ADVERTISEMENT

ತೈಲ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕೇಂದ್ರದ ವಿರುದ್ಧ ಪ್ರತಿಭಟನೆ

ತೈಲ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 12:14 IST
Last Updated 26 ಫೆಬ್ರುವರಿ 2021, 12:14 IST
ತೈಲ ದರ ಏರಿಕೆ ವಿರೋಧಿಸಿ ಫೆಡರೇಷನ್ ಆಫ್ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್ ಯೂನಿಯನ್ಸ್ ಹಾಗೂ ಚಾಲಕರ ಸಂಘದವರು ಶುಕ್ರವಾರ ಹೊಸಪೇಟೆಯಲ್ಲಿ ಲಾರಿಗೆ ಹಗ್ಗ ಕಟ್ಟಿ ಎಳೆಯುವುದರ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು
ತೈಲ ದರ ಏರಿಕೆ ವಿರೋಧಿಸಿ ಫೆಡರೇಷನ್ ಆಫ್ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್ ಯೂನಿಯನ್ಸ್ ಹಾಗೂ ಚಾಲಕರ ಸಂಘದವರು ಶುಕ್ರವಾರ ಹೊಸಪೇಟೆಯಲ್ಲಿ ಲಾರಿಗೆ ಹಗ್ಗ ಕಟ್ಟಿ ಎಳೆಯುವುದರ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು   

ವಿಜಯನಗರ (ಹೊಸಪೇಟೆ): ತೈಲ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಚಾಲಕರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಫೆಡರೇಷನ್ ಆಫ್ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್ ಯೂನಿಯನ್ಸ್ ಹಾಗೂ ಚಾಲಕರ ಸಂಘಗಳವರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಬಳ್ಳಾರಿ ರಸ್ತೆಯ ಸಂಕ್ಲಾಪುರದಲ್ಲಿ ಸೇರಿದ ಚಾಲಕರು, ಅಲ್ಲಿಂದ ಬಳ್ಳಾರಿ ವೃತ್ತ, ವಡಕರಾಯ ದೇವಸ್ಥಾನ, ಮೇನ್ ಬಜಾರ್ ರಸ್ತೆ, ಗಾಂಧಿ ಸರ್ಕಲ್, ಪುಣ್ಯಮೂರ್ತಿ ವೃತ್ತ, ರೋಟರಿ ವೃತ್ತದ ಮೂಲಕ ‌ತಾಲ್ಲೂಕು ಕಚೇರಿವರೆಗೂ ರ್‍ಯಾಲಿ ನಡೆಸಿದರು. ಆಟೊ ರಿಕ್ಷಾ, ಗೂಡ್ಸ್, ಲಾರಿ ಚಾಲಕರು ಮತ್ತು ಮಾಲೀಕರು, ಲಾರಿಯನ್ನು ಹಗ್ಗದಿಂದ ಎಳೆದು ವಿನೂತನವಾಗಿ ಪ್ರತಿಭಟಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜನಪರ ವೇದಿಕೆ ಅಧ್ಯಕ್ಷ ಡಿ.ವೆಂಕಟರಮಣ ಮಾತನಾಡಿ, ‘ಕೋವಿಡ್‌ ಲಾಕ್‌ಡೌನ್‌ ನಂತರ ಚಾಲಕರ ಜೀವನ ಮತ್ತಷ್ಟು ಹದಗೆಟ್ಟಿದೆ. ಸರ್ಕಾರವು ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಸುತ್ತಲೇ ಇದೆ. ಕೇವಲ ಚಾಲಕರಷ್ಟೇ ಅಲ್ಲ, ಅಡುಗೆ ಸಿಲಿಂಡರ್‌ ದರ ಕೂಡ ಏರಿಸುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ’ ಎಂದರು.

ADVERTISEMENT

‘ಇಂತಹ ಸಂಕಷ್ಟದ ನಡುವೆ ರಾಜ್ಯ ಸರ್ಕಾರವು ಟಿ.ವಿ, ಬೈಕ್ ಇರುವವರ ಪಡಿತರ ಚೀಟಿ ರದ್ದು ಮಾಡಲಾಗುವುದು ಎಂದು ನೀಡಿರುವ ಹೇಳಿಕೆಯಿಂದ ಬಡವರು ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ಅಗತ್ಯ ವಸ್ತುಗಳು, ತೈಲ ಬೆಲೆ ಇಳಿಸಬೇಕು. ಮಾರ್ಚ್ 4ರ ಗಡುವಿನೊಳಗೆ ಸರ್ಕಾರ ಚಾಲಕರ ಬೇಡಿಕೆಗಳನ್ನು ಈಡೇರಿಸದಿದ್ದರೆ ವಿಧಾನಸೌಧ ಚಲೋ ನಡೆಸಲಾಗುವುದು’ ಎಂದು ತಿಳಿಸಿದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ಭಾಸ್ಕರ್ ರೆಡ್ಡಿ ಮಾತನಾಡಿ, ‘ಇಡೀ ದೇಶಾದ್ಯಂತ ಚಾಲಕರ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರವು ರಾಜಕೀಯ ದುರುದ್ದೇಶ ಹೊಂದಿದೆ. ರಾಜಕೀಯವಿಲ್ಲದೇ ಬೆಲೆ ಏರಿಕೆ ಆಗುವುದಿಲ್ಲ. ತೈಲ ಬೆಲೆ ಏರಿಕೆಗೆ ಹಿಂದಿನ ಸರ್ಕಾರ 60 ವರ್ಷದಲ್ಲಿ ಮಾಡಿದ ಸಾಲಗಳೇ ಕಾರಣ ಎಂಬ ನೆಪ ಹೇಳುತ್ತಿದೆ. ಶ್ರೀಲಂಕಾದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹53 ಇದ್ದರೆ, ನಮ್ಮ ದೇಶದಲ್ಲಿ ₹93 ಇದೆ. ತೈಲ ಉತ್ಪನ್ನಗಳನ್ನು ಸಹ ಜಿಎಸ್‌ಟಿ ತೆರಿಗೆ ಅಡಿಯಲ್ಲಿ ತರಬೇಕು’ ಎಂದು ಆಗ್ರಹಿಸಿದರು.

‘ಬಿಜೆಪಿ ಸರ್ಕಾರ ತೈಲ ಕಂಪನಿಗಳಿಗೆ ನಷ್ಟವಾಗುವ ಕಾರಣದಿಂದಲೇ ಜಿಎಸ್‌ಟಿಗೆ ತೈಲ ಉತ್ಪನ್ನಗಳನ್ನು ಸೇರಿಸುತ್ತಿಲ್ಲ. ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ಅಂಬಾನಿ, ಅದಾನಿ ಆದಾಯ ಲಕ್ಷ ಕೋಟಿವರೆಗೂ ಬೆಳೆದಿದೆ. ಆದರೆ ಲಾರಿ ಮಾಲೀಕರು, ಚಾಲಕರು ತಮ್ಮ ವಾಹನಗಳನ್ನು ಮಾರಿ ಬೀದಿಗೆ ಬಂದಿದ್ದಾರೆ. ಈ ಎಲ್ಲಾ ಸಂಕಷ್ಟಗಳನ್ನು ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ’ ಎಂದು ದೂರಿದರು.

ಪ್ರತಿಭಟನೆಯ ನಂತರ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಯುನಿಯನ್ಸ್ ತಾಲ್ಲೂಕು ಅಧ್ಯಕ್ಷ ಕೆ.ಎಂ.ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಯಮುನಪ್ಪ, ಖಜಾಂಚಿ ಎಸ್.ಅನಂತಶಯನ, ಸಂಘಟನಾ ಕಾರ್ಯದರ್ಶಿ ಎಸ್. ವಿಜಯಕುಮಾರ್, ಟಿಪ್ಪರ್ ಮಾಲೀಕರ ಸಂಘದ ಸದಾ ಸೇರಿದಂತೆ ಚಾಲಕರ ಸಂಘಗಳ ಮುಖಂಡರು, ಲಾರಿ ಚಾಲಕರು, ಮಾಲೀಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.