ADVERTISEMENT

ಮರಗಳ ಮಾರಣಹೋಮ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಮೇ 2022, 12:32 IST
Last Updated 18 ಮೇ 2022, 12:32 IST
ರಸ್ತೆ ವಿಸ್ತರಣೆಗೆ ಮರಗಳನ್ನು ಕತ್ತರಿಸಲು ಮುಂದಾಗಿರುವುದನ್ನು ವಿರೋಧಿಸಿ ಪಿಡಿಐಟಿ ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ಹೊಸಪೇಟೆಯ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ರಸ್ತೆ ವಿಸ್ತರಣೆಗೆ ಮರಗಳನ್ನು ಕತ್ತರಿಸಲು ಮುಂದಾಗಿರುವುದನ್ನು ವಿರೋಧಿಸಿ ಪಿಡಿಐಟಿ ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ಹೊಸಪೇಟೆಯ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು   

ಹೊಸಪೇಟೆ (ವಿಜಯನಗರ): ರಸ್ತೆ ವಿಸ್ತರಣೆಗೆ ಮರಗಳ ಮಾರಣ ಹೋಮ ನಡೆಸಲು ಮುಂದಾಗಿರುವುದನ್ನು ವಿರೋಧಿಸಿ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನ (ಪಿಡಿಐಟಿ) ‘ಟೀಮ್‌ ಫಾರ್ ದಿ ನೇಚರ್'ನ ವಿದ್ಯಾರ್ಥಿಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ವಿದ್ಯಾರ್ಥಿಗಳು ಅಮರಾವತಿಯ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ‘ಮರಗಳನ್ನು ಉಳಿಸಿ’, ‘ಮರಗಳನ್ನು ಕತ್ತರಿಸಿದರೆ ನಮ್ಮ ಜೀವನ ಕತ್ತರಿಸಿದಂತೆ’ ಎಂಬ ಬರಹ ಹೊಂದಿದ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಪಾಲ್ಗೊಂಡಿದ್ದರು. ‘ನಿಲ್ಲಿಸಿ, ನಿಲ್ಲಿಸಿ ಮರಗಳ ಮಾರಣ ಹೋಮ ನಿಲ್ಲಿಸಿ’ ಎಂದು ಘೋಷಣೆ ಕೂಗುತ್ತ ಹೆಜ್ಜೆ ಹಾಕಿದರು.

ಬಳಿಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ, ಅಭಿವೃದ್ಧಿಯ ಹೆಸರಿನಲ್ಲಿ ನೂರಾರು ವರ್ಷಗಳ ಹಳೆಯ ಮರಗಳನ್ನು ಕತ್ತರಿಸುವುದು ಸರಿಯಲ್ಲ. ಮರಗಳಿಂದ ನಗರದಲ್ಲಿ ಹಸಿರಿನ ವಾತಾವರಣ ಇದೆ. ಶುದ್ಧ ಗಾಳಿ ಇದೆ. ಹೀಗಿರುವಾಗ ಅವುಗಳನ್ನು ಕಡಿದರೆ ಅದೆಲ್ಲ ಮಾಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ನಗರದ ಮೂರು ಕಡೆಗಳಲ್ಲಿ ಮರಗಳನ್ನು ಕಡಿಯಲು ನಿರ್ಧರಿಸಲಾಗಿದ್ದು, ಈಗಾಗಲೇ ಸಾರ್ವಜನಿಕರಿಂದ ಆಕ್ಷೇಪಣೆ ಕರೆಯಲಾಗಿದೆ. ಕೂಡಲೇ ಈ ಪ್ರಸ್ತಾವ ಕೈಬಿಡಬೇಕು. ಯಥಾಸ್ಥಿತಿಯಲ್ಲಿ ಮರಗಳನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ನಗರದ ಅನಂತಶಯನಗುಡಿಯಿಂದ ಕಮಲಾಪುರ, ಸಾಯಿಬಾಬಾ ವೃತ್ತದಿಂದ ಟಿ.ಬಿ. ಡ್ಯಾಂ ಹಾಗೂ ಬಳ್ಳಾರಿ ರಸ್ತೆಯ ಎಚ್‌ಎಲ್‌ಸಿಯಿಂದ ಇಂಗಳಗಿ ಕ್ರಾಸ್‌ ವರೆಗಿನ ರಸ್ತೆಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಒಟ್ಟು 875 ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ. ಈ ಕುರಿತು ಇತ್ತೀಚೆಗೆ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.