ಹೊಸಪೇಟೆ (ವಿಜಯನಗರ): ಹಂಪಿಯಲ್ಲಿ ಸ್ಮಾರಕಗಳ ಬಳಿ ಸ್ವಚ್ಛತೆ ಕಾಪಾಡಿಲ್ಲ, ಎಲ್ಲೆಂದರಲ್ಲಿ ಕಸ, ಗಲೀಜು ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ವಿಜಯನಗರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಗುರುವಾರ ಬೆಳಿಗ್ಗೆಯೇ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಹಂಪಿಗೆ ತೆರಳಿ ಪರಿಶೀಲನೆ ನಡೆಸಿದರು.
ಪ್ರಮುಖ ಸ್ಮಾರಕಗಳು, ಅವುಗಳ ಸಮೀಪ ಇರುವ ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆಯನ್ನು ಜಿಲ್ಲಾಧಿಕಾರಿ ಅವರು ವಿಶೇಷವಾಗಿ ಪರಿಶೀಲನೆ ನಡೆಸಿದರು. ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ತಹಶೀಲ್ದಾರ್ ಶ್ರುತಿ ಎಂ.ಎಂ. ಇತರರು ಇದ್ದರು.
ವಿರೂಪಾಕ್ಷ ದೇವಸ್ಥಾನ ಸಮೀಪದ ವಾಹನ ನಿಲುಗಡೆ ಸ್ಥಳ, ಅಂಗಡಿಗಳ ಸಮೀಪದ ಶುಚಿತ್ವ ಪರಿಶೀಲಿಸಿದ ಡಿ.ಸಿ ಮತ್ತು ಇತರ ಅಧಿಕಾರಿಗಳು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕೆಲವೇ ದಿನಗಳಲ್ಲಿ ಕೇಂದ್ರದ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಹಂಪಿಗೆ ಭೇಟಿ ನೀಡಲಿದ್ದು, ಅದರೊಳಗೆ ಎಲ್ಲ ವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂದು ಸೂಚಿಸಿದರು ಎಂದು ಹೇಳಲಾಗಿದೆ.
ಜಿಲ್ಲಾಧಿಕಾರಿ ಅವರು ಹೊಸಪೇಟೆಯಿಂದ ಹಂಪಿಗೆ ತೆರಳುವ ದಾರಿಯಲ್ಲಿ ಮಲಪನಗುಡಿಯಿಂದಲೇ ರಸ್ತೆ ಬದಿಯಲ್ಲಿನ ಕಸ, ಗಲೀಜಿನ ಬಗ್ಗೆ ಗಮನ ಹರಿಸುತ್ತಲೇ ಹೋಗಿದ್ದರು. ಕಡ್ಡಿರಾಂಪುರದ ಹಂಪಿ ದ್ವಾರದ ಬಳಿಯಲ್ಲಿ ಕಾರಿನಿಂದ ಇಳಿದು ಸ್ವಚ್ಛತೆ ನಿರ್ವಹಣೆ ಕುರಿತು ಮಾಹಿತಿ ಪಡೆದುಕೊಂಡಿದ್ದರು.
ನಿರ್ಮಲಾ ಸಿಟ್ಟಿಗೆ ಕಾರಣ: ಬಜೆಟ್ ಹಿನ್ನೆಲೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಚಿವಾಲಯದ ಅಧಿಕಾರಿಗಳೊಂದಿಗೆ ಡಿಸೆಂಬರ್ 20 ಮತ್ತು 21ರಂದು ಹಂಪಿ ಸಮೀಪ ಚಿಂತನಾ ಶಿಬಿರ ನಡೆಸಲಿದ್ದಾರೆ ಎಂಬುದು ವಾರಗಳ ಹಿಂದೆಯೇ ಅಧಿಕಾರಿಗಳಿಗೆ ಗೊತ್ತಿತ್ತು. ಸುಮಾರು 120ರಷ್ಟು ಐಎಎಸ್ ಅಧಿಕಾರಿಗಳ ಸಹಿತ 150ಕ್ಕೂ ಅಧಿಕ ಹಿರಿಯ ಅಧಿಕಾರಿಗಳು ಹಂಪಿಯ ಸ್ಮಾರಕಗಳನ್ನು ವೀಕ್ಷಿಸುತ್ತಾರೆ ಎಂದು ತಿಳಿಸಲಾಗಿತ್ತು. ಹಾಗಿದ್ದರೂ ಹಂಪಿಯ ಪ್ರಮುಖ ಸ್ಮಾರಕಗಳ ಬಳಿಯಲ್ಲೇ ಸ್ಚಚ್ಛತೆ ಕಾಪಾಡಲಿಲ್ಲ ಎಂಬುದೇ ಸಚಿವರ ಸಿಟ್ಟಿಗೆ ಕಾರಣ ಎನ್ನಲಾಗಿದೆ.
ನಿರ್ಮಲಾ ಸೀತಾರಾಮನ್ ಅವರು ಮಲಪನಗುಡಿಯ ವಿಜಯಶ್ರೀ ಹೆರಿಟೇಜ್ ರೆಸಾರ್ಟ್‌ನಲ್ಲಿ ಡಿ.20 ಮತ್ತು 21ರಂದು ಚಿಂತನಾ ಶಿಬಿರ ನಡೆಸುವುದರ ಜತೆಜತೆಗೆ ಅಧಿಕಾರಿಗಳೊಂದಿಗೆ ಹಂಪಿಯ ಸ್ಮಾರಕಗಳನ್ನು ಸಹ ನೋಡಲು ಬಂದಿದ್ದರು. ಆಗ ಅವರಿಗೆ ಹಲವೆಡೆ ಸ್ವಚ್ಛತೆಯ ಕೊರತೆ ಕಾಣಿಸಿತ್ತು.
ಸಚಿವರು ಸ್ಚಚ್ಛತೆ ಕೆಲಸಗಾರರು, ಹಂಪಿಗೆ ಭೇಟಿ ನೀಡಿದ್ದ ಪ್ರವಾಸಿಗರನ್ನು ಮಾತನಾಡಿಸಿದ್ದರು. ಆಗ ಅವರು ನೇರವಾಗಿ ಅಧಿಕಾರಗಳನ್ನು ತರಾಟೆಗೆ ತೆಗೆದುಕೊಂಡಿರಲಿಲ್ಲ, ಆದರೆ ದೆಹಲಿಗೆ ಹೋದ ಬಳಿಕ ಎಲ್ಲಿಗೆ ಬಿಸಿ ಮುಟ್ಟಿಸಬೇಕೋ ಅಲ್ಲಿಗೆ ಬಿಸಿ ಮುಟ್ಟಿಸಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲೇ ಹಂಪಿಯಲ್ಲಿ ಸ್ವಚ್ಛತೆ, ಸ್ಮಾರಕಗಳ ನಿರ್ವಹಣೆ ಕೊರತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.