ADVERTISEMENT

ಇಂದು, ನಾಳೆ ಹಂಪಿ ಉತ್ಸವಕ್ಕೆ ಜನ ಬರುವ ಭರವಸೆ ಇದೆ: ಆನಂದ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 10:23 IST
Last Updated 28 ಜನವರಿ 2023, 10:23 IST
ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.
ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.   

ಹೊಸಪೇಟೆ (ವಿಜಯನಗರ): ‘ಶನಿವಾರ ಹಾಗೂ ಭಾನುವಾರ ಹಂಪಿ ಉತ್ಸವಕ್ಕೆ ಜನ ಬರುವ ಭರವಸೆ ಇದೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಹೊಸ ಮಲಪನಗುಡಿ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗಾಯತ್ರಿ ಪೀಠದ ಮುಖ್ಯ ವೇದಿಕೆಯ ವರೆಗೆ ಸಾರ್ಜನಿಕರಿಗೆ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಯಾವುದೇ ಪಾಸ್‌ಗಳ ನಿರ್ಬಂಧವಿಲ್ಲ ಎಂದು ತಿಳಿಸಿದರು.

ಹಂಪಿಯಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ದೂರ ದೂರದಲ್ಲಿ ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ವಸ್ತು ಪ್ರದರ್ಶನದ ಮಳಿಗೆಗಳು ಗಾಯತ್ರಿ ಮುಖ್ಯ ವೇದಿಕೆಯಿಂದ ದೂರದಲ್ಲಿವೆ. ಅವುಗಳು ಹತ್ತಿರದಲ್ಲಿ ಇದ್ದಿದ್ದರೆ ಜನರು ವಸ್ತು ಪ್ರದರ್ಶನದ ಜೊತೆಗೆ ಮುಖ್ಯ ವೇದಿಕೆಯ ಕಾರ್ಯಕ್ರಮಗಳನ್ನು ಸಹ ವೀಕ್ಷಿಸಿಸುತ್ತಿದ್ದರು. ಚದುರಿದ ವೇದಿಕೆ ನಿರ್ಮಾಣದಿಂದ ಮುಖ್ಯ ವೇದಿಕೆಯಲ್ಲಿ ಜನರ ಕೊರತೆಯಾಗಿದೆ ಎಂದರು.

ಬೇರೆ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ ರೀತಿಯಲ್ಲಿ ಹಂಪಿಯಲ್ಲಿ ಕಾರ್ಯಕ್ರಮ ಆಯೋಜಿಸಲು ಆಗುವುದಿಲ್ಲ. ವಿಶ್ವ ಪಾರಂಪರಿಕ ಸ್ಮಾರಕಗಳಿರುವ ಸ್ಥಳದಲ್ಲಿ ಸಾಕಷ್ಟು ಬಿಗಿ ನಿಯಮಗಳು ಇರುತ್ತವೆ. ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಸಾಕಷ್ಟು ಸಭೆಗಳನ್ನು ನಡೆಸಿ ಉತ್ಸವದ ಸಿದ್ಧತೆ ಕೈಗೊಂಡಿದ್ದಾರೆ. ಇಂದು, ನಾಳೆ ಹಂಪಿ ಉತ್ಸವದಲ್ಲಿ ಜನರು ಸೇರಲಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.