ಹೊಸಪೇಟೆ ಎಪಿಎಂಸಿ ಮಾರುಕಟ್ಟೆ ಬಳಿ ಮಳೆಯಲ್ಲೇ ತರಕಾರಿ ಖರೀದಿಯಲ್ಲಿ ತೊಡಗಿದ್ದ ಜನರು
ಹೊಸಪೇಟೆ (ವಿಜಯನಗರ): ಮುಂಗಾರು ಮಳೆಯ ಲಕ್ಷಣ ವಿಜಯನಗರ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಕಾಣಿಸಿದ್ದು, ಹೊಸಪೇಟೆ ನಗರ ಮತ್ತು ಇತರೆಡೆ ಜಿಟಿ ಜಿಟಿ ಮಳೆಯಾಗುತ್ತಿದೆ.
ಹರಪನಹಳ್ಳಿ, ಹಗರಿಬೊಮ್ಮಹಳ್ಳಿ, ಹೂವಿನಹಡಗಲಿ ಸಹಿತ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ.
ಹೊಸಪೇಟೆಯಲ್ಲಿ ಬೆಳಿಗ್ಗೆಯೇ ಮಳೆ ಸುರಿಯಲಾರಂಭಿಸಿದ್ದರಿಂದ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಮಾರುಕಟ್ಟೆಯಿಂದ ತರಕಾರಿ ತರುವ ಸಾರ್ವಜನಿಕರಿಗೆ ಸ್ವಲ್ಪ ಕಿರಿಕಿರಿ ಉಂಟಾಯಿತು. ಎಪಿಎಂಸಿ ಸಮೀಪದ ತರಕಾರಿ ಮಾರುಕಟ್ಟೆಯಲ್ಲಿ ಜನರು ಕೊಡೆ ಹಿಡಿದುಕೊಂಡೇ ಖರೀದಿಯಲ್ಲಿ ತೊಡಗಿದ್ದರು. ರಸ್ತೆ ಬದಿಯಲ್ಲಿ ಅಲ್ಲಲ್ಲಿ ನೀರು ನಿಂತು ವಾಹನ ಸಾಗುವಾಗ ಕೆಸರಿನ ಸಿಂಚನ ಹಲವರಿಗೆ ಆಯಿತು.
ತುಂಗಭದ್ರಾಕ್ಕೆ 6,595 ಕ್ಯುಸೆಕ್ ನೀರು:
ಶಿವಮೊಗ್ಗ ಜಿಲ್ಲೆ ಸಹಿತ ತುಂಗಭದ್ರಾ ನದಿಯ ಅಚ್ಚುಕಟ್ಟು ಪ್ರದೇಶಗಳಲ್ಲಿ ಸಾಧಾರಣ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಸೋಮವಾರ ಬೆಳಿಗ್ಗೆಯ ಹೊತ್ತಿಗೆ 6,595 ಕ್ಯುಸೆಕ್‌ನಷ್ಟು ಒಳಹರಿವು ದಾಖಲಾಗಿದೆ. ಜಲಾಶಯದಲ್ಲಿ ಇದೀಗ ನೀರಿನ ಸಂಗ್ರಹ 11.24 ಟಿಎಂಸಿ ಅಡಿಯಷ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 3.35 ಟಿಎಂಸಿ ಅಡಿಯಷ್ಟು ಮಾತ್ರ ನೀರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.