ADVERTISEMENT

ಬೀರಬ್ಬಿ ಗ್ರಾಮಸ್ಥರಿಗೆ ಆರೋಗ್ಯ ಸೇವೆ ದುಸ್ತರ

ಪ್ರಾಥಮಿಕ ಆರೋಗ್ಯ ಕೇಂದ್ರದ ಬೇಡಿಕೆಗೆ ಸಿಗದ ಸ್ಪಂದನೆ

ಕೆ.ಸೋಮಶೇಖರ
Published 2 ಮೇ 2025, 4:32 IST
Last Updated 2 ಮೇ 2025, 4:32 IST
ಬೀರಬ್ಬಿ ಗ್ರಾಮದ ರೋಗಿಯೊಬ್ಬರನ್ನು ಚಿಕಿತ್ಸೆಗಾಗಿ ಮೋಟಾರ್ ಬೈಕ್‌ನಲ್ಲಿ ಕರೆದೊಯ್ಯಲಾಯಿತು
ಬೀರಬ್ಬಿ ಗ್ರಾಮದ ರೋಗಿಯೊಬ್ಬರನ್ನು ಚಿಕಿತ್ಸೆಗಾಗಿ ಮೋಟಾರ್ ಬೈಕ್‌ನಲ್ಲಿ ಕರೆದೊಯ್ಯಲಾಯಿತು   

ಹೂವಿನಹಡಗಲಿ: ತಾಲ್ಲೂಕಿನ ಮೂಲೆಕಟ್ಟಿನ ಗ್ರಾಮ ಬೀರಬ್ಬಿ ಸುತ್ತಮುತ್ತಲ ಗ್ರಾಮಗಳ ಜನರು ಸರ್ಕಾರಿ ಆರೋಗ್ಯ ಸೇವೆ ಪಡೆಯಲು ಪರದಾಡುವಂತಾಗಿದೆ.

ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಬೀರಬ್ಬಿ ಗ್ರಾಮ 2,000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಪಂಚಾಯಿತಿ ವ್ಯಾಪ್ತಿಯ ಎಂಟು ಗ್ರಾಮಗಳು ನೇರ ಸಂಪರ್ಕವಿಲ್ಲದ ಮೂಲೆಕಟ್ಟಿನ ಹಳ್ಳಿಗಳಾಗಿವೆ. ಬೀರಬ್ಬಿ ಬಳಿ ಮೈಲಾರ ಸಕ್ಕರೆ ಕಾರ್ಖಾನೆ ಇದೆ. ಕಬ್ಬು ಅರೆಯುವ ಋತುವಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಾರೆ.

ಈ ಎಲ್ಲ ಗ್ರಾಮಗಳ ಜನರು ಸರ್ಕಾರಿ ಆರೋಗ್ಯ ಸೇವೆ ಪಡೆಯಲು 12 ಕಿ.ಮೀ. ದೂರದ ಮಾಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕಿದೆ. ಮಾಗಳಕ್ಕೆ ನೇರ ಸಾರಿಗೆ ಸೌಕರ್ಯವಿಲ್ಲದೇ ಅನಾರೋಗ್ಯಪೀಡಿತರು ತೊಂದರೆ ಅನುಭವಿಸುವಂತಾಗಿದೆ.

ADVERTISEMENT

‘ತಾಲ್ಲೂಕು ಕೇಂದ್ರದಿಂದ 25 ಕಿ.ಮೀ. ದೂರದಲ್ಲಿರುವ ಬೀರಬ್ಬಿ ಸುತ್ತಮುತ್ತಲ ಗ್ರಾಮಗಳನ್ನು ಆರೋಗ್ಯ ಇಲಾಖೆ ಮಾಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರ್ಪಡೆ ಮಾಡಿದೆ. ಗ್ರಾಮದವರು ಹತ್ತಿರದ ಹಿರೇಹಡಗಲಿ ಆರೋಗ್ಯ ಕೇಂದ್ರಕ್ಕೆ ಹೋದರೆ ಚಿಕಿತ್ಸೆ ನೀಡದೇ ಮಾಗಳಕ್ಕೆ ಹೋಗಿ ಎನ್ನುತ್ತಾರೆ. ಅಲ್ಲಿಗೆ ತೆರಳಲು ಬಸ್ ಸೌಕರ್ಯವಿಲ್ಲ. ಮೋಟಾರ್ ಬೈಕ್ ಇದ್ದವರು ಮಾತ್ರ ಅಲ್ಲಿಗೆ ಹೋಗುತ್ತಾರೆ. ಹೀಗಾಗಿ ಬೀರಬ್ಬಿ ಗ್ರಾಮದ ಬಡವರು, ಕಾರ್ಮಿಕರಿಗೆ ಆರೋಗ್ಯ ಸೇವೆ ಮರೀಚಿಕೆಯಾಗಿದ್ದು, ಖಾಸಗಿ ಆಸ್ಪತ್ರೆಗಳಿಗೆ ಹಣ ಸುರಿಯುವಂತಾಗಿದೆ’ ಎಂದು ನಾಗರಿಕ ವೇದಿಕೆ ಸಂಚಾಲಕ ಜಿ.ಮಲ್ಲಿಕಾರ್ಜುನ ಹೇಳಿದರು.

‘ಬೀರಬ್ಬಿ ಸಕ್ಕರೆ ಕಾರ್ಖಾನೆಯ ಮಾಲಿನ್ಯದಿಂದ ಈ ಭಾಗದ ಜನರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಇಲ್ಲಿನ ಗಾಳಿ, ನೀರು ಅಶುದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರಿಗೆ ಕೆಮ್ಮು, ನೆಗಡಿ, ಕಫ, ಜ್ವರಬಾಧೆ ಹೆಚ್ಚಾಗಿದೆ. ವೃದ್ದರು, ಗರ್ಭಿಣಿಯರು, ಹಾವು ಕಡಿತದಂತಹ ತುರ್ತು ಚಿಕಿತ್ಸೆಯ ಅಗತ್ಯ ಇರುವವವರಿಗೆ ತಕ್ಷಣ ಚಿಕಿತ್ಸೆ ದೊರೆಯದೇ ಸಂಕಷ್ಟ ಅನುಭವಿಸುವಂತಾಗಿದೆ.

‘ಬೀರಬ್ಬಿ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವಂತೆ ಶಾಸಕರು, ಜಿಲ್ಲಾಧಿಕಾರಿಗಳಿಗೆ ದಶಕದಿಂದ ಮನವಿ ಸಲ್ಲಿಸುತ್ತಿದ್ದರೂ ಯಾರೂ ಸ್ಪಂದಿಸುತ್ತಿಲ್ಲ. ಸರ್ಕಾರ ತಕ್ಷಣ ಆಸ್ಪತ್ರೆ ಮಂಜೂರು ಮಾಡಬೇಕು’ ಎಂದು ಗ್ರಾಮಸ್ಥರಾದ ಗುರುಸ್ವಾಮಿ, ಡಿ.ಷಣ್ಮುಖ, ಚಿದಾನಂದ ಆಗ್ರಹಿಸಿದ್ದಾರೆ.

ಎರಡು ಸಾವಿರಕ್ಕೂ ಅಧಿಕ ಜನಸಂಖ್ಯೆಯ ಗ್ರಾಮ ಸಕ್ಕರೆ ಕಾರ್ಖಾನೆಯಿಂದ ಮಾಲಿನ್ಯ, ಅನಾರೋಗ್ಯ ಅಧಿಕ ಚಿಕಿತ್ಸೆಗೆ 12 ಕಿ.ಮೀ. ದೂರದ ಮಾಗಳಕ್ಕೆ ತೆರಳುವ ಅನಿವಾರ್ಯತೆ
ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಾರ ಹೊಸ ಪಿಎಚ್ ಸಿ ಮಂಜೂರಾತಿ ಸಾಧ್ಯತೆ ಇಲ್ಲ. ಇರುವ ವ್ಯವಸ್ಥೆಯಲ್ಲೇ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸೂಚಿಸುವೆ
ಡಾ. ಎಲ್‌.ಆರ್‌.ಶಂಕರ್‌ ನಾಯ್ಕ್‌ ಡಿಎಚ್‌ಒ ವಿಜಯನಗರ
ಬೀರಬ್ಬಿ ಗ್ರಾಮಕ್ಕೆ ಆಸ್ಪತ್ರೆ ಮಂಜೂರಾತಿ ಕೋರಿ ದಶಕದಿಂದ ಮನವಿ ಸಲ್ಲಿಸುತ್ತಿದ್ದೇವೆ. ಕನಿಷ್ಠ ಎಎನ್ಎಂ ಕೇಂದ್ರವನ್ನಾದರೂ ನೀಡಿಲ್ಲ. ಈ ಕುರಿತು ಹೋರಾಟ ರೂಪಿಸುತ್ತೇವೆ
ರಹಮತ್ ಬೀರಬ್ಬಿ ನಾಗರಿಕ ವೇದಿಕೆ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.