ADVERTISEMENT

ಎಂಎಲ್‌ಸಿ ಚುನಾವಣೆ; ಪಂಚಾಯಿತಿ ಸದಸ್ಯರಿಗೆ ಭಾರಿ ಬೇಡಿಕೆ

ಇನ್ನೂ ಅಂತಿಮಗೊಳ್ಳದ ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 13 ನವೆಂಬರ್ 2021, 15:36 IST
Last Updated 13 ನವೆಂಬರ್ 2021, 15:36 IST

ಹೊಸಪೇಟೆ (ವಿಜಯನಗರ): ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಇನ್ನಷ್ಟೇ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗೆ ಚುನಾವಣೆ ನಡೆಯಬೇಕು. ಇಷ್ಟೇ ಅಲ್ಲ, ಹೊಸಪೇಟೆ ನಗರಸಭೆ, ಕುರುಗೋಡು, ಕುರೇಕುಪ್ಪ ಹಾಗೂ ಹಗರಿಬೊಮ್ಮನಹಳ್ಳಿ ಪುರಸಭೆಗೆ ಚುನಾವಣೆ ನಡೆಯಬೇಕಿತ್ತು. ಈ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವುದಕ್ಕೂ ಮುನ್ನವೇ ಎಂಎಲ್‌ಸಿ ಚುನಾವಣೆ ಬಂದಿರುವುದರಿಂದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೆಚ್ಚಿನ ಬೇಡಿಕೆ ಬಂದಿದೆ.

ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಈಗಾಗಲೇ ತಳಮಟ್ಟದ ಪ್ರಚಾರ ಕಾರ್ಯ ನಡೆಸಿವೆ. ಮೊದಲಿನಿಂದಲೂ ಕಾಂಗ್ರೆಸ್‌ ಈ ಕ್ಷೇತ್ರದಲ್ಲಿ ಗೆಲ್ಲುತ್ತ ಬಂದಿದೆ. ಹಾಲಿ ಸ್ಥಾನವನ್ನು ಉಳಿಸಿಕೊಳ್ಳುವ ಸವಾಲು ಅದಕ್ಕಿದೆ. ಇನ್ನು, ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ, ಈ ಸ್ಥಾನದಲ್ಲಿ ಗೆಲುವು ಸಾಧಿಸಿ, ತನ್ನ ಬೇರುಗಳನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ಯೋಜನೆಯಲ್ಲಿದೆ.

ADVERTISEMENT

ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯಲ್ಲಿ 5,327 ಗ್ರಾಮ ಪಂಚಾಯಿತಿ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಚುನಾವಣೆಯಲ್ಲಿ ಇವರ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸಹಜವಾಗಿಯೇ ಇವರ ಮತಗಳೇ ನಿರ್ಣಾಯಕವಾಗಿವೆ. ಈ ಕಾರಣದಿಂದಲೇ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳು ಪಂಚಾಯಿತಿ ಸದಸ್ಯರನ್ನು ಓಲೈಸುವ ಕಸರತ್ತು ನಡೆಸುತ್ತಿವೆ. ಇದರಿಂದಾಗಿ ಪಂಚಾಯಿತಿ ಸದಸ್ಯರಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಕಾಂಗ್ರೆಸ್‌ನಿಂದ ಕೊಂಡಯ್ಯ ಅಂತಿಮ?:

ಈ ಸಲವೂ ಎಂಎಲ್‌ಸಿ ಚುನಾವಣೆಗೆ ಕಾಂಗ್ರೆಸ್‌ನಿಂದ ಕೆ.ಸಿ. ಕೊಂಡಯ್ಯನವರ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಇನ್ನಷ್ಟೇ ಪಕ್ಷದ ಚೌಕಟ್ಟಿನಲ್ಲಿ ಸಭೆ ನಡೆದು ಅಭ್ಯರ್ಥಿ ಹೆಸರು ಅಂತಿಮಗೊಳ್ಳಬೇಕಿದೆ. ಆದರೆ, ಅದಾಗಲೇ ಕೊಂಡಯ್ಯನವರು ಜಿಲ್ಲೆಯಾದ್ಯಂತ ಮತದಾರರನ್ನು ಭೇಟಿ ಮಾಡಿ, ಬೆಂಬಲ ಯಾಚಿಸುತ್ತಿದ್ದಾರೆ. ಕೊಂಡಯ್ಯನವರು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಸೇರಿದಂತೆ ಬಿಜೆಪಿಯ ಹಲವು ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದು ಚುನಾವಣೆಯಲ್ಲಿ ಅವರಿಗೆ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.

ತೈಲ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನೇ ಚುನಾವಣೆ ಪ್ರಚಾರದ ಮುಖ್ಯ ವಿಷಯವಾಗಿಟ್ಟುಕೊಂಡು ಕಾಂಗ್ರೆಸ್‌ ಸ್ಪರ್ಧಿಸಲು ಸಿದ್ಧತೆ ನಡೆಸಿದೆ. ಇನ್ನೊಂದೆಡೆ ಬಿಜೆಪಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತಯಾಚಿಸಲು ತಯಾರಿ ನಡೆಸಿದೆ. ಮತದಾರರು ಯಾರಿಗೆ ಒಲವು ತೋರಿಸುತ್ತಾರೋ ಎನ್ನುವುದನ್ನು ನೋಡಬೇಕಿದೆ.

ಬಿಜೆಪಿ ಜಿಲ್ಲಾ ಘಟಕ ಶಿಫಾರಸು ಮಾಡಿರುವ ಹೆಸರು: ಚನ್ನಬಸವನಗೌಡ ಪಾಟೀಲ, ವೈ.ಎಂ. ಸತೀಶ, ಅಯ್ಯಾಳಿ ತಿಮ್ಮಪ್ಪ, ದಮ್ಮೂರು ಶೇಖರ್‌, ರಾಮಲಿಂಗಪ್ಪ, ಶಶಿಕಲಾ.

ಎಂಎಲ್‌ಸಿಗೆ ಒಲವು ತೋರಿಸದ ಪಾಟೀಲ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಅವರು ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸಲು ಒಲವು ತೋರಿಸಿಲ್ಲ ಎಂದು ಪಕ್ಷದ ಅಧಿಕೃತ ಮೂಲಗಳಿಂದ ಗೊತ್ತಾಗಿದೆ. ಚನ್ನಬಸವನಗೌಡ ಪಾಟೀಲ ಅವರನ್ನೇ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿತ್ತು. ಆದರೆ, ಅವರೇ ಅದಕ್ಕೆ ಒಲವು ತೋರಿಸಲಿಲ್ಲ. ಹೀಗಾಗಿ ಈಗ ಅಭ್ಯರ್ಥಿ ಆಯ್ಕೆ ನಿರ್ಧಾರ ಹೈಕಮಾಂಡ್‌ ಅಂಗಳಕ್ಕೆ ಹೋಗಿದೆ. ಈ ಕುರಿತು ಪಾಟೀಲ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಅದರ ಬಗ್ಗೆ ನಾನೇನೂ ಪ್ರತಿಕ್ರಿಯಿಸುವುದಿಲ್ಲ’ ಎಂದರು.

ಬಿಜೆಪಿ ಜಿಲ್ಲಾ ಘಟಕ ಶಿಫಾರಸು ಮಾಡಿರುವ ಅಭ್ಯರ್ಥಿಗಳ ಹೆಸರು
ಚನ್ನಬಸವನಗೌಡ ಪಾಟೀಲ
ವೈ.ಎಂ. ಸತೀಶ
ಅಯ್ಯಾಳಿ ತಿಮ್ಮಪ್ಪ
ದಮ್ಮೂರು ಶೇಖರ್‌
ರಾಮಲಿಂಗಪ್ಪ
ಶಶಿಕಲಾ

ಬಳ್ಳಾರಿ–ವಿಜಯನಗರ ಅವಳಿ ಜಿಲ್ಲೆಗಳ ಸ್ಥಯಾಳಿಡಳಿಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳ ವಿವರ

ನಗರ; ಅಧಿಕಾರದಲ್ಲಿರುವ ಪಕ್ಷ

ಬಳ್ಳಾರಿ ಮಹಾನಗರ ಪಾಲಿಕೆ; ಕಾಂಗ್ರೆಸ್‌
ಹೊಸಪೇಟೆ ನಗರಸಭೆ; ಇನ್ನಷ್ಟೇ ಚುನಾವಣೆ ನಡೆಯಬೇಕು
ಕಮಲಾಪುರ ಪಟ್ಟಣ ಪಂಚಾಯಿತಿ; ಕಾಂಗ್ರೆಸ್‌
ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ; ಬಿಜೆಪಿ
ಕಂಪ್ಲಿ ಪುರಸಭೆ; ಬಿಜೆಪಿ
ಕುರುಗೋಡು ಪುರಸಭೆ; ಚುನಾವಣೆ ನಡೆಯಬೇಕಿದೆ
ಸಿರುಗುಪ್ಪ ನಗರಸಭೆ; ಕಾಂಗ್ರೆಸ್‌
ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ; ಬಿಜೆಪಿ
ಸಂಡೂರು ಪುರಸಭೆ; ಕಾಂಗ್ರೆಸ್‌
ಕುಡಿತಿನಿ ಪಟ್ಟಣ ಪಂಚಾಯಿತಿ; ಕಾಂಗ್ರೆಸ್‌
ಕುರೇಕುಪ್ಪ ಪುರಸಭೆ; ಚುನಾವಣೆ ನಡೆಯಬೇಕಿದೆ
ಕೂಡ್ಲಿಗಿ ಪಟ್ಟಣ ಪಂಚಾಯಿತಿ; ಬಿಜೆಪಿ–ಜೆಡಿಎಸ್‌
ಕೊಟ್ಟೂರು ಪಟ್ಟಣ ಪಂಚಾಯಿತಿ; ಕಾಂಗ್ರೆಸ್‌
ಹಗರಿಬೊಮ್ಮನಹಳ್ಳಿ ಪುರಸಭೆ; ಚುನಾವಣೆ ನಡೆಯಬೇಕಿದೆ
ಹೂವಿನಹಡಗಲಿ ಪುರಸಭೆ; ಕಾಂಗ್ರೆಸ್‌
ಹರಪನಹಳ್ಳಿ ಪುರಸಭೆ; ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.