ADVERTISEMENT

ಕೂಡ್ಲಿಗಿ | 2ಬಿ ಮೀಸಲಾತಿ ರದ್ದತಿ; ಮುಸ್ಲಿಮರಿಂದ ಮೌನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 8:14 IST
Last Updated 1 ಏಪ್ರಿಲ್ 2023, 8:14 IST
   

ಕೂಡ್ಲಿಗಿ (ವಿಜಯನಗರ ಜಿಲ್ಲೆ): ಅಲ್ಪಸಂಖ್ಯಾತರ 2ಬಿ ಮೀಸಲಾತಿ ರದ್ದುಪಡಿಸಿರುವುದನ್ನು ವಿರೋಧಿಸಿ ಕರ್ನಾಟಕ ಮುಸ್ಲಿಂ ಸಂಘದ ಪದಾಧಿಕಾರಿಗಳು ಹಾಗೂ ಮುಸ್ಲಿಂ ಸಮುದಾಯದವರು ಶನಿವಾರ ಪಟ್ಟಣದಲ್ಲಿ ಮೌನ ಮೆರವಣಿಗೆ ಮಾಡಿದರು.

ಕರ್ನಾಟಕ ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷ ಎಲ್.ಎಸ್. ಬಷೀರ್ ಅಹಮ್ಮದ್ ಮಾತನಾಡಿ, ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ 2ಬಿ ಮೀಸಲಾತಿಯನ್ನು ಕಿತ್ತುಕೊಂಡಿರುವುದು ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ರಾಜ್ಯದಲ್ಲಿ ಶೇ 14.2ರಷ್ಟು ಮುಸ್ಲಿಂರಿದ್ದು, ಇಡೀ ಸಮುದಾಯ ಚಿಂತಾಜನಕ ಸ್ಥಿತಿಯಲ್ಲಿದೆ. ಆದ್ದರಿಂದ ಮುಸ್ಲಿಮರಿಗೆ ನೀಡಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದುಪಡಿಸಿರುವ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಒತ್ತಾಯಿಸಿದ ಅವರು, ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗದ ರೀತಿಯಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿ ಪುನಃ ಪ್ರತ್ಯೇಕ ಸಮಿತಿಯನ್ನು ರಚಿಸಿ 2ಬಿ ಮೀಸಲಾತಿಯನ್ನು ಮುಂದುವರಿಸಬೇಕೆಂದು ಆಗ್ರಹಿಸಿದರು.

ನಂತರ ತಮ್ಮ ಬೇಡಿಕೆಯ ಮನವಿಯನ್ನು ತಹಶೀಲ್ದಾರ್ ಟಿ. ಜಗದೀಶ್ ಅವರಿಗೆ ಸಲ್ಲಿಸಿದರು. ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವಸಂತ ಅಸೋದೆ ಇದ್ದರು.

ADVERTISEMENT

ಇದಕ್ಕೂ ಮೊದಲು ಪಟ್ಟಣದ ಗಾಂಧಿ ಚಿತಾ ಭಸ್ಮವಿರುವ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸಿ, ಅಲ್ಲಿಂದ ತಾಲ್ಲೂಕು ಕಚೇರಿಯವರಿಗೆ ಮೌನ ಮೆರವಣಿಗೆ ಮಾಡಿದರು.

ಮುಸ್ಲಿಂ ಮುಖಂಡರಾದ ಮಹಮ್ಮದ್ ಷರೀಫ್, ಮುನ್ನಾ, ಸಾಮಿಲ್ ರೆಹಮಾನ್, ಮಲಿಕ್, ಚಾಂದ್, ವಲಿಬಾಷಾ, ಮದೀನ್ ಸಾಬ್, ಮುತವಲ್ಲಿ, ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಹೊನ್ನೂರು ಸಾಬ್, ಖಾಸೀಂ ಸಾಬ್, ಕೆ. ಯಾಕೂಬ್ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.