ಹೊಸಪೇಟೆ (ವಿಜಯನಗರ): ನಗರದ ಚಿತ್ರಮಂದಿರಗಳು ಅಗತ್ಯದ ನಿರ್ವಹಣೆಗೆ ಸಂಬಂಧಿಸಿದಂತೆ ಕೆಲವು ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದಿಲ್ಲದ ಕಾರಣಕ್ಕೆ ವಾರದಿಂದೀಚೆಗೆ ಜಿಲ್ಲಾಡಳಿತ ಅವುಗಳನ್ನು ಬಂದ್ ಮಾಡಿಸಿದೆ.
ಗೌರಿ ಗಣೇಶ ಹಬ್ಬದ ರಜಾ ಸಮಯದಲ್ಲಿ ಮನರಂಜನೆಗೆ ಖೋತಾ ಆಗಿದ್ದಕ್ಕೆ ಜನ ಬೇಸರಪಟ್ಟರೂ, ಸುರಕ್ಷತೆ, ಸೌಲಭ್ಯದ ದೃಷ್ಟಿಯಿಂದ ಜಿಲ್ಲಾಡಳಿತ ಮಾಡಿದ್ದು ಒಳ್ಳೆಯ ಕೆಲಸವೇ ಎಂದು ಹಲವರು ಹೇಳಿಕೊಂಡಿದ್ದಾರೆ.
ನಗರದಲ್ಲಿ ನಾಲ್ಕು ಚಿತ್ರಮಂದಿರಗಳಿದ್ದು, ಜನಪ್ರಿಯ ಸಿನಿಮಾ ‘ಸು ಫ್ರಂ ಸೋ’ ಪ್ರದರ್ಶನಗೊಳ್ಳುತ್ತಿದ್ದ ಲಕ್ಷ್ಮಿ ಥಿಯೇಟರ್ ಸಹ ಬಂದ್ ಆಗಿರುವ ಚಿತ್ರಮಂದಿರಗಳಲ್ಲಿ ಸೇರಿದೆ. ತಮ್ಮ ಟಾಕೀಸ್‌ಗಳ ಕುರಿತಂತೆ ಲೋಕೋಪಯೋಗಿ, ಅಗ್ನಿಶಾಮಕ, ಪೊಲೀಸ್, ನಗರಸಭೆಗಳಿಂದ ಮೂರು ವರ್ಷಗಳಿಗೊಮ್ಮೆ ಪರಿಶೀಲನೆಗೆ ಒಳಪಡಿಸಿ ಎನ್‌ಒಸಿ ಪಡೆಯಬೇಕಿರುವುದು ಕಡ್ಡಾಯವಾಗಿದ್ದು, ಅದನ್ನು ಮಾಡದೆ ಸಾರ್ವಜನಿಕರ ಜೀವ, ಸುರಕ್ಷತೆ, ಆರೋಗ್ಯದ ಕಾಳಜಿಯನ್ನು ಕಡೆಗಣಿಸಲಾಗುತ್ತಿದೆ ಎಂಬ ಕಾರಣಕ್ಕೆ ಜಿಲ್ಲಾಡಳಿತ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
‘ನಗರದ ಚಿತ್ರಮಂದಿರಗಳು ಮಾತ್ರವಲ್ಲ, ಜಿಲ್ಲೆಯ ಇತರ ಕಡೆಗಳಲ್ಲಿನ ಚಿತ್ರಮಂದಿರಗಳೂ ಕಾಲಕಾಲಕ್ಕೆ ಎನ್‌ಒಸಿ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ. ಹೀಗಾಗಿ ಈ ನಿಯಮ ಪಾಲಿಸದ ಇತರ ತಾಲ್ಲೂಕುಗಳ ಚಿತ್ರಮಂದಿರಗಳಿಗೂ ನೋಟಿಸ್ ನೀಡಲಾಗಿದೆ. ಹೊಸಪೇಟೆಯ ಚಿತ್ರಮಂದಿರಗಳಿಗೆ 20 ದಿನದ ಹಿಂದೆಯೇ ನೋಟಿಸ್ ನೀಡಲಾಗಿತ್ತು, ಅದಕ್ಕೆ ಅವುಗಳು ಸ್ಪಂದಿಸದ ಕಾರಣ ಚಿತ್ರಮಂದಿರ ಬಂದ್ ಮಾಡಿಸಿದ್ದೇವೆ. ಎನ್‌ಒಸಿ ಒದಗಿಸಿದರೆ ಒಂದೇ ಗಂಟೆಯಲ್ಲಿ ಬಾಗಿಲು ತೆರೆಯಲು ಅವಕಾಶ ನೀಡುತ್ತೇವೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮೂವರು ಅರ್ಜಿ ಹಾಕಿದ್ದಾರೆ: ‘ನಗರದಲ್ಲಿನ ನಾಲ್ಕು ಚಿತ್ರಮಂದಿರಗಳ ಪೈಕಿ ಮೂರು ಚಿತ್ರಮಂದಿರಗಳ ಮಾಲೀಕರು ಎನ್‌ಒಸಿಗೆ ಅರ್ಜಿ ಸಲ್ಲಿಸಿದ್ದಾರೆ. ಅದರಂತೆ ಸ್ಥಳ ಪರಿಶೀಲನೆ ನಡೆಸಿ ಕೆಲವು ಅಗತ್ಯದ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ವರದಿಯನ್ನು ಮೇಲಧಿಕಾರಿಕಾರಿಗಳಿಗೆ ಸಲ್ಲಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವಿ ನಾಯ್ಕ್ ತಿಳಿಸಿದರು.
ಚಿತ್ರಮಂದಿರಗಳು 30ರಿಂದ 40 ವರ್ಷ ಹಳೆಯದಾಗಿದ್ದರೂ ಶಿಥಿಲಾವಸ್ಥೆಗೆ ತಲುಪಿಲ್ಲ. ಆದರೆ ಶೌಚಾಲಯ ನಿರ್ವಹಣೆ ಸರಿ ಇಲ್ಲದಿರುವುದನ್ನು ಗಮನಿಸಲಾಗಿದೆ. ಕೆಲವು ಸೀಟುಗಳು ಸರಿ ಇಲ್ಲ, ಇವುಗಳನ್ನು ಸರಿಪಡಿಸಲು ಸೂಚಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ನಗರದಲ್ಲಿವೆ ನಾಲ್ಕು ಚಿತ್ರಮಂದಿರಗಳು ಶೌಚಾಲಯ, ನೀರಿನ ಸೌಲಭ್ಯ ಕೊರತೆ ಶೀಘ್ರದಲ್ಲೇ ಮತ್ತೆ ತೆರೆಯುವ ಸಾಧ್ಯತೆ
ಜನರ ಜೀವ ಆರೋಗ್ಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗದು. ಚಿತ್ರಮಂದಿರಗಳು ಅಗತ್ಯದ ಸುರಕ್ಷತಾ ಸೌಲಭ್ಯಗಳನ್ನು ಹಾಗೂ ಸ್ವಚ್ಛತೆ ಕಾಪಾಡಿಕೊಂಡಿರಬೇಕುಎಂ.ಎಸ್.ದಿವಾಕರ್ ಜಿಲ್ಲಾಧಿಕಾರಿ
ದುಡ್ಡು ವಸೂಲಿ ಆರೋಪ
ಜನರ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಸ್ವಾಗತಾರ್ಹ. ಚಿತ್ರಮಂದಿರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕಾಯಂ ಸಿಬ್ಬಂದಿಯನ್ನೂ ನಿಯೋಜಿಸುತ್ತಿಲ್ಲ. ನೀರಿನ ಬಾಟಲ್‌ಗೆ ₹20ರ ಬದಲಿಗೆ ₹30 ಅಥವಾ ಅದಕ್ಕಿಂತ ಹೆಚ್ಚು ಪಡೆಯಲಾಗುತ್ತಿದೆ. ₹10ರ ಕುರುಕುರು ಆಹಾರ ಪೊಟ್ಟಣಕ್ಕೆ ₹30 ಪಡೆಯಲಾಗುತ್ತಿದೆ. ಸಿನಿಮಾ ಟಿಕೆಟ್ ದರ ಬೇಕಾಬಿಟ್ಟಿ ಏರಿಕೆ ಆಗಿರುತ್ತದೆ. ಶೌಚಾಲಯಗಳು ಸ್ವಚ್ಛವಾಗಿರುವುದೇ ಇಲ್ಲ. ಜನ ಒಂದೆಡೆ ಸೇರುವಾಗ ಅವರ ಅನಿವಾರ್ಯತೆಯನ್ನು ಹೀಗೆ ದುರ್ಬಳಕೆ ಮಾಡಿಕೊಳ್ಳಬಾರದು ಐದೋ ಹತ್ತೋ ರೂಪಾಯಿ ಹೆಚ್ಚು ಕೇಳಿದರೆ ನಡೆಯುತ್ತದೆ ಅದಕ್ಕಿಂತ ಹೆಚ್ಚು ಸುಲಿಗೆ ಮಾಡಿದರೆ ಒಪ್ಪಲಾಗದು ಎಂದು ಚಿತ್ರವಿತರಕರೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.