್ಲಿ ಬಂದು, ಅಂಗಡಿ, ಹೋಟೆಲ್‌, ಶಾಲಾ, ಕಾಲೇಜು ಮುಚ್ಚಿಸಿದರು. ಕೆಲನಿಮಿಷ ಸಾರಿಗೆ ಬಸ್‌ ಸಂಚಾರಕ್ಕೂ ವ್ಯತ್ಯಯ ಉಂಟು ಮಾಡಿದರು. ಬಳಿಕ ಎಂದಿನಂತೆ ವಿವಿಧ ಊರುಗಳಿಗೆ ಬಸ್‌ಗಳು ಯಾವುದೇ ತೊಡಕಿಲ್ಲದೆ ಸಂಚರಿಸಿದವು. ಹೀಗಾಗಿ ಪರ ಊರುಗಳಿಗೆ ಹೋಗುವವರಿಗೆ ಯಾವುದೇ ರೀತಿಯ ತೊಂದರೆ ಆಗಲಿಲ್ಲ. ರೈಲುಗಳು ಯಾವುದೇ ಅಡೆತಡೆಯಿಲ್ಲದೆ ಸಂಚರಿಸಿದವು.

ADVERTISEMENT
ಹೊಸಪೇಟೆಯ ತಹಶೀಲ್ದಾರ್‌ ಕಚೇರಿ ಬಳಿ ಪ್ರತಿಭಟನಾಕಾರರು ಬಹಿರಂಗ ಸಭೆ ನಡೆಸುತ್ತಿದ್ದಾಗ ಮಳೆ ಬಂತು. ಈ ವೇಳೆ ಹಲವರು ಕಟ್ಟಡಗಳ ಅಡಿ ಹೋಗಿ ಆಶ್ರಯ ಪಡೆದರು. ಆದರೆ, ಕೆಲವರು ಮಳೆ ಲೆಕ್ಕಿಸದೆ ರಸ್ತೆ ಮಧ್ಯದಲ್ಲೇ ನೆನೆದುಕೊಂಡು ಧರಣಿ ಮುಂದುವರೆಸಿದರು

ನಗರದ ಚಿತ್ತವಾಡ್ಗಿ, ಸಂಡೂರು ರಸ್ತೆ, ಅನಂತಶಯನಗುಡಿ, ಬಳ್ಳಾರಿ ರಸ್ತೆಯಿಂದ ಪ್ರತಿಭಟನಾಕಾರರು ಮಹಾತ್ಮ ಗಾಂಧೀಜಿ ವೃತ್ತದವರೆಗೆ ರ್‍ಯಾಲಿ ನಡೆಸಿದರು. ಬಳಿಕ ಎಲ್ಲರೂ ಅಲ್ಲಿ ಸೇರಿಕೊಂಡು, ಅಲ್ಲಿಂದ ತಹಶೀಲ್ದಾರ್‌ ಕಚೇರಿ ವರೆಗೆ ಬೃಹತ್‌ ರ್‍ಯಾಲಿ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್, ‘ಕಳೆದ ಹತ್ತು ತಿಂಗಳಿಂದ ರೈತರು ನಿರಂತರವಾಗಿ ದೇಶದಾದ್ಯಂತ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆದರೆ, ಪ್ರಧಾನಿ ಅದಕ್ಕೆ ಸ್ಪಂದಿಸುತ್ತಿಲ್ಲ. ರೈತರೊಂದಿಗೆ ಸೌಜನ್ಯಕ್ಕೂ ಮಾತನಾಡುತ್ತಿಲ್ಲ’ ಎಂದರು.

ಪ್ರತಿಭಟನಾಕಾರರು ಹೊಸಪೇಟೆಯ ಕೇಂದ್ರ ಬಸ್‌ ನಿಲ್ದಾಣದ ಎದುರು ಸೇರಿ ಕೆಲನಿಮಿಷ ಬಸ್‌ ಸಂಚಾರ ತಡೆದರು

‘ಎಪಿಎಂಸಿ, ಭೂಸುಧಾರಣೆ, ಭೂಸ್ವಾಧೀನ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಅವುಗಳನ್ನು ಹಿಂದಕ್ಕೆ ಪಡೆಯುವವರೆಗೆ ಹೋರಾಟ ನಡೆಯಲಿದೆ. ರೈತರ ಸಾಲ ಮನ್ನಾ ಮಾಡದ ಮೋದಿಯವರು ಅಂಬಾನಿ, ಅದಾನಿಯ ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡುತ್ತಿದ್ದಾರೆ. ಅವರು ಯಾರ ಪರ ಎನ್ನುವುದು ಇದರಿಂದ ಗೊತ್ತಾಗುತ್ತದೆ’ ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ಆರ್‌. ಭಾಸ್ಕರ್‌ ರೆಡ್ಡಿ ಮಾತನಾಡಿ, ‘ರೈತ, ಕಾರ್ಮಿಕ ಈ ದೇಶದ ಎರಡು ಕಣ್ಣುಗಳು ಇದ್ದಂತೆ. ಅವರ ಮೇಲೆ ದೇಶದ ಅಭಿವೃದ್ಧಿ ನಿಂತಿದೆ. ಕಾಂಗ್ರೆಸ್ 60 ವರ್ಷ ಆಡಳಿತದ ಅವಧಿಯಲ್ಲಿ ಮಾಡಿದಷ್ಟೇ ಸಾಲ ಕೇಂದ್ರದ ಬಿಜೆಪಿ ಸರ್ಕಾರ ಎಂಟು ವರ್ಷಗಳಲ್ಲಿ ಮಾಡಿದೆ. ಈಗಿರುವುದು ಜನವಿರೋಧಿ ಸರ್ಕಾರ. ಅದನ್ನು ತೊಲಗಿಸಬೇಕು’ ಎಂದರು.

ಮುಖಂಡರಾದ ರಾಮಚಂದ್ರಗೌಡ, ವೀರಸಂಗಯ್ಯ, ಮೊಹಮ್ಮದ್‌ ಇಮಾಮ್‌ ನಿಯಾಜಿ, ವೆಂಕಟರಾವ್ ಘೋರ್ಪಡೆ, ನಿಂಬಗಲ್ ರಾಮಕೃಷ್ಣ, ಕೆ. ನಾಗರತ್ನಮ್ಮ, ಕೆ.ಎಂ‌.ಸಂತೋಷ್ ಕುಮಾರ್‌, ಎನ್‌. ಯಲ್ಲಾಲಿಂಗ, ಘಂಟೆ ಸೋಮಶೇಖರ್, ಗೌಡ ರಾಮಣ್ಣ, ಜಿ.ಕೆರೆಹನುಮಂತ, ಪ.ಯ.ಗಣೇಶ್, ಜೆ.ಶಿವುಕುಮಾರ್, ಬಿಸಾಟಿ ಮಹೇಶ್, ಕಲ್ಯಾಣಯ್ಯ, ಎಂ.ಕರುಣಾನಿಧಿ, ಡಾ.ಪ್ರಮೋದ್, ಷಣ್ಮುಖಪ್ಪ, ನಾಗರಾಜಗೌಡ ಮೊದಲಾದವರು ಇದ್ದರು.

ಭಾರತಬಂದ್‌ ನಿಮಿತ್ತ ಹೊಸಪೇಟೆಯ ಕೌಲ್‌ಪೇಟೆಯಲ್ಲಿ ಸೋಮವಾರ ಅಂಗಡಿಗಳು ಮುಚ್ಚಿದವು. ರಸ್ತೆಯಲ್ಲಿ ಜನರ ಓಡಾಟ ವಿರಳವಾಗಿತ್ತು

ಮಳೆ ಲೆಕ್ಕಿಸದೆ ಧರಣಿ

ಮಹಾತ್ಮ ಗಾಂಧಿ ವೃತ್ತದಿಂದ ತಹಶೀಲ್ದಾರ್‌ ಕಚೇರಿ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಯಿತು. ಬಳಿಕ ಅಲ್ಲಿ ಬಹಿರಂಗ ಸಭೆ ನಡೆಯಿತು. ಬಳಿಕ ಮೂರ್ನಾಲ್ಕು ಜನ ಮುಖಂಡರು ಮಾತನಾಡಿದರು. ಅದಾದ ಬಳಿಕ ತುಂತುರು ಮಳೆಯಾಯಿತು. ಬಳಿಕ ಜಿಟಿಜಿಟಿ ಮಳೆ ಶುರುವಾಯಿತು. ಆದರೆ, ಪ್ರತಿಭಟನಾಕಾರರು ಅದನ್ನು ಲೆಕ್ಕಿಸದೆ ಮಳೆಯಲ್ಲೇ ನೆನೆದುಕೊಂಡು ಧರಣಿ ಮುಂದುವರೆಸಿದರು. ಸಂಜೆವರೆಗೂ ಮಳೆಯಲ್ಲೇ ನಡುರಸ್ತೆಯಲ್ಲಿ ಕೆಲವರು ಕೂತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.