ADVERTISEMENT

ಗ್ರಾಮ ದತ್ತು ಯೋಜನೆಗೆ ಗ್ರಹಣ: ಹೆಸರಿಗಷ್ಟೇ ಸೀಮಿತವಾಯಿತೇ ಹಂಪಿ ವಿವಿ ಯೋಜನೆ?

ಶಶಿಕಾಂತ್ ಎಸ್. ಶೆಂಬೆಳ್ಳಿ
Published 11 ಡಿಸೆಂಬರ್ 2021, 7:06 IST
Last Updated 11 ಡಿಸೆಂಬರ್ 2021, 7:06 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ವಿಜಯನಗರ (ಹೊಸಪೇಟೆ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹತ್ವಕಾಂಕ್ಷಿ ಗ್ರಾಮ ದತ್ತು ಯೋಜನೆ ಉದ್ಘಾಟನೆಗಷ್ಟೇ ಸೀಮಿತವಾಗಿದೆ.

2019ರಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಮಾತುಗಳು ಕೇಳಿ ಬರುತ್ತಿವೆ. ಆದರೆ, ಎರಡು ವರ್ಷ ಕಳೆದರೂ ಯಾವುದೇ ಹೇಳಿಕೊಳ್ಳುವಂಥ ಪ್ರಗತಿಯಾಗಿಲ್ಲ.

ಈ ಯೋಜನೆಗೆ ತಾಲ್ಲೂಕಿನ ಮಲಪನಗುಡಿ, ಪಾಪಿನಾಯಕನಹಳ್ಳಿ, ಸೀತಾರಾಂ ತಾಂಡಾ, ಕಡ್ಡಿರಾಂಪುರ ಹಾಗೂ ಇಂಗಳಗಿ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ತಾಲ್ಲೂಕಿನ ಮಲಪನಗುಡಿಯಲ್ಲಿ ಉದ್ಘಾಟನಾ ಸಮಾರಂಭ ನಡೆಸಲಾಗಿದೆ. ಸೀತಾರಾಂ ತಾಂಡಾದಲ್ಲಿ ಎನ್‌ಎಸ್ಎಸ್‌ ಘಟಕದಿಂದ ಸ್ವಚ್ಛತಾ ಶಿಬಿರ ಕೈಗೊಳ್ಳಲಾಗಿದೆ. ಮಲಪನಗುಡಿ ಪಂಚಾಯಿತಿ ಕಚೇರಿ ಎದುರು ದತ್ತು ಯೋಜನೆಯ ಫಲಕ ಕೂಡ ಹಾಕಲಾಗಿದೆ. ಆದರೆ, ಬೇರೆ ಗ್ರಾಮಗಳಲ್ಲಿ ಒಂದೇ ಒಂದು ಕಾರ್ಯಕ್ರಮ ಸಂಘಟಿಸಿಲ್ಲ.

ADVERTISEMENT

ಕನ್ನಡ ವಿಶ್ವವಿದ್ಯಾಲಯದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕಾರ್ಯಾಗಾರ, ಸ್ವಚ್ಛತಾ ಶಿಬಿರ, ಇತಿಹಾಸದ ಪರಿಚಯ, ವೈದ್ಯಕೀಯ ಶಿಬಿರ ನಡೆಸಿ ಆ ಗ್ರಾಮಗಳೊಂದಿಗೆ ಉತ್ತಮ ಸಂಬಂಧ ಹೊಂದುವುದು ಗ್ರಾಮ ದತ್ತು ಯೋಜನೆಯ ಮುಖ್ಯ ಗುರಿ.

ಮೌಢ್ಯತೆ, ಕಂದಾಚಾರ, ಅಸಮಾನತೆ, ಲಿಂಗ ತಾರತಮ್ಯ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ವರದಕ್ಷಿಣೆ ಕಿರುಕುಳ, ಕೃಷಿ ಸೇರಿದಂತೆ ಹಲವು ವಿಚಾರಗಳ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸುವುದು ಸೇರಿದೆ. ಆದರೆ, ಆ ನಿಟ್ಟಿನಲ್ಲಿ ಯಾವುದೇ ಕೆಲಸಗಳು ಆಗಿಲ್ಲ. ದತ್ತು ಯೋಜನೆಗೆ ಆಯ್ಕೆಯಾದ ಗ್ರಾಮಗಳ ಕುರಿತು ಅಲ್ಲಿನ ಹೆಚ್ಚಿನ ಗ್ರಾಮಸ್ಥರಿಗೆ ಮಾಹಿತಿಯೇ ಇಲ್ಲ.

‘ದತ್ತು ಯೋಜನೆಯ ಉದ್ದೇಶ ಬಹಳ ಉತ್ತಮವಾದುದು. ಆದರೆ, ಘೋಷಣೆಗಷ್ಟೇ ಸೀಮಿತವಾಗಿದೆ. ವಿಶ್ವವಿದ್ಯಾಲಯದ ಹತ್ತಿರದಲ್ಲೇ ಇರುವ ನಮ್ಮ ಗ್ರಾಮದಲ್ಲಿ ಇದುವರೆಗೆ ಒಂದೇ ಒಂದು ಕಾರ್ಯಕ್ರಮ ಮಾಡಿಲ್ಲ. ಇಚ್ಛಾಶಕ್ತಿಯ ಕೊರತೆ ಎದ್ದು ಕಾಣಿಸುತ್ತಿದೆ’ ಎಂದು ಪಾಪಿನಾಯಕನಹಳ್ಳಿಯ ಪದವೀಧರ ಯುವಕ ಮಾರುತಿ ಹೇಳಿದರು.

‘ನಮ್ಮ ಗ್ರಾಮವನ್ನು ಕನ್ನಡ ವಿಶ್ವವಿದ್ಯಾಲಯವು ದತ್ತು ಪಡೆದಿರುವ ವಿಚಾರವೇ ಗೊತ್ತಿಲ್ಲ. ನಿಮ್ಮಿಂದ ಈಗ ಗೊತ್ತಾಗಿದೆ. ವಿಶ್ವವಿದ್ಯಾಲಯದ ಯಾರೊಬ್ಬರೂ ನಮ್ಮ ಊರಿಗೆ ಬಂದು ಕಾರ್ಯಕ್ರಮ ಮಾಡಿಲ್ಲ. ಇತರೆ ಸರ್ಕಾರಿ ಯೋಜನೆಗಳಂತೆ ಇದನ್ನು ಕೂಡ ಘೋಷಿಸಿರಬಹುದು’ ಎಂದು ಇಂಗಳಗಿಯ ಯುವಕ ಉದಯಕುಮಾರ ತಿಳಿಸಿದರು.

ದತ್ತು ಪಡೆದ ಗ್ರಾಮಗಳು

‌ಮಲಪನಗುಡಿ

ಸೀತಾರಾಂ ತಾಂಡಾ

ಪಾಪಿನಾಯಕನಹಳ್ಳಿ

ಕಡ್ಡಿರಾಂಪುರ

ಇಂಗಳಗಿ

ಇನ್ನೂ ಆರಂಭವಾಗದ ಆಕಾಶವಾಣಿ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಸಮುದಾಯ ಆಕಾಶವಾಣಿ ಕೇಂದ್ರ ಇನ್ನೂ ಆರಂಭವಾಗಿಲ್ಲ.

2019ರಲ್ಲೇ ಈ ಯೋಜನೆ ಘೋಷಿಸಲಾಗಿತ್ತು. ಆದರೆ, ಎರಡು ವರ್ಷ ಕಳೆದರೂ ಆರಂಭಗೊಂಡಿಲ್ಲ. ‘ನುಡಿ ಕಟ್ಟಡದಲ್ಲಿ ಸಮುದಾಯ ಆಕಾಶವಾಣಿ ಕೇಂದ್ರ ಆರಂಭಿಸಲಾಗುವುದು. ಟ್ರಾನ್ಸಮೀಟರ್‌ ಅಳವಡಿಸಿ ಶೀಘ್ರದಲ್ಲೇ ಆರಂಭಿಸಲಾಗುವುದು. ಕೊನೆಯ ಹಂತದ ಕೆಲಸ ನಡೆಯುತ್ತಿದೆ’ ಎಂದು ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.