ಮಗುವಿಗೆ ಪಲ್ಸ್ ಪೊಲಿಯೊ ಹಾಕಿದ ನಿರ್ಮಲಾ ಸೀತಾರಾಮನ್
- ಪ್ರಜಾವಾಣಿ ಚಿತ್ರ
ಪಲ್ಸ್ ಪೋಲಿಯೊ, ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ‘
ಪ್ರಜಾವಾಣಿ ವಾರ್ತೆ
ಹೊಸಪೇಟೆ (ವಿಜಯನಗರ): ವಿಜಯನಗರ ಸಾಮ್ರಾಜ್ಯ ಒಂದು ಕಾಲಕ್ಕೆ ಇಡೀ ಜಗತ್ತಿನ ಗಮನ ಸೆಳೆಯುವ ರೀತಿಯಲ್ಲಿ ಸಂಪದ್ಭರಿತವಾಗಿತ್ತು, ಸಾಮ್ರಾಜ್ಯದಲ್ಲಿ ಜನರೂ ನೆಮ್ಮದಿಯಿಂದ ಇದ್ದರು. ಅದರ ಪ್ರೇರಣೆಯಲ್ಲೇ ದೇಶ ಇಂದು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ ಎಂದು ಕೇಂದ್ರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕಮಲಾಪುರದ ಹಂಪಿ ವಿಶ್ವಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರದ (ಹವಾಮ) ಆವರಣದಲ್ಲಿ ಭಾನುವಾರ ಗಿಡ ನೆಟ್ಟು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2047ರ ವೇಳೆಗೆ ದೇಶವು ಸಂಪದ್ಭರಿತ ದೇಶವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ, ಅದಕ್ಕೆ ಪ್ರೇರಣೆ ವಿಜಯನಗರ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.
‘ಎಲ್ಲರ ಅಭಿವೃದ್ಧಿ ವಿಜಯನಗರ ಕಾಲದ ರಾಜರ ಗುರಿಯಾಗಿತ್ತು. ಸಾಮ್ರಾಜ್ಯ ಸಂಪದ್ಭರಿತವಾಗಿದ್ದರೆ ಜನರೂ ಖುಷಿಯಿಂದ ಇರುತ್ತಾರೆ ಎಂಬುದು ವಿಜಯನಗರ ಅರಸರ ಕಾಳಜಿಯಾಗಿತ್ತು. ಇದೇ ಹಾದಿಯನ್ನು ಪ್ರಧಾನಿ ಮೋದಿ ಅವರೂ ತುಳಿದಿದ್ದಾರೆ. ಇದಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಮತ್ತು ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಶ್ರಮಿಸುತ್ತಿದ್ದಾರೆ. ಸಂಪದ್ಭರಿತ ದೇಶವನ್ನಾಗಿ ರೂಪಿಸಿ ಜನರು ಖುಷಿಯಿಂದ, ನೆಮ್ಮದಿಯಿಂದ ಬದುಕುವಂತೆ ಮಾಡುವ ಸಲುವಾಗಿಯೇ ಈ ಎಲ್ಲ ಕೆಲಸಗಳು ನಡೆಯುತ್ತಿವೆ’ ಎಂದು ಸಚಿವೆ ನಿರ್ಮಲಾ ಹೇಳಿದರು.
‘ಬಜೆಟ್ ಕುರಿತಂತೆ ಹಾಗೂ ದೇಶದ ಆರ್ಥಿಕ ಸ್ಥಿತಿಗತಿ ಕುರಿತಂತೆ ಎರಡು ವರ್ಷಗಳಿಗೆ ಒಮ್ಮೆ ಚಿಂತನ ಶಿಬಿರ ನಡೆಯುತ್ತದೆ, ಈ ಬಾರಿ ಅದನ್ನು ಹಂಪಿಯಲ್ಲಿ ನಡೆಸಿರುವುದಕ್ಕೆ ನಮಗೆ ಬಹಳ ಖುಷಿಯಾಗಿದೆ. ನನ್ನ ಜತೆಗೆ ಇಲಾಖೆಯ 120ಕ್ಕೂ ಅಧಿಕ ಅಧಿಕಾರಿಗಳು ಬಂದಿದ್ದಾರೆ. ಕಾರ್ಪೊರೇಟ್ ವ್ಯವಹಾರ ಖಾತೆ ರಾಜ್ಯ ಸಚಿವ ಹರ್ಷ ಮಲ್ಹೋತ್ರಾ ಸಹಿತ ಇಲ್ಲಿದ್ದಾರೆ. ಎಲ್ಲರೂ ವಿಶ್ವ ಪಾರಂಪರಿಕ ತಾಣ ಹಂಪಿಯನ್ನು ನೋಡಿ ಬಹಳ ಪ್ರೇರಿತರಾಗಿದ್ದಾರೆ’ ಎಂದರು.
‘ನೀವು ಚಿಂತನ ಶಿಬಿರದಲ್ಲಿ ಪಾಲ್ಗೊಂಡರಷ್ಟೇ ಸಾಲದು, ಇಲ್ಲಿ ನಿಮ್ಮ ಹೆಜ್ಜೆಗುರುತನ್ನು ಬಲವಾಗಿ ಊರಬೇಕು ಎಂದು ನಾನು ಅಧಿಕಾರಿಗಳಿಗೆ ಹೇಳಿದೆ, ಅದೇ ಕಾರಣಕ್ಕೆ ಅವರೆಲ್ಲರೂ ಇಲ್ಲಿಗೆ ಗಿಡ ನೆಡುವ ಕಾರ್ಯಕ್ರಮಕ್ಕೆ ಬಂದಿದ್ದಾರೆ ಹಾಗೂ ಅವರೆಲ್ಲರೂ ತಮ್ಮ ಹೆಸರಲ್ಲಿ ಒಂದೊಂದು ಗಿಡವನ್ನು ಇಲ್ಲಿ ನೆಟ್ಟಿದ್ದಾರೆ. ದೇಶದ ಭವಿಷ್ಯ ಇರುವುದು ಹಸಿರಿನಲ್ಲಿ, ಹಸಿರನ್ನು ಉಳಿಸುವ ಕೆಲಸ ಆಗಬೇಕು ಎಂಬ ಸಂದೇಶ ಈ ವಿಶ್ವಪಾರಂಪರಿಕ ತಾಣದಿಂದ ರವಾನೆಯಾಗಬೇಕಾಗಿದೆ’ ಎಂದು ಸಚಿವರು ಹೇಳಿದರು.
ಪೋಲಿಯೊ ನಿರ್ಮೂಲನೆ ಅಗತ್ಯ: ಆರೋಗ್ಯ ಇಲಾಖೆಯ ಜತೆಗೆ ಸಾರ್ವಜನಿಕರು ಸಹಕರಿಸಿದ್ದರಿಂದ ದೇಶದಿಂದ ಇಂದು ಪೋಲಿಯೊ ನಿರ್ಮೂಲನೆ ಆಗಿದೆ, ಅದು ಮತ್ತೆ ಬರಬಾರದು ಎಂಬ ಕಾರಣಕ್ಕೆ ಸಾರ್ವತ್ರಿಕ ಪಲ್ಸ್ ಪೋಲಿಯೊ ಅಭಿಯಾನ ನಡೆಯುತ್ತಿದೆ, ಈ ಅಭಿಯಾನದಲ್ಲಿ ತೊಡಗಿರುವ ವೈದ್ಯಕೀಯ, ಅರೆವೈದ್ಯಕೀಯ ಹಾಗೂ ಇತರ ಸಿಬ್ಬಂದಿಗೆ ನಾವೆಲ್ಲ ಸಹಕಾರ ನೀಡಬೇಕಾಗಿದೆ ಎಂದು ಸಚಿವೆ ನಿರ್ಮಲಾ ಹೇಳಿದರು.
ಸಂಸದ ಇ.ತುಕಾರಾಂ, ಶಾಸಕರಾಧ ಎಚ್.ಆರ್.ಗವಿಯಪ್ಪ, ಡಾ.ಎನ್.ಟಿ.ಶ್ರೀನಿವಾಸ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್‌ಪಿ ಎಸ್.ಜಾಹ್ನವಿ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ, ಡಿಸಿಎಫ್ ಎಚ್.ಅನುಪಮಾ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ಇತರರು ಇದ್ದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ಸತತ ಎರಡನೇ ದಿನವಾದ ಭಾನುವಾರ ಸಹ ಹಂಪಿ ಸಮೀಪದ ವಿಜಯಶ್ರೀ ಹರಿಟೇಜ್‌ನಲ್ಲಿ ಚಿಂತನ ಶಿಬಿರ ಆರಂಭವಾಗಿದೆ. ಸಂಜೆಯವರೆಗೂ ಇದು ನಡೆಯಲಿದ್ದು, ಬಜೆಟ್ ಕುರಿತಂತೆ ಸಹ ವಿವರವಾದ ಚರ್ಚೆ ನಡೆಯುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.