
ಹೊಸಪೇಟೆ (ವಿಜಯನಗರ): ‘ಪ್ರಸ್ತುತ ಶಿಕ್ಷಣ ವ್ಯವಸ್ಥೆ ಪ್ರಯಾಣ ಮಾಡದೆ ಊರು ತಲುಪುವ ಆಸೆಯಂತಾಗಿದೆ. ಇಂದಿನ ದಿನಗಳಲ್ಲಿ ಮಕ್ಕಳ ಆಸಕ್ತಿ ಇಲ್ಲದಿದ್ದರೂ ಅವರಿಗೆ ಶಿಕ್ಷಣವನ್ನು ಒತ್ತಾಯದಿಂದ ನೀಡಲಾಗುತ್ತಿದೆ. ಆದರೆ ಮಕ್ಕಳ ನೈಜ ಆಸಕ್ತಿಯ ಕ್ಷೇತ್ರಕ್ಕೆ ಅವರನ್ನು ಓದಲು ಬಿಡುವುದು ಪಾಲಕರ ಕರ್ತವ್ಯ’ ಎಂದು ಕವಿ, ವಿಮರ್ಶಕ ಒ.ಎಲ್.ನಾಗಭೂಷಣಸ್ವಾಮಿ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಆಯೋಜಿಸಿದ ‘ಆನು ಒಲಿದಂತೆ ಹಾಡುವೆ 2’ ಕಾರ್ಯಕ್ರಮದಲ್ಲಿ ಅವರು ಅನುವಾದದ ತಾತ್ತ್ವಿಕ ಅಂಶಗಳು, ಶಿಕ್ಷಣದ ಸ್ಥಿತಿ ಹಾಗೂ ಮಾನವೀಯ ಭಾವನೆಗಳ ಕುರಿತು ಮಾತನಾಡಿದರು.
‘ಒಂದು ವಸ್ತು ಎಲ್ಲರಿಗೂ ಒಂದೇ ರೀತಿಯಲ್ಲಿ ಕಾಣುವುದಿಲ್ಲ, ಅದನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಅರ್ಥವೂ ಒಂದೇ ರೀತಿಯಲ್ಲಿ ಇರದು, ಇದೇ ತರಹ ಅನುವಾದವೂ ಆಗಿದೆ. ನಮ್ಮದು ಅಲ್ಲದ ಭಾಷೆ ಮತ್ತು ಕಣ್ಣಿನಿಂದ ಲೋಕವನ್ನು ನೋಡುವ ಕಲೆಯೇ ನಿಜವಾದ ಅನುವಾದ. ಭಾಷೆ ಬೇರೆಯಾದರೂ ಮನುಷ್ಯನ ಮೂಲಭೂತ ಭಾವನೆ ಒಂದೇ’ ಎಂದರು.
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟಗಿರಿ ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಮೇಲೆ ಪಾಠಗಳು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತವೆ ಎನ್ನುವುದಕ್ಕಿಂತ, ಇಂತಹ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ನಿಜವಾದ ಆಸಕ್ತಿಯನ್ನು ಹೆಚ್ಚಿಸುತ್ತವೆ. ಓದು-ಬರಹ ಎನ್ನುವುದು ನಮ್ಮನ್ನೇ ನಾವು ಕಂಡುಕೊಳ್ಳುವ ಪ್ರಕ್ರಿಯೆ’ ಎಂದರು.
ಕಥೆಗಾರ ಅಮರೇಶ ನುಗಡೋಣಿ ಅವರು ‘ಒ.ಎಲ್. ನಾಗಭೂಷಣಸ್ವಾಮಿ ಸಾಹಿತ್ಯ ವಿಮರ್ಶೆ’ ಎಂಬ ವಿಶೇಷ ಉಪನ್ಯಾಸ ನೀಡಿದರು. ವಿಮರ್ಶೆ ಮತ್ತು ಸಂಶೋಧನೆಗೆ ಅಪಾರ ಓದು ಅಗತ್ಯ. ಓ.ಎಲ್.ಎನ್. ಅವರು ವಚನ ಸಾಹಿತ್ಯದ ಮೇಲೆ ಕೇವಲ ವಿವರಣೆ ನೀಡಿಲ್ಲ, ವಿಮರ್ಶೆ ಮತ್ತು ಸಂಶೋಧನೆ ನಡೆಸಿದ್ದಾರೆ. ಅವರ ಬರಹಗಳಲ್ಲಿ ಕೃತಿ ನಿಷ್ಠೆ ಮತ್ತು ಪ್ರಜ್ಞಾಪ್ರವಾಹ ತಂತ್ರ ಸ್ಪಷ್ಟವಾಗಿ ಗೋಚರಿಸುತ್ತದೆ. ವಚನಗಳಿಗೆ ಪದಕೋಶ ಅಗತ್ಯ ಎಂದು ಅವರು ಸೂಚಿಸಿದ್ದರು ಎಂದರು.
ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಎನ್.ಎಸ್.ಗುಂಡೂರು ‘ಒ.ಎಲ್. ನಾಗಭೂಷಣಸ್ವಾಮಿ ಅನುವಾದ ಸಾಹಿತ್ಯ’ ಎಂಬ ಉಪನ್ಯಾಸ ನೀಡಿದರು. ಅನುವಾದವು ವ್ಯಾಪಾರವಲ್ಲ, ಅದು ಮೂಲ ಸಾಹಿತ್ಯದ ವ್ಯಾಪ್ತಿಯನ್ನು ವಿಸ್ತರಿಸುವ ಸೃಜನಾತ್ಮಕ ಕ್ರಿಯೆ. ಒ.ಎಲ್.ಎನ್. ಅವರ ದ್ವಿಭಾಷಾ ಸಂವೇದನೆ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಿಂದ ಕನ್ನಡಕ್ಕೆ ವಿಶಾಲ ದೃಷ್ಟಿಕೋನ ನೀಡಿದೆ ಎಂದರು.
ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನಗೌಡ ಎಂ., ಪುನೀತ ಅಪ್ಪು, ಮುಹಮ್ಮದ್ ಝೈನುದ್ದೀನ್, ಎಚ್.ಸಿ. ಅನುಷಾ, ಕನ್ನಡ ವಿಶ್ವವಿದ್ಯಾಲಯದ ಯುವಸಂಶೋಧಕರು ಪಾಲ್ಗೊಂಡರು.
ಪ್ರಾಧ್ಯಾಪಕರ ನೇಮಕದ ಬಗ್ಗೆ ಎರಡು ವರ್ಷಗಳಿಂದ ಸರ್ಕಾರಕ್ಕೆ ಮೇಲಿಂದ ಮೇಲೆ ಮನವಿ ಮಾಡಿದರೂ ಯಾವ ಪ್ರಯೋಜನ ಆಗಿಲ್ಲ. ಹೀಗಾಗಿ ವಿಶ್ವವಿದ್ಯಾಲಯಕ್ಕೆ ಮುಂದಿನ ದಿನಗಳಲ್ಲಿ ಬಹಳಷ್ಟು ಅಪಾಯ ಇದೆಪ್ರೊ.ಡಿ.ವಿ.ಪರಮಶಿವಮೂರ್ತಿ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.