ADVERTISEMENT

ಹೊಸಪೇಟೆ | ಪೌರಸಿಬ್ಬಂದಿ ಮುಷ್ಕರ; ಸೇವೆ ಅಸ್ತವ್ಯಸ್ತ, ನಗರದಲ್ಲಿ ರಾಶಿ ಬಿದ್ದ ಕಸ

​ಪ್ರಜಾವಾಣಿ ವಾರ್ತೆ
Published 27 ಮೇ 2025, 8:10 IST
Last Updated 27 ಮೇ 2025, 8:10 IST
   

ಹೊಸಪೇಟೆ (ವಿಜಯನಗರ): ಪೌರ ವೃಂದದ ನೌಕರರನ್ನು ಸರ್ಕಾರಿ ನೌಕರರೆಂದು  ಘೋಷಿಸುವುದು ಸಹಿತ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಿಜಯನನಗರ ಜಿಲ್ಲೆಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಮಂಗಳವಾರ ಬೆಳಿಗ್ಗೆಯಿಂದ ಮುಷ್ಕರ ಆರಂಭಿಸಿದ್ದು, ನೀರು, ಬೀದಿದೀಪ ಹೊರತುಪಡಿಸಿ ಉಳಿದೆಲ್ಲ ಕೆಲಸಗಳೂ ಸ್ಥಗಿತಗೊಂಡಿವೆ.

ಹೊಸಪೇಟೆ ನಗರಸಭೆಯ ಮುಂಭಾಗ ಜಿಟಿ ಜಿಟಿ ಮಳೆಯಲ್ಲೂ ಟೆಂಟ್ ಹಾಕಿ ಪ್ರತಿಭಟನೆಗೆ ಕುಳಿತ ಕಾಯಂ, ಹೊರಗುತ್ತಿಗೆ ಮತ್ತು ಗುತ್ತಿಗೆ ನೌಕರರು, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಘೋಷಣೆ ಕೂಗಿದರು. 

ತಕ್ಷಣ ಬೇಡಿಕೆ ಈಡೇರಿಸಿ: ‘ಅಗತ್ಯದ ನೀರು ಪೂರೈಕೆ, ಬೀದಿದೀಪ ನಿರ್ವಹಣೆ ಹೊರತು ಉಳಿದೆಲ್ಲ ಸೇವೆಗಳೂ ಬಂದ್ ಆಗಿವೆ, ನಮ್ಮ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು’ ಎಂದು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಹೊಸಪೇಟೆ ಶಾಖೆಯ ಅಧ್ಯಕ್ಷ ಬಿ.ಎಂ.ನಾಗೇಂದ್ರ ವರ್ಮಾ ಹೇಳಿದರು.

ADVERTISEMENT

ಸರ್ಕಾರ ತಕ್ಷಣ ಸ್ಪಂದಿಸಿ ಬೇಡಿಕೆ ಈಡೇರಿಸಿದರೆ ಮುಷ್ಕರ ಕೊನೆಗೊಳ್ಳಲಿದೆ, ಇಲ್ಲವಾದರೆ ಸಂಘದ ರಾಜ್ಯದ ಸೂಚನೆಯಂತೆ ಅನಿರ್ದಿಷ್ಟ ಅವಧಿಗೆ ಮುಷ್ಕರ ಮುಂದುವರಿಯಲಿದೆ, ರಾತ್ರಿಯೂ ನಾಲ್ಕೈದು ಮಂದಿ ಇಲ್ಲೇ ಕುಳಿತು ಅಹೋರಾತ್ರಿ ಧರಣಿ ಮುಂದುವರಿಸಲಿದ್ದೇವೆ ಎಂದು ಅವರು ಹೇಳಿದರು.

45 ದಿನಗಳಿಂದ ಕಪ್ಪುಪಟ್ಟಿ ಧರಿಸಿ ಕೆಲಸ: ಜನರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಪೌರ ಸಿಬ್ಬಂದಿ ಕಳೆದ 45 ದಿನಗಳಿಂದ ಕೈಗೆ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಿಸಿದ್ದರು ಹಾಗೂ ಮೇ 26ರೊಳಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂಬ ಗಡುವು ನೀಡಿದ್ದರು. ಸರ್ಕಾರ ಬೇಡಿಕೆ ಈಡೇರಿಸಿಲ್ಲದ ಕಾರಣ ಮುಷ್ಕರ ತೀವ್ರ ಸ್ವರೂಪ ಪಡೆದಿದೆ.

ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಉಪಾಧ್ಯಕ್ಷ ರಮೇಶ್ ಗುಪ್ತ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷ ಎಚ್.ಎನ್‌.ಎಫ್‌.ಮೊಹಮ್ಮದ್ ಇಮಾಂ ನಿಯಾಜಿ, ಹೆಚ್ಚಿನ ಎಲ್ಲ ನಗರಸಭೆ ಸದಸ್ಯರು ಬಂದು ಮುಷ್ಕರಕ್ಕೆ ಬೆಂಬಲ ಸೂಚಿಸಿದರು.

ಕಸದ ರಾಶಿ: ಮುಷ್ಕರದ ಕಾರಣ ನಗರದಲ್ಲಿ ಮನೆ ಮನೆಗಳಿಂದ ಕಸ ಸಂಗ್ರಹ ನಡೆಯಲಿಲ್ಲ ಹಾಗೂ ರಸ್ತೆ ಬದಿಯಲ್ಲಿ ಸಂಗ್ರಹವಾಗಿರುವ ಕಸವನ್ನು ಎತ್ತುವ ಕೆಲಸವೂ ನಡೆಯಲಿಲ್ಲ. ಇದರ ಜತೆಗೆ ಒಳಚರಂಡಿ ಸ್ವಚ್ಛತೆ, ಎಂಜಿನಿಯರಿಂಗ್ ಕೆಲಸಗಳೂ ನಡೆಯಲಿಲ್ಲ. ನಗರಸಭೆ ಕಚೇರಿಯೊಳಗೆ ಆಯುಕ್ತರು ಬಿಟ್ಟರೆ ಉಳಿದೆಲ್ಲರೂ ಪ್ರತಿಭಟನೆಯಲ್ಲಿ ತೊಡಗಿದ್ದರು.  ಹೀಗಾಗಿ ನಾಗರಿಕರ ಸೇವೆಗಳೆಲ್ಲ ಬಂದ್ ಆಗಿವೆ.

ಹರಪನಹಳ್ಳಿ, ಕೂಡ್ಲಿಗಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಮರಿಯಮ್ಮನಹಳ್ಳಿ, ಕಮಲಾಪುರಗಳಲ್ಲಿ ಸಹ ಪೌರ ಸಿಬ್ಬಂದಿ ಮುಷ್ಕರ ನಡೆಸಿದ್ದರಿಂದ ಸ್ವಚ್ಛತಾ ಕೆಲಸ, ಇತರ ಎಲ್ಲಾ ಸೇವೆಗಳೂ ಸ್ಥಗಿತಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.