ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಳೆದ ವರ್ಷದ ಪಿಎಚ್.ಡಿ ಕೋರ್ಸಿನ ನೋಟಿಫಿಕೇಶನ್ ಆದರೂ ಸಹ ಅದರ ಫಲಿತಾಂಶವನ್ನು ಪ್ರಕಟಿಸದೇ ಇರುವುದು ಮತ್ತು ಪ್ರಸಕ್ತ ಸಾಲಿನಲ್ಲಿ ಪಿಎಚ್.ಡಿ ಅಧಿಸೂಚನೆ ಮಾಡದೇ ಇರುವುದನ್ನು ವಿರೋಧಿಸಿ ಕುಲಪತಿ ಅವರಿಗೆ ಹೊಸಪೇಟೆಯ ಶ್ರೀ ವಾಲ್ಮೀಕಿ ನಾಯಕ ಪದವೀಧರ ವಿದ್ಯಾವರ್ಧಕ ಸಂಘದಿಂದ ಗುರುವಾರ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಗುಂಡಿ ಮಾರುತಿ ಅವರು ಕುಲಪತಿಗೆ ಪ್ರೊ. ಡಿ.ವಿ. ಪರಮಶಿವಮೂರ್ತಿ ಅವರಲ್ಲಿ ಪದವೀಧರ ಅಭ್ಯರ್ಥಿಗಳ ಆತಂಕವನ್ನು ವಿವರಿಸಿದರು.
‘ಹಂಪಿ ಕನ್ನಡ ವಿಶ್ವವಿದ್ಯಾಲಯವು ಇಡೀ ಪ್ರಪಂಚದಲ್ಲಿ ಭಾಷೆಗಾಗಿ ಸ್ಥಾಪನೆಗೊಂಡ ಏಕೈಕ ವಿಶ್ವವಿದ್ಯಾಲಯವಾಗಿದ್ದು ನಮ್ಮ ನಾಡಿನ ಭಾಷೆಯ, ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾಗಿದೆ. ಹಾಗಾಗಿ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ, ಅದರಲ್ಲೂ ಹೈದರಾಬಾದ್ ಕರ್ನಾಟಕ ಭಾಗದ ಮತ್ತು ಹೊಸಪೇಟೆ ಸುತ್ತಮುತ್ತಲಿನಲ್ಲಿ ಅನೇಕ ಪದವೀಧರ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗುವಂತೆ ಸ್ನಾತಕೋತ್ತರ ವಿಭಾಗದಲ್ಲಿ ವಿವಿಧ ವಿಷಯಗಳ ಬಗ್ಗೆ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಬೇಕು ಮತ್ತು ಪಿಎಚ್.ಡಿ ಅಧಿಸೂಚನೆಯನ್ನು ತ್ವರಿತಗತಿಯಲ್ಲಿ ಮಾಡಿ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಗುಂಡಿ ಮಾರುತಿ ಆಗ್ರಹಿಸಿದರು.
ಆದಷ್ಟು ಬೇಗ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಕುಲಪತಿ ಭರವಸೆ ನೀಡಿದರು.
ಸಂಘದ ಪದಾಧಿಕಾರಿಗಳಾದ ಬಾಣದ ಮುರಳೀಧರ, ಗೋಸಲ ಬಸವರಾಜ್, ನೀರಲಗಿ ಹನುಮಂತ, ವ್ಯಾಸನಕೇರಿ ವ್ಯಾಸ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.