ADVERTISEMENT

ಹಂಪಿಯ ಇತಿಹಾಸ ತಿಳಿಸಲು ತಿಂಗಳಿಗೊಂದು ಉಪನ್ಯಾಸ: ಶಾಸಕ ಗವಿಯಪ್ಪ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 11:41 IST
Last Updated 14 ಫೆಬ್ರುವರಿ 2026, 11:41 IST
<div class="paragraphs"><p>ಶಾಸಕ ಗವಿಯಪ್ಪ </p></div>

ಶಾಸಕ ಗವಿಯಪ್ಪ

   

ಹೊಸಪೇಟೆ (ವಿಜಯನಗರ): ಹಂಪಿಯ ಇತಿಹಾಸ, ಪರಂಪರೆಗಳ ಕುರಿತು ಮಕ್ಕಳಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯ ಇದೆ. ಇದಕ್ಕಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ತಿಂಗಳಿಗೊಂದು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳುವ ವಿಚಾರ ಮಾಡಿರುವುದಾಗಿ ಶಾಸಕ ಎಚ್.ಆರ್ ಗವಿಯಪ್ಪ ಹೇಳಿದರು.

ಹಂಪಿ ಉತ್ಸವ ಪ್ರಯುಕ್ತ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ವಿಜಯನಗರ ಜಿಲ್ಲಾಡಳಿತ ಸಹಯೋಗದಲ್ಲಿ ಕಮಲ ಮಹಲ್ ಸಮೀಪ ಶನಿವಾರ ‘ವಿಜಯನಗರ ಅಧ್ಯಯನ’ ಕುರಿತು ಆಯೋಜಿಸಲಾದ 28ನೇ ವಾರ್ಷಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಹಂಪಿ ಅಭಿವೃದ್ದಿಗಾಗಿ ಭಾರತೀಯ ಪುರಾತತ್ವ ಇಲಾಖೆಗೆ ಹೊಸ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಂಪಿಯ ಎಲ್ಲಾ ದೇವಾಲಯಗಳು, ಸ್ಮಾರಕಗಳನ್ನು ಪ್ರವಾಸಿಗರು ಸುಗಮವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಸ್ಮಾರಕಗಳನ್ನು ಸಂಪರ್ಕಿಸುವ ರಸ್ತೆ ನಿರ್ಮಿಸುಲು ಟ್ರಾವೆಲ್ ರೋಡ್ಸ್ ಯೋಜನೆಯನ್ನು ರೂಪಿಸಲಾಗಿದೆ. ಇದರಿಂದ ನೂರಾರು ಸ್ಮಾರಕಗಳನ್ನು ಪ್ರವಾಸಿಗರು ಸರಾಗವಾಗಿ ನೋಡಬಹುದು’ ಎಂದು‌ ಶಾಸಕರು ಹೇಳಿದರು.

ಕೂಡ್ಲಿಗಿ ಶಾಸಕ ಡಾ.ಎನ್‌.ಟಿ.ಶ್ರೀನಿವಾಸ್ ಮಾತನಾಡಿ, ಸಾಮಾಜಿಕ ಮಾಧ್ಯಮಗಳ ಕಾಲದಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಗೊಂದಲಯಮಯವಾಗಿದೆ. ಹೀಗಾಗಿ ವಿಜಯನಗರದ ಇತಿಹಾಸವನ್ನು ಯುವಜನರಿಗೆ ತಿಳಿಸುವ ಜವಾಬ್ದಾರಿ  ನಮ್ಮ ನಿಮ್ಮೆಲ್ಲರ ಮೇಲಿದೆ. ಕನ್ನಡ ವಿಶ್ವವಿದ್ಯಾಲಯದಿಂದ ಹಂಪಿಯ ಕುರಿತು ಹೆಚ್ಚು ಅಧ್ಯಯನಗಳು ನಡೆದಿವೆ. ಆದರೆ ಇತ್ತೀಚಿಗೆ ವಿಶ್ವವಿದ್ಯಾಲಯ ಅನುದಾನದ ಕೊರತೆಯಿಂದ ಸೊರಗುತ್ತಿದ್ದು, ಇದಕ್ಕೆ ಪರಿಹಾರ ಕಲ್ಪಿಸಲು ಸರ್ಕಾರದೊಂದಿಗೆ ಮಾತನಾಡಲಾಗಿದೆ ಎಂದರು.

119 ತಾಲ್ಲೂಕುಗಳ ಸರ್ವೆ: ಪುರಾತತ್ತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜ್‌ ಮಾತನಾಡಿ, ವಿಜಯನಗರ ಅಧ್ಯಯನ ಕುರಿತ ವಿಚಾರ ಸಂಕಿರಣವು ಇತಿಹಾಸದ ಮಾರ್ಗದರ್ಶನ, ಪುನರ್ ಅವಲೋಕನಕ್ಕೆ ಅವಕಾಶ ಮಾಡಿಕೊಡುತ್ತದೆ. ರಾಜ್ಯ ಪುರಾತತ್ವ ಇಲಾಖೆಯು ಗ್ರಾಮವಾರು ಪ್ರಾಚ್ಯ ಅವಶೇಷಗಳ ಸರ್ವೇಕ್ಷಣಾ ಕಾರ್ಯದ ಮೂಲಕ 119 ತಾಲೂಕುಗಳನ್ನು ಸರ್ವೆ ನಡೆಸಿದೆ. ಗ್ರಾಮಗಳ ಸರ್ವೆ ಮೂಲಕ ಲಭ್ಯವಿರುವ ಪ್ರಾಚ್ಯ ಅವಶೇಷಗಳನ್ನು ದಾಖಲೀಕರಣಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಹಂಪಿಯ ಉತ್ಖನನದಲ್ಲಿ ಇತಿಹಾಸಕಾರರ ಪಾತ್ರ ಮಹತ್ತರವಾದುದು. ಇನ್ನು ಹೆಚ್ಚು ಅಧ್ಯಯನಗಳು ನಡೆಯಲಿ ಎಂದು ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿರುಪಾಕ್ಷಿ ಪೂಜಾರಹಳ್ಳಿ ವಿಚಾರ ಸಂಕಿರಣದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಹಂಪಿಯ ಕುರಿತು ಬಹು ಶಿಸ್ತು ಮತ್ತು ಅಂತರ್ ಶಿಸ್ತು ನೆಲೆಯಲ್ಲಿ ಅಧ್ಯಯನಗಳು ನಡೆಯಬೇಕು. ವಿಜಯನಗರ ಕಾಲದಲ್ಲಿ ರಚನೆಯಾದ ಸಾಹಿತ್ಯ ಕೃತಿಗಳನ್ನು ಇತಿಹಾಸ ರಚನೆಯಲ್ಲಿ ಆಕಾರಗಳಾಗಿ ಪರಿಶೀಲಿಸುವ ಮರು ಚಿಂತನೆ ನಡೆಯಬೇಕು ಎಂದರು.

‘ವಿಜಯನಗರದ ಇತಿಹಾಸದ ಕುರಿತು ಸಂಸ್ಕ್ರತ, ಕನ್ನಡ, ತೆಲುಗು ಭಾಷೆಯಲ್ಲಿ ರಚನೆಯಾದ ಸಾಹಿತ್ಯ ಕೃತಿಗಳನ್ನು ದೇಶದ ವಿವಿಧ ಭಾಷೆಗಳಿಗೆ ಅನುವಾದಗೊಳ್ಳಬೇಕು. ವಿಜಯನಗರವನ್ನು ಆಳಿದ ನಾಲ್ಕು ವಂಶಗಳಲ್ಲಿ ಸಂಗಮ ಮತ್ತು ತುಳು ವಂಶ ಬಿಟ್ಟರೆ ಉಳಿದ ಎರಡು ವಂಶಗಳಾದ ಸಾಳುವ ಮತ್ತು ಅರವೀಡು ಮನೆತನಗಳ ಕುರಿತು ಸಮಗ್ರ ಅಧ್ಯಯನ ನಡೆಸುವ ಯೋಜನೆ ರೂಪಿಸಬೇಕು. ವಾಣಿಜ್ಯದ ನೆಲೆಯಲ್ಲಿ ದೇಶಿ ವ್ಯಾಪಾರ, ವಿದೇಶಿ ವ್ಯಾಪಾರದ ಪುನರ್ ಮೌಲ್ಯೀಕರಣ, ಪುನರ್ ಚಿಂತನೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಇಲಾಖೆಯ ನಿರ್ದೇಶಕ ಆರ್.ಶೇಜೇಶ್ವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ಎಸ್. ತಳಕೇರಿ, ಉಪವಿಭಾಗಾಧಿಕಾರಿ ವಿವೇಕಾನಂದ, ಹೊಸಪೇಟೆಯ ತಹಶೀಲ್ದಾರ್ ಶೃತಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.