ADVERTISEMENT

ಹೂವಿನಹಡಗಲಿ: ರಾಗಿ, ಜೋಳ ಖರೀದಿ ಕೇಂದ್ರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:46 IST
Last Updated 27 ಫೆಬ್ರುವರಿ 2026, 7:46 IST
ಹೂವಿನಹಡಗಲಿ ಎಪಿಎಂಸಿಯಲ್ಲಿ ರಾಗಿ, ಜೋಳ ಖರೀದಿ ಕೇಂದ್ರಕ್ಕೆ ಶಾಸಕ ಎಲ್.ಕೃಷ್ಣನಾಯ್ಕ ಚಾಲನೆ ನೀಡಿದರು
ಹೂವಿನಹಡಗಲಿ ಎಪಿಎಂಸಿಯಲ್ಲಿ ರಾಗಿ, ಜೋಳ ಖರೀದಿ ಕೇಂದ್ರಕ್ಕೆ ಶಾಸಕ ಎಲ್.ಕೃಷ್ಣನಾಯ್ಕ ಚಾಲನೆ ನೀಡಿದರು   

ಹೂವಿನಹಡಗಲಿ: ‘ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ರಾಗಿ, ಬಿಳಿಜೋಳ ಖರೀದಿ ಕೇಂದ್ರದಲ್ಲಿ ರೈತರಿಗೆ ಅನ್ಯಾಯವಾಗದಂತೆ ಪಾರದರ್ಶಕ ಖರೀದಿ ಪ್ರಕ್ರಿಯೆ ನಡೆಸಬೇಕು’ ಎಂದು ಶಾಸಕ ಎಲ್.ಕೃಷ್ಣನಾಯ್ಕ ಸೂಚಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದಿಂದ ತೆರೆದಿರುವ ರಾಗಿ, ಬಿಳಿಜೋಳ ಖರೀದಿ ಕೇಂದ್ರಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಸಿಂಗಟಾಲೂರು ಏತ ನೀರಾವರಿ ಯೋಜನೆಯ ವಿಸ್ತರಣೆ ಹಾಗೂ ನಿರ್ವಹಣೆಗೆ ಸರ್ಕಾರ ಗಮನಹರಿಸದೆ ಇರುವುದರಿಂದ ಕ್ಷೇತ್ರದಲ್ಲಿ ಸಮಗ್ರ ನೀರಾವರಿ ಸಾಧ್ಯವಾಗಿಲ್ಲ. ಮಳೆಗಾಲದಲ್ಲಿ ತುಂಗಭದ್ರಾ ನದಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರಿದರೂ ಸದ್ಬಳಕೆ ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕೃಷಿ ಪ್ರಧಾನ ರಾಷ್ಟ್ರಕ್ಕೆ ರೈತರು ಆರ್ಥಿಕ ಶಕ್ತಿಯಾಗಿದ್ದಾರೆ. ಸರ್ಕಾರಗಳು ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ’ ಎಂದರು.

ಟಿಎಪಿಸಿಎಂಎಸ್ ವ್ಯವಸ್ಥಾಪಕ ಸೊಪ್ಪಿನ ವೀರಣ್ಣ ಮಾತನಾಡಿ, ‘ಮುಂಗಾರು ರಾಗಿ ಬೆಳೆದಿರುವ 2,308 ರೈತರು 71,599.50 ಕ್ವಿಂಟಲ್ ರಾಗಿ ಹಾಗೂ ಮುಂಗಾರು, ಹಿಂಗಾರು ಬಿಳಿ ಜೋಳ ಬೆಳೆದಿರುವ 286 ರೈತರು 19,187.50 ಕ್ವಿಂಟಲ್ ಜೋಳ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ ಮಾತನಾಡಿ, ‘ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿದರೆ ಯಾವ ರೈತರು ಸರ್ಕಾರದ ಬಳಿ ಕೈಚಾಚುವುದಿಲ್ಲ. ಅಧಿಕಾರಿಗಳು ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕಗಳನ್ನು ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ನಾಗಭೂಷಣ ಮಲ್ಕಿಒಡೆಯರ್ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಶರಣಬಸಪ್ಪ, ಆಹಾರ ಇಲಾಖೆಯ ಭಾರತಿ, ಟಿಎಪಿಸಿಎಂಎಸ್‌ ಉಪಾಧ್ಯಕ್ಷ ಎಲ್‌.ಚಂದ್ರನಾಯ್ಕ, ನಿರ್ದೇಶಕರಾದ ಟಿ.ಮಹಾಂತೇಶ, ಎಂ.ಸಂಧ್ಯಾ, ಹಣ್ಣಿ ಸುಮಾ, ಹಕ್ಕಂಡಿ ಮಹಾದೇವ, ಕೆ.ಮಂಜುನಾಥ, ನಿಂಗಪ್ಪ ಬೆನ್ನೂರು, ಎಂ.ನೆಪೋಲಿಯನ್‌, ಕೆ.ಎಸ್‌.ರಾಜಶೇಖರಗೌಡ, ಬಿ.ಎಂ.ವೀರಯ್ಯ, ಜಿ.ಮಲ್ಲಪ್ಪ, ರಾಜಾಸಾಬ್‌ ಮೂಲಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.