ADVERTISEMENT

ವಿನಾ ಕಾರಣ ಮುಸ್ಲಿಮರ ದ್ವೇಷ ಸಲ್ಲ: ಸಾಹಿತಿ ಕುಂ.ವೀರಭದ್ರಪ್ಪ

ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಕೃತಿ ಜನಾರ್ಪಣೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 11:29 IST
Last Updated 10 ಜನವರಿ 2026, 11:29 IST
   

ಹೊಸಪೇಟೆ (ವಿಜಯನಗರ): ದೇಶದಲ್ಲಿ ಕಳೆದ 11 ವರ್ಷಗಳಿಂದ ಸೌಹಾರ್ದ ಕೆಡಿಸುವ ಯತ್ನ ನಡೆಯುತ್ತಿದೆ. ಮುಸ್ಲಿಮವರನ್ನು ವಿನಾ ಕಾರಣ ದ್ವೇಷಿಸುವ ವಾತಾವರಣ ನಿರ್ಮಿಸಲಾಗಿದೆ, ಇದರ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ಸೌಹಾರ್ದ ಕರ್ನಾಟಕ ಹೊಸಪೇಟೆ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ..’ ಕೃತಿಯನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಾಹಿತ್ಯದ ಮೂಲವೇ ಸೌಹಾರ್ದ: ಸೌಹಾರ್ದತೆ ಎಂಬುದು ಈ ದೇಶದ ಮೂಲಭೂತ ಗುಣ. ಇನ್ನೊಂದು ಧರ್ಮವನ್ನು, ವಿಚಾರಗಳನ್ನು ಗೌರವಿಸು ಎಂದೇ ಎಲ್ಲಾ ದಾರ್ಶನಿಕರೂ, ಸಾಹಿತಿಗಳೂ ಹೇಳಿದ್ದಾರೆ. ಆದರೆ ನಾವು ಈ ಮೂಲ ತತ್ವವನ್ನೂ ಕಳೆದ 11 ವರ್ಷಗಳಿಂದ ಮರೆತಂತೆ ವರ್ತಿಸುತ್ತಿದ್ದೇವೆ ಎಂದು ಕುಂ.ವೀ ವಿಷಾದ ವ್ಯಕ್ತಪಡಿಸಿದರು.

ADVERTISEMENT

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹಳಷ್ಟು ಮುಸ್ಲಿಮರು ಬಲಿದಾನ ಮಾಡಿದ್ದಾರೆ ಎಂದ ಅವರು, ತಾವು ದೇಶಪ್ರೇಮಿಗಳು ಎಂದು ಹೇಳಿಕೊಳ್ಳುವ ಸಂಘಟನೆಯವರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡೇ ಇಲ್ಲ ಎಂದರು.

ಕೃತಿ ಪರಿಚಯ ಮಾಡಿದ ಕತೆಗಾರ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಅಮರೇಶ ನುಗಡೋಣಿ ಮಾತನಾಡಿ, ‌ ಗಾಂಧಿ, ವಿವೇಕಾನಂದರ ಹಲವು ವಿಚಾರಗಳನ್ನು ಎತ್ತಿಕೊಂಡ ಬರಗೂರು ಅವರು ತಮ್ಮ ಕೃತಿಯಲ್ಲಿ ಸೌಹಾರ್ದತೆಯ ಅಗತ್ಯವನ್ನು ತಿಳಿಸಿದ್ದಾರೆ, ಈ ಕೃತಿಯನ್ನು ಶಾಲಾ, ಕಾಲೇಜುಗಳಲ್ಲಿ ಹಂಚಿ, ಯುವಜನಾಂಗದವರಿಗೆ ಸೌಹಾರ್ದದ ಬಗ್ಗೆ ಮನವರಿಕೆ ಮಾಡುವ ಅಗತ್ಯ ಇದೆ ಎಂದರು.

ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಂ ನಿಯಾಜಿ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಸತ್ಯನಾರಾಯಣ, ರಂಗ ಕಲಾವಿದೆ ನಾಗರತ್ನಮ್ಮ, ವಕೀಲ ಗುಜ್ಜಲ್ ನಾಗರಾಜ ಮಾತನಾಡಿದರು. ಸೌಹಾರ್ದ ಕರ್ನಾಟಕದ ಜಿಲ್ಲಾ ಸಂಚಾಲಕ ಎ.ಕರುಣಾನಿಧಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಡಿಎಚ್‌ಎಸ್ ಮುಖಂಡ ಜಂಬಯ್ಯ ನಾಯಕ ಇತರರ ಇದ್ದರು. ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದ ಪತ್ರಕರ್ತ ಕೆ.ಲಕ್ಷ್ಮಣ್‌ ಅವರನ್ನು ಸನ್ಮಾನಿಸಲಾಯಿತು.

ವಿಜಯನಗರ ಸಾಮ್ರಾಜ್ಯ ಮುಸ್ಲಿಮರಿಂದ ಕೊಳ್ಳೆ ಎಂಬ ವಾದ ಸರಿಯಲ್ಲ

‘ವಿಜಯನಗರ ಸಾಮ್ರಾಜ್ಯವನ್ನು ಕೊಳ್ಳೆ ಹೊಡೆದವರು ಮುಸ್ಲಿಮರು ಎಂಬ ವಾದ ಸರಿಯಲ್ಲ, ರಾಮರಾಯ ಸೋತ ತಕ್ಷಣ ರಾಜರ ಮೇಲಿನ ದ್ವೇಷದಿಂದ ಇಲ್ಲಿನ ಹಿಂದೂಗಳೇ ಸಾಮ್ರಾಜ್ಯವನ್ನು ಕೊಳ್ಳೆ ಹೊಡೆದರು’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

‘ರಾಮರಾಯ ಯುದ್ಧದಲ್ಲಿ ಸೋತದ್ದು ಹಂಪಿಯಿಂದ ಬಹಳ ದೂರದ ರಕ್ಕಸತಂಗಡಿಯಲ್ಲಿ. ವಿಜಯಶಾಲಿ ಮುಸ್ಲಿಂ ಸೈನಿಕರು ಅಲ್ಲಿಂದ ಹಂಪಿಯತ್ತ ಬರಲು ಬಹಳಷ್ಟು ಸಮಯವೇ ಬೇಕಿತ್ತು. ಆದರೆ ರಾಮರಾಯ ಸೋತ ತಕ್ಷಣ ವಿಜಯನಗರ ಸಾಮ್ರಾಜ್ಯವನ್ನು ಕೊಳ್ಳೆ ಹೊಡೆಯುವ ಕೆಲಸ ಆರಂಭವಾಗಿತ್ತು. ಇದನ್ನು ಇಲ್ಲಿ ಯಾರು ಮಾಡಿದ್ದು ಎಂದು ಊಹಿಸುವುದು ಕಷ್ವವಲ್ಲ’ ಎಂದರು.

‘ವಿಜಯನಗದ ಇತಿಹಾಸ ಗಮನಿಸಿದರೆ ಇಲ್ಲಿ ರಚನೆಯಾದ ಸಾಹಿತ್ಯಗಳಲ್ಲಿ ರಾಜರನ್ನು ಹೊಗಳುವ, ಅವರ ಸಾಧನೆ ತಿಳಿಸುವ ಅಂಶ ಕಾಣಿಸುವುದಿಲ್ಲ, ಬದಲಿಗೆ ಇಲ್ಲಿನ ಜಾನಪದ ಸಾಹಿತ್ಯಗಳಲ್ಲಿ ಕುಮಾರರಾಮ, ಪಾಳೆಗಾರರು, ಜನಸಾಮಾನ್ಯರನ್ನು ಹೊಗಳುವ ಪರಿಪಾಠ ಕಾಣಿಸುತ್ತದೆ. ರಾಜರಿಂದ ಜನರಿಗೆ, ಜನಸಾಮಾನ್ಯರಿಗೆ ನೆಮ್ಮದಿ ಇರಲಿಲ್ಲ ಎಂಬುದನ್ನು ಇದು ಸೂಚಿಸುತ್ತದೆ, ಇದರ ಫಲವಾಗಿಯೇ ರಾಜ್ಯ ಪತನವಾದಾಗ ಕೊಳ್ಳೆ ಹೊಡೆದು ಸೇಡು ತೀರಿಸಿಕೊಳ್ಳುವ ಕೆಲಸ ಇಲ್ಲಿ ನಡೆದಂತೆ ಕಾಣಿಸುತ್ತದೆ’ ಎಂದು ಅವರು ವಿವರಿಸಿದರು.

ಹೊರನಾಡಲ್ಲಿ ಕನ್ನಡ ಉಳಿಸುವ ಕೆಲಸ ಆಗಲಿ: ಕಾಸರಗೋಡಿನಂತಹ ಗಡಿನಾಡು ಪ್ರದೇಶಗಳಲ್ಲಿ, ಹೊರ ರಾಜ್ಯಗಳಲ್ಲಿ ಕನ್ನಡ ಉಳಿಸುವ ಕೆಲಸವನ್ನು ಸರ್ಕಾರ ತುರ್ತಾಗಿ ನಡೆಸಬೇಕು ಎಂದು ಕು.ವೀ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.